ಬೀದರ್

ಎಲ್ಲರಲ್ಲಿ ಕನ್ನಡ ಭಾಷಾಭಿಮಾನ ಬೆಳೆಯಲಿ: ಪ್ರಭು ಚವ್ಹಾಣ

ಕನ್ನಡ ಭಾಷೆ ಪುರಾತನ ಭಾಷೆಗಳಲ್ಲಿ ಒಂದಾಗಿದ್ದು, ಅತ್ಯಂತ ಸುಂದರ ಭಾಷೆಯಾಗಿದೆ. ನಾಡಿನಲ್ಲಿರುವ ಎಲ್ಲರೂ ನಮ್ಮ ಕನ್ನಡದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಈ ಭಾಷೆಯನ್ನು ಉಳಿಸಿ ಬೆಳೆಸಲು ಪ್ರಯತ್ನಿಸಬೇಕಿದೆ ಎಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ತಿಳಿಸಿದರು.
ಕನ್ನಡ ರಾಜ್ಯೋತ್ಸವದ ನಿಮಿತ್ತ ತಾಲ್ಲೂಕು ಆಡಳಿತದ ವತಿಯಿಂದ ನ.1ರಂದು ಔರಾದ(ಬಿ) ತಾಲ್ಲೂಕು ಆಡಳಿತ ಸೌಧದ ಆವರಣದಲ್ಲಿ ಏರ್ಪಡಿಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೇರೆ ಭಾಷೆಗಳನ್ನು ಗೌರವಿಸುವುದು ತಪ್ಪಲ್ಲ. ಆದರೆ ಕನ್ನಡವನ್ನು ಮಾತನಾಡಬೇಕು. ನಿತ್ಯಜೀವನದಲ್ಲಿ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಕೆ ಮಾಡಬೇಕು. ಎಲ್ಲ ಸರ್ಕಾರಿ ಮತ್ತು ಖಾಸಗಿ ಕಛೇರಿಗಳು, ಅಂಗಡಿಗಳು, ಸಂಘ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಕಾಣುವಂತಾಗಬೇಕು. ನಾಡಿನೆಲ್ಲೆಡೆಯೂ ಕನ್ನಡಮಯ ವಾತಾವರಣ ನಿರ್ಮಿಸಲು ನಾವೆಲ್ಲರೂ ಮುಂದಾಗಬೇಕು ಎಂದರು.
ನಾಡನ್ನು ಕಟ್ಟಿ ಬೆಳೆಸುವಲ್ಲಿ ಅನೇಕ ಹೋರಾಟಗಾರರ ತ್ಯಾಗ ಪರಿಶ್ರಮ ಅಡಗಿದೆ. ಅಂತಹ ಮಹನೀಯರ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಬೇಕಿದೆ. ಶಾಲೆಯಲ್ಲಿ ಮಕ್ಕಳಿಗೆ ನಾಡಿನ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಇನ್ನಷ್ಟು ಬೋಧಿಸಬೇಕು. ಭಾಷೆಯ ಜೊತೆಗೆ ನಮ್ಮ ನೆಲ, ಜಲ, ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸುವ ಹೊಣೆಗಾರಿಕೆಯೂ ಎಲ್ಲರ ಮೇಲಿದೆ ಎಂದು ಹೇಳಿದರು.
ಕನ್ನಡ ಭಾಷೆಯ ಬಗ್ಗೆ ಅಪಾರ ಗೌರವ ಹೊಂದಿರುವ ನಾನು ಸದಾ ಕನ್ನಡಪರ ಕೆಲಸಗಳನ್ನು ಮಾಡುತ್ತಾ ಬಂದಿದ್ದೇನೆ. ಔರಾದ್‌ನಲ್ಲಿ ಹಿಂದೆಯೇ ಕನ್ನಡ ಭವನ ನಿರ್ಮಿಸಲಾಗಿದೆ. ಹಿಂದೆ ಸಚಿವನಾಗಿದ್ದಾಗ ಬೀದರ್‌ನಲ್ಲಿ ಜಿಲ್ಲಾ ಕನ್ನಡ ಭವನ ಮಂಜೂರು ಮಾಡಿಸಿ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಕನ್ನಡದ ಸೇವೆ ಸಲ್ಲಿಸುತ್ತಿರುವ ಸಾಹಿತಿ, ಕಲಾವಿದರನ್ನು ಗೌರವಿಸುವುದು ಒಳಗೊಂಡು ಕನ್ನಡಪರ ಕೆಲಸಗಳು ನಿರಂತರವಾಗಿ ನಡೆಯಲಿವೆ ಎಂದರು.
ಔರಾದ(ಬಿ) ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿದ್ದು, ನಿರಂತರ ಪರಶ್ರಮ ವಹಿಸುತ್ತಿದ್ದೇನೆ. ಕುಡಿಯುವ ನೀರಿನ ಸಮಸ್ಯೆ ಪೂರೈಸಲು ಕಾರಂಜಾ ಜಲಾಶಯದಿಂದ ನೀರು ಸರಬರಾಜು ಮಾಡುವ ಯೋಜನೆಗೆ ಮಂಜೂರಾತಿ ಪಡೆಯಲಾಗಿದೆ. ಬಹುದಿನಗಳ ಬೇಡಿಕೆಯಾಗಿದ್ದ ನ್ಯಾಯಾಲಯಗಳ ಸಂಕೀರ್ಣ ನಿರ್ಮಾಣ ಯೋಜನೆಗೂ ಮಂಜೂರಾತಿ ಪಡೆಯಲಾಗಿದೆ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿಯಾಗಿದೆ ಎಂದರು.
ಔರಾದ(ಬಿ) ತಹಸೀಲ್ದಾರರಾದ ಮಲಶೆಟ್ಟಿ ಚಿದ್ರೆ ಅವರು ಧ್ವಜಾರೋಹಣ ನೆರವೇರಿಸಿದರು. ಸಾಹಿತಿ ಹಾಗೂ ಶಿಕ್ಷಕರಾದ ಶಿವಲಿಂಗ ಹೇಡೆ ಅವರು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಸನ್ಮಾನಿಸಲಾಯಿತು. ಬಳಿಕ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬೀರೇಂದ್ರಸಿAಗ್ ಠಾಕೂರ್, ಸಿಪಿಐ ರಘುವೀರಸಿಂಗ್ ಠಾಕೂರ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸ್ವಾಮಿದಾಸ, ಕಸಾಪ ತಾಲ್ಲೂಕು ಅಧ್ಯಕ್ಷ ಡಾ.ಶಾಲಿವಾನ ಉದಗೀರೆ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Ghantepatrike kannada daily news Paper

Leave a Reply

error: Content is protected !!