ರಾಜ್ಯ

ವಿಜ್ಞಾನ ಬೆಳೆದ ಹಾಗೆ ಮನುಷ್ಯನು ಬೆಳೆಯುತ್ತಿದ್ದಾನೆ: ಎ.ಎಸ್. ಕಿರಣ್ ಕುಮಾರ್

ಬೆಂಗಳೂರಿನ ನವಕರ್ನಾಟಕ ಪ್ರಕಾಶನ ಹಾಗೂ ಬುಕ್ ಬ್ರಹ್ಮ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಿ.ಎಸ್.‌ ಶೈಲಜಾ ಮತ್ತು ಟಿ.ಆರ್.‌ ಅನಂತರಾಮು ಸಂಪಾದಕತ್ವದ ʻಖಗೋಳ ದರ್ಶನʼ (ಅಂತರಿಕ್ಷಕ್ಕೆ ಹಂತ ಹಂತದ ಮೆಟ್ಟಿಲು) ಕೃತಿಯ ಲೋಕಾರ್ಪಣಾ ಸಮಾರಂಭವು ಶನಿವಾರದಂದು ನಗರದ ಚಿತ್ರಕಲಾ ಪರಿಷತ್ ಬಳಿಯ, ಗಾಂಧಿ ಭವನ ಸಭಾಂಗಣದಲ್ಲಿ ನಡೆಯಿತು.

ಇಸ್ರೋ ಮಾಜಿ ಅಧ್ಯಕ್ಷ ಹಾಗೂ ಜವಾಹರ್‌ಲಾಲ್‌ ನೆಹರು ತಾರಾಲಯದ ಅಧ್ಯಕ್ಷ ಎ.ಎಸ್.‌ ಕಿರಣ್‌ ಕುಮಾರ್‌ ಕೃತಿಯನ್ನು ಲೋಕಾರ್ಪಣೆಗೊಳಿಸಿ, “ವೈಜ್ಞಾನಿಕತೆಯಲ್ಲಿ ಬೆಳವಣಿಗೆಯಾದ ಹಾಗೆ ಮನುಷ್ಯನ ಕೈಯಲ್ಲಿಯೂ ಹೊಸ ಹೊಸ ತಂತ್ರಜ್ಞಾನಗಳು ಬರುತ್ತಿದೆ. ವಿಜ್ಞಾನ ಬೆಳೆಯುತ್ತಿರುವ ವೇಗದಲ್ಲಿಯೇ ಮನುಷ್ಯನು ಬೆಳೆಯುತ್ತಿದ್ದಾನೆ. ನೂತನ ಕಾಲಘಟ್ಟದ ವಿಚಾರವನ್ನು ತಿಳಿದುಕೊಳ್ಳುವ ಆತನ ಹುಮ್ಮಸ್ಸು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಸಂದರ್ಭದಲ್ಲಿ ನವಕರ್ನಾಟಕ ಪ್ರಕಾಶನದಿಂದ ಪ್ರಕಟಗೊಂಡ ‘ಖಗೋಳ ದರ್ಶನ’ ವಿಜ್ಞಾನ ಸಾಹಿತ್ಯದಲ್ಲಿ ಮಹತ್ವದ ಸ್ಥಾನವನ್ನು ಪಡೆದಿದೆ. ಇನ್ನು ಮನುಷ್ಯ ತನ್ನ ಕ್ಷಮತೆಗಳನ್ನು ಬೆಳೆಸಿಕೊಂಡು, ಹೊಸತನವನ್ನು ಬರಮಾಡಿಕೊಳ್ಳುವ ದಾರಿಯೂ ಆತನು ಬ್ರಹ್ಮಾಂಡದಲ್ಲಿ ಬರೀ ಜೀವಿ, ವಸ್ತು ಅಷ್ಟೇ ಎಂಬುವುದನ್ನು ಅರಿತುಕೊಳ್ಳಲು ಸಹಕಾರಿಯಾಗುತ್ತದೆ,” ಎಂದು ತಿಳಿಸಿದರು.

