ರಾಜ್ಯ

ಸಾಹಿತ್ಯದಲ್ಲಿ ಹೊಸ ಪರಿಕಲ್ಪನೆ ಹಾಗೂ ಚಿಂತನೆಯನ್ನು ಹುಟ್ಟುಹಾಕಿದವರು ಬರಗೂರು: ಜಿ. ಪರಮೇಶ್ವರ

ಬೆಂಗಳೂರಿನ ಅಂಕಿತ ಪುಸ್ತಕ ಹಾಗೂ ಬುಕ್ ಬ್ರಹ್ಮ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ‘ಕಾಗೆ ಕಾರುಣ್ಯದ ಕಣ್ಣು’ ಆಯ್ದ ಅನುಭವಗಳ ಕಥನ ಕೃತಿ ಲೋಕಾರ್ಪಣಾ ಕಾರ್ಯಕ್ರಮವು ನಗರದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಭಾನುವಾರದಂದು ನಡೆಯಿತು.

ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಾನ್ಯ ಗೃಹ ಸಚಿವ ಜಿ. ಪರಮೇಶ್ವರ ಅವರು, “ಬರಗೂರು ರಾಮಚಂದ್ರಪ್ಪ ಕನ್ನಡ ಸಾಹಿತ್ಯದಲ್ಲಿ ಹೊಸ ಚಿಂತನೆ ಹಾಗೂ ಪರಿಕಲ್ಪನೆಯನ್ನು ಹುಟ್ಟು ಹಾಕಿದವರು. ಅವರು ಸಾಹಿತ್ಯ ಕ್ಷೇತ್ರ ಹೊರತು ಬೇರೆ ಯಾವುದಾದರೂ ಕ್ಷೇತ್ರಕ್ಕೆ ಕಾಲಿಟ್ಟಿದ್ದರೆ ನಮಗೆ ಇಂತಹ ಕೃತಿಗಳು ಸಿಗುತ್ತಿರಲಿಲ್ಲ. ಇವರ ಆತ್ಮಕಥೆ ಸಮಾಜಕ್ಕೆ ಬಹು ದೊಡ್ಡ ಕೊಡುಗೆಯಾಗಿದೆ. ವ್ಯಕ್ತಿಯ ಬದಲಾವಣೆಗೆ ರೂಪಕವಾಗಬಲ್ಲ ಅಂಶ ಹಾಗೂ ಚಿಂತನೆಗಳು ಲೇಖಕರಲಿದ್ದು ಅದನ್ನು ಜನತೆ ಓದಿಕೊಂಡರೆ ಅವರ ಬದುಕಿಗೂ ಉಪಕಾರಿಯಾಗಬಲ್ಲದು,” ಎಂದು ತಿಳಿಸಿದರು.

“ಲೇಖಕರು ಇನ್ನಷ್ಟು ಸಮಾಜದ ಚಿಂತನೆಗಳನ್ನು ನಾವು ಅರ್ಥೈಸಿಕೊಳ್ಳುವಂತೆ ಮಾಡುವಂತಹ ಕೃತಿಗಳನ್ನು ಬರೆಯಲಿ. ತಪ್ಪು ಮಾಡಿದಾಗ ಕಟುವಾಗಿ ಟೀಕಿಸುವಂತಹ ಮನಸ್ಥಿತಿ ಓದುಗರಿಗೆ ಬರಬೇಕು. ಅದಕ್ಕಾಗಿ ನಾವು ಪ್ರಜ್ಞಾವಂತರೆಂದು ಮನೆಯಲ್ಲಿ ಕೂತರೆ ನಡೆಯದು. ಅನೇಕ ಸಂದರ್ಭಗಳಲ್ಲಿ ಆ ಪ್ರಜ್ಞೆಯು ಹೊರಬರಬೇಕಾಗುತ್ತದೆ,” ಎಂದು ಅಭಿಪ್ರಾಯ ಪಟ್ಟರು.

