ರಾಜ್ಯ

ಸಾಹಿತ್ಯ ಪ್ರಜಾಪ್ರಭುತ್ವದ ಮಾರ್ಗದರ್ಶಿಯಾಗಿದೆ: ಬಸವರಾಜ ಬೊಮ್ಮಾಯಿ

ಬೆಂಗಳೂರು: ವಿಶ್ವವಾಣಿ ಪುಸ್ತಕ ವತಿಯಿಂದ ಪತ್ರಕರ್ತ,ಲೇಖಕ ವಿಶ್ವೇಶ್ವರ ಭಟ್‌ ಅವರ `ಸಂಪಾದಕರ ಸದ್ಯಶೋಧನೆ-1′, `ಸಂಪಾದಕರ ಸದ್ಯಶೋಧನೆ-2′, `ಸಂಪಾದಕರ ಸದ್ಯಶೋಧನೆ-3′ ಹಾಗೂ ಕಿರಣ್‌ ಉಪಾಧ್ಯಾಯ ಅವರ ‘ಹೊರದೇಶವಾಸಿ’, ರೂಪಾ ಗುರುರಾಜ್‌ ಅವರ ‘ಒಂದೊಳ್ಳೆ ಮಾತು – 2’ , ಶಿಶಿರ್‌ ಹೆಗಡೆ ಅವರ ‘ಶಿಶಿರ ಕಾಲ’ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವು ಬೆಂಗಳೂರಿನ ಕೆ.ಪಿ ಪುಟ್ಟಣಶೆಟ್ಟಿ ಪುರಭವನದಲ್ಲಿ ನೆರವೇರಿತು.

ಕಾರ್ಯಕ್ರಮವನ್ನು ದ್ವೀಪ ಪ್ರಜ್ವಲಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಪ್ರದೀಪ್‌ ಈಶ್ವರ್‌, ವಿಧಾನಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ, ವಿಶ್ವೇಶ್ವರ ಭಟ್‌, ಕಿರಣ್‌ ಉಪಾಧ್ಯಾಯ, ರೂಪಾ ಗುರುರಾಜ್‌ ಹಾಗೂ ಶಿಶಿರ್‌ ಹೆಗಡೆ ಅವರು ಉದ್ಘಾಟಿಸಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, “ಪತ್ರಕರ್ತ ಹಾಗೂ ರಾಜಕೀಯಗಾರರಿಗೆ ಅವಿನಭಾವ ಸಂಬಂಧವಿರುತ್ತದೆ. ಆದರೆ ಪತ್ರಕರ್ತರಿಗೆ ರಾಜಕೀಯ ಸುದ್ದಿ ಇಲ್ಲವೆಂದರೆ ಮಾಧ್ಯಮಗಳನ್ನು, ಪತ್ರಿಕೆಯನ್ನು ಮುಂದುವರೆಸಲು ಸಾಧ್ಯವೇ? ಎಂದು ಪ್ರಶ್ನಿಸಿದರು. ಹಾಗಾಗಿ ಮಾತನಾಡುವವರಿಗಿಂತ ಕೇಳುವವರು ಬುದ್ದಿವಂತರು. ಬರೆಯುವವರಿಗಿಂತ ಓದುಗರು ಬುದ್ದಿವಂತರಾಗಿರುತ್ತಾರೆ. ಒಬ್ಬ ಲೇಖಕನಿಗೆ ಅಥವಾ ಸಾಹಿತಿಗೆ ಒಂದು ಉತ್ತಮ ಓದುಗ ಬಳಗ ಸಿಕ್ಕಿದರೆ ಅದುವೇ ಆ ಲೇಖಕನ ಯಶಸ್ಸು. ಪುಸ್ತಕಲೋಕ ಹಿಂದೆಯೂ ಕಷ್ಟದಲ್ಲಿತ್ತು ಇಂದಿಗೂ ಕಷ್ಟದಲ್ಲಿದೆ ಎಂಬುದು ಸತ್ಯ. ಎಲ್ಲಿಯವರೆಗೂ ಓದುಗ ಹಣ ಕೊಟ್ಟು ಪುಸ್ತಕ ಖರೀದಿಸಿದರು ಆ ಹಣ ಸಾಹಿತ್ಯಕ್ಕೆ ತಲುಪುದಿಲ್ಲವೋ ಅಲ್ಲಿಯವರೆಗೂ ಸಾಹಿತ್ಯ ಕ್ಷೇತ್ರ ಅಥವಾ ಪುಸ್ತಕ ಲೋಕ ಶ್ರೀಮಂತವಾಗುವುದಿಲ್ಲ. ಸಮಾಜ ಮತ್ತು ಸರ್ಕಾರ, ಸಾಹಿತ್ಯವನ್ನು ನಿರಂತರವಾಗಿ ಬೆಂಬಲಿಸಿದರೆ ಮಾತ್ರ ಸಾಹಿತ್ಯ ಕ್ಷೇತ್ರ ಉತ್ಕೃಷ್ಟವಾಗಬಹುದು,” ಎಂದು ಅಭಿಪ್ರಾಯಪಟ್ಟರು.

ಪತ್ರಕರ್ತ