‘ಖಗೋಳ ದರ್ಶನ’ ನವಕರ್ನಾಟಕ ಪ್ರಕಾಶನದ ಭಿನ್ನ ಕೃತಿ:

ನವಕರ್ನಾಟಕ ಪ್ರಕಾಶನದ ಪ್ರಕಾಶಕ ರಮೇಶ್ ಉಡುಪ ಮಾತನಾಡಿ, “ಇಂದು ಲೋಕಾರ್ಪಣೆಗೊಂಡಿರುವ ಕೃತಿ ಎಲ್ಲದಕ್ಕಿಂತಲೂ ಭಿನ್ನವಾಗಿದ್ದು, ವಿಷಯದ ವ್ಯಾಪ್ತಿ, ಪುಸ್ತಕದ ಗಾತ್ರ ಅಥವಾ ತಯಾರಿಕೆಯ ವೆಚ್ಚ ದೃಷ್ಟಿಯಿಂದಲೂ ಇದೊಂದು ಮಹತ್ವದ ಗ್ರಂಥವಾಗಿ ಹೊರಹೊಮ್ಮಿದೆ. ವೈಚಾರಿಕತೆ ಹಾಗೂ ವಿಜ್ಞಾನದ ಕಡೆಗೆ ಆಸಕ್ತಿ ಹುಟ್ಟಿಸುವ ನಿಟ್ಟಿನಲ್ಲಿ ಬಹಳಷ್ಟು ಕೆಲಸ ಮಾಡಿದ ಕೃತಿ ಇದಾಗಿದೆ,” ಎಂದು ತಿಳಿಸಿದರು.

ಪ್ರಗತಿಯ ದಾಖಲೀಕರಣ; ‘ಖಗೋಳ ದರ್ಶನ’ ಕೃತಿಯ ಸಂಪಾದಕಿ ಬಿ.ಎಸ್.‌ ಶೈಲಜಾ, “25 ವರ್ಷಗಳ ಇತ್ತೀಚಿನ ಪ್ರಗತಿಯನ್ನು ಇಲ್ಲಿ ದಾಖಲಿಸಲಾಗಿದ್ದು, ಪದ ಬಳಕೆಯು ಕೂಡ ಕೃತಿಯಲ್ಲಿ ವಿಭಿನ್ನವಾಗಿ ಮೂಡಿಬಂದಿದೆ. ಪ್ರತಿಯೊಬ್ಬರು ಕೂಡ ಈ ಖಗೋಳ ದರ್ಶನವನ್ನು ಓದಲೇಬೇಕು ಎಂದರು.

ಸಾಹಿತ್ಯ ಹಾಗೂ ವಿಜ್ಞಾನವನ್ನು ಬೆಸೆಯುವ ಕೊಂಡಿ ವಿಜ್ಞಾನ ಲೇಖಕರು: ಕೃತಿಯ ಸಂಪಾದಕ ಟಿ.ಆರ್.‌ ಅನಂತರಾಮು ಮಾತನಾಡಿ, “ನವಕರ್ನಾಟಕ ಸಂಸ್ಥೆಯು ವಿಜ್ಞಾನ ಸಾಹಿತ್ಯಕ್ಕೆ 2,000 ಕೃತಿಗಳನ್ನು ನೀಡಿದೆ. ಕರ್ನಾಟಕದ ಯಾವುದೇ ಸಂಸ್ಥೆ ಕೂಡ ಈ ರೀತಿಯ ಸಾಧನೆಯನ್ನು ಮಾಡಿಲ್ಲ. ಇನ್ನು ವಿಜ್ಞಾನ ಸಾಹಿತ್ಯವನ್ನು ವಿಭಿನ್ನವಾದ ಪ್ರಕಾರವಾಗಿದ್ದು, ಜನಗಳಿಗೆ ಬೇಕಾಗಿರುವ, ಅರ್ಥವಾಗುವ ಭಾಷೆಯಲ್ಲಿ ವಿಜ್ಞಾನದ ವಿಚಾರಗಳನ್ನು ನೀಡಿದರೆ ಅವರು ಖಂಡಿತವಾಗಿಯೂ ಸ್ವೀಕರಿಸುತ್ತಾರೆ. ವಿಜ್ಞಾನ ಲೇಖಕರು ಸಾಹಿತ್ಯ ಹಾಗೂ ವಿಜ್ಞಾನವನ್ನು ಬೆಸೆಯುವ ಕೊಂಡಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ಬರಹದ ಜೊತೆಗೆ ಕೂತೂಹಲವನ್ನು ಹುಟ್ಟಿಸುವಂತ ಗುಣಮಟ್ಟದ ಚಿತ್ರಗಳನ್ನು ಕೃತಿಯಲ್ಲಿ ನೀಡುತ್ತಾರೆ. ಇವೆಲ್ಲವನ್ನೂ ನಾವು ‘ಖಗೋಳ ಶಾಸ್ತ್ರ’ ಕೃತಿಯಲ್ಲಿ ಕಾಣಬಹುದು. ಎಲ್ಲರಿಗೂ ಅರ್ಥವಾಗುವ ಭಾಷೆಯಲ್ಲಿ ಪದಬಳಕೆಯನ್ನು ಮಾಡಲಾಗಿದೆ. ಅಷ್ಟೇ ಅಲ್ಲದೇ ಯಾವುದೇ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ. ಇದನ್ನು ಎಲ್ಲಾ ವರ್ಗದವರು ಓದಬಹುದು. ಅಂತಹ ಅಭಿರುಚಿಗಳನ್ನು ಒಳಗೊಂಡಿರುವ ಕೃತಿಯಿದಾಗಿದೆ,” ಎಂದರು.