ವಿಮರ್ಶಕ, ಭಾಷಾ ವಿಜ್ಞಾನಿ ಕೆ.ವಿ. ನಾರಾಯಣ ಮಾತನಾಡಿ, “ಬರವಣಿಗೆಯ ಸಂದರ್ಭದಲ್ಲಿ ನೆನಪುಗಳ ಅವಶ್ಯಕತೆ ಬಹಳಷ್ಟಿದೆ. ನೆನಪುಗಳು ವಿಧವಿಧವಾಗಿ ನಮ್ಮನ್ನು ಕಾಡುತ್ತವೆ. ಅದು ವ್ಯಕ್ತಿಗತ ನೆನಪು, ಚಾರಿತ್ರಿಕ ನೆನಪು, ಸಾಂಸ್ಕೃತಿಕ ನೆನಪುಗಳು, ಹೀಗೆ ಅನೇಕ ನೆನಪುಗಳ ಬಗ್ಗೆ ನಾವು ವಿಚಿತ್ರವಾದ ಹೇಳಿಕೆಗಳನ್ನು ಕೇಳಿದ್ದೇವೆ. ಬರಗೂರು ಅವರಲ್ಲಿ ಇಬ್ಬರು ಬರಗೂರು ರಾಮಚಂದ್ರಪ್ಪರಿದ್ದಾರೆ. ವೈಯುಕ್ತಿಕವಾದ ನೆಲೆಗಟ್ಟಿನಲ್ಲಿ ತಮ್ಮೊಳಗಡೆನೆ ತಾವಿರುವಂತಹ ಒಬ್ಬ ವ್ಯಕ್ತಿಯಾದರೆ, ಇನ್ನೊಂದು ಸಾಮಾಜಿಕ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯ ರೂಪ,” ಎಂದು ತಿಳಿಸಿದರು.

ಹಿರಿಯ ಲೇಖಕ ಬರಗೂರು ರಾಮಚಂದ್ರಪ್ಪ ಮಾತನಾಡಿ, “ಸೌಜನ್ಯ ಹಾಗೂ ನಿಷ್ಠುರತೆಯನ್ನು ಒಳಗೊಂಡ ವ್ಯಕ್ತಿತ್ವ ಜಿ. ಪರಮೇಶ್ವರ ಅವರದ್ದು. ಇನ್ನು ಮಂಜುನಾಥ ಅವರು ಹೃದಯವಂತ ಹೃದಯತಜ್ಞರು. ಜೀವಶಾಸ್ತ್ರದ ಹೃದಯ ಬೇರೆಯಾದರು, ಅವರದ್ದು ಸಾಂಸ್ಕೃತಿಕ ಮತ್ತು ಸಾಹಿತ್ಯಿಕವಾದ ಹೃದಯವಾಗಿದೆ. ಬಹಳ ನಿರಾಕಾರದಿಂದ ಕೂಡಿದೆ ಎಂದು ತಿಳಿಸಿದರು. ಇನ್ನು ಕೆ.ವಿ. ನಾರಾಯಣ ಅವರು ನನ್ನಲ್ಲಿರುವ ಒಂಟಿತನವನ್ನು ಕಂಡು ಆತ್ಮಕಥೆಯಂತಹ ಪುಸ್ತಕವನ್ನು ಬರೆಯಲು ಪ್ರೇರೇಪಣೆ ನೀಡಿದವರು,” ಎಂದರು.

“ವಾಸ್ತವವಾಗಿ ಲೇಖಕನಾದವ ಮೆರವಣಿಗೆಯಲ್ಲಿಯೂ ಒಂಟಿಯಾಗಿ, ಸಂತೆಯಲ್ಲೂ ಸಂತನಾಗಿರುವುದನ್ನು ಕಲಿಯಬೇಕು. ಇನ್ನು ‘ಕಾಗೆ ಕಾರುಣ್ಯದ ಕಣ್ಣು’ ಕೃತಿಗೆ ಆ ಹೆಸರನ್ನಿಟ್ಟ ಕಾರಣ ಕಾಗೆ ಸೌಹಾರ್ದತೆ ಹಾಗೂ ಸಮುದಾಯದ ಪ್ರಜ್ಞೆಯನ್ನು ಎಚ್ಚರಿಸುತ್ತದೆ. ಅದರ ಬಳಗ, ಸಮುದಾಯ ಹಾಗೂ ಸೌಹಾರ್ದತೆ ಪಜ್ಞೆಯು ಇವತ್ತು ನಮ್ಮ ದೇಶಕ್ಕೂ ಬೇಕಾಗಿದೆ. ಅದು ಇದೆಯೇ ಎಂಬುವುದನ್ನು ನಾವು ಗಮನಿಸಬೇಕಾಗಿದೆ. ಹಾಗಾಗಿ ನನಗೆ ಯಾವಾಗಲೂ ಕೂಡ ಕಾಗೆ ಕಾಣಿಸುವಂತಹದ್ದು ಸ್ನೇಹ ಹಾಗೂ ಸೌಹಾರ್ದತೆಯ ಪ್ರತೀಕವಾಗಿ. ಇನ್ನು ಹಿಂಸೆ ಅನ್ನುವುದು ನಮ್ಮ ದೇಶದಲ್ಲಿ ನಿಜವಾಗಿಯೂ ಮುನ್ನೆಲೆಗೆ ಬರುತ್ತಿದ್ದೆಯೇ? ಒಟ್ಟು ನಮ್ಮ ಪರಂಪರೆಯ ಒಳಗೆ ಗಾಂಧಿ, ಬುದ್ಧ, ಅಂಬೇಡ್ಕರ್, ಬಸವಣ್ಣ, ವಿವೇಕಾನಂದ ಇವರ್‍ಯಾರು ಕೂಡ ಹಿಂಸೆಯನ್ನು ಪ್ರತಿಪಾಧಿಸಿದವರಲ್ಲ. ಅವರ ವಿಚಾರಧಾರೆಗಳಲ್ಲಿ ಕೆಲವು ಭಿನ್ನ ನೆಲೆಗಳಿರಬಹುದು. ಆದರೆ ಒಟ್ಟು ಸಮಾಜದ ಒಳಗೆ ಅಹಿಂಸೆಯನ್ನೇ ಪ್ರತಿಪಾದನೆ ಮಾಡಿದರು,” ಇಂತಹ ನೆಲದಲ್ಲಿ ಸದ್ಯ ಅಹಿಂಸೆ ಹೆಚ್ಚಾಗುತ್ತಿದೆ. ಭಾಷಿಕ ಹಿಂಸೆ ಮುನ್ನೆಲೆಗೆ ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜಯದೇದ ಹೃದ್ರೋಗ ಸಂಸ್ಥೆ ನಿರ್ದೇಶಕ ಸಿ.ಎನ್. ಮಂಜುನಾಥ್ ಅವರ, “ಈ ಪುಸ್ತಕದ ಸಂದೇಶವು ನಾವು ಹಂಚಿತಿನ್ನಬೇಕೆ ಹೊರತು, ಕಿತ್ತು ತಿನ್ನಬಾರದು. ಅಳಿಸಿದ್ದು ಕೊಡಬಾರದು, ಉಳಿಸಿದ್ದು ಕೊಡಬೇಕು ಎನ್ನುವುದನ್ನು ತಿಳಿಸುತ್ತದೆ. ಬರಗೂರು ಅವರು ಕನ್ನಡವು ಬರೀ ಕನ್ನಡಕ್ಕವಾಗಬಾರದು ಕನ್ನಡ ಕಣ್ಣಾಗಿರಬೇಕು ಎಂಬ ನಿಟ್ಟಿನಲ್ಲಿ ಅವರು ಕೆಲಸ ಮಾಡುತ್ತಾರೆ. ಹಾಗಾಗಿ ನಮ್ಮಲ್ಲೇ ಹಲವಾರು ರೀತಿಯ ಬದಲಾವಣೆಯಾಗಬೇಕು. ಬರಗೂರು ಅವರ ನಿಲುವು ಏನಾಗಿತ್ತೆಂದರೆ ಪಠ್ಯ ಪುಸ್ತಕಗಳು ಪಕ್ಷದ ಪುಸ್ತಕಗಳಾಗಬಾರದು, ಅವುಗಳೇನಿದ್ದರು ಪಠ್ಯದ ಪುಸ್ತಕಗಳಾಗೇ ಇರಬೇಕು. ಇದನ್ನು ಅವರು ಬಹುವಾಗಿ ಸಮರ್ಥಿಸಿದ್ದರು,” ಎಂದು ತಿಳಿಸಿದರು.

Ghantepatrike kannada daily news Paper

Leave a Reply

error: Content is protected !!