ಮನುಷ್ಯತ್ವ ಸಂಪಾದನೆಗೆ ಅರ್ಹ ಕೃತಿ: ಹಿರಿಯ ವಿಜ್ಞಾನಿ ಹಾಗೂ ಪ್ರಾಧ್ಯಾಪಕ ಎಂ.ಆರ್.ಎನ್.‌ ಮೂರ್ತಿ, “ಮನುಷ್ಯತ್ವನ್ನು ಸಂಪಾದಿಸಿಕೊಳ್ಳಲು ಈ ಗ್ರಂಥ ಸಹಕಾರಿಯಾಗಿದೆ. ಎಲ್ಲಾ ದೇಶದಲ್ಲಿಯೂ ಖಗೋಳ ವಿಜ್ಞಾನ ಅನ್ನುವಂತಹದ್ದು ಮೊದಲಿನಿಂದಲೂ ಇದೆ. ಕಾರಣ ಅದಿಲ್ಲದೆ ವ್ಯವಸಾಯವೂ ಸಾಧ್ಯವಿರಲಿಲ್ಲ. ಮನುಷ್ಯ ವ್ಯವಸಾಯ ಶುರುಮಾಡಿದಾಗಲೇ ಯಾವಾಗ ಮಳೆ ಬರುತ್ತದೆ ಎನ್ನುವ ಮಾಹಿತಿ ತಿಳಿದುಕೊಳ್ಳಬೇಕಾಯಿತು. ಅದಕ್ಕೂ ಖಗೋಳ ವಿಜ್ಞಾನ ನೆರವಾಯಿತು. ಹೀಗೆ ಎಲ್ಲಾ ಕಾಲದಲ್ಲಿಯೂ ಖಗೋಳ ವಿಜ್ಞಾನ ಬೆಳೆದುಬಂದಿದೆ. ಇನ್ನು ಈ ಕೃತಿಯು ಖಗೋಳ ವಿಜ್ಞಾನವನ್ನು ಪರಿಚಯಿಸಿದರಿಂದ ಹಿಡಿದು ವಿಜ್ಞಾನದ ಬೆಳವಣಿಗೆಗೆ ಕಾರಣರಾದ ಕುರಿತು ಮಾಹಿತಿಯನ್ನು ನೀಡುತ್ತದೆ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅರುಣ್ ಕೆನತ್, ಎಂ. ವೈ. ಆನಂದ್, ಗೀತಾ ಕೈದಳ್ ಗಣೇಶ್, ಜಯಂತ ಮೂರ್ತಿ, ಶಮಾ ವಿ. ಭಾನುಪ್ರಕಾಶ್, ಲಕ್ಷ್ಮೀ, ಮಧು ಕಶ್ಯಾಪ್ ಜಗದೀಶ್, ಎಂ.ಎಸ್. ಮೂರ್ತಿ, ಪವನ್ ಗ್ರಾಮ ಪುರೋಹಿತ್, ಪ್ರಮೋದ್ ಜಿ. ಗಲಗಲಿ, ಎಸ್.ಎನ್. ಪ್ರಸಾದ್, ಪ್ರಜ್ವಲ್ ಶಾಸ್ತ್ರೀ, ಶಿವರಾಮ ಸಿ, ವಿ.ಎಸ್.ಎಸ್. ಶಾಸ್ತ್ರೀ, ತುಷಾರ್ ಪ್ರಭು, ವಿಶ್ವನಾಥ್ ಪಿ.ಆರ್, ವೆಂಕಟಕೃಷ್ಣನ್ ಪಿ. ಸೇರಿದಂತೆ ಹಲವರಿಗೆ ಕಾರ್ಯಕ್ರಮದಲ್ಲಿ ಪುಸ್ತಕವನ್ನು ನೀಡಿ ಗೌರವಿಸಲಾಯಿತು.

Ghantepatrike kannada daily news Paper

Leave a Reply

error: Content is protected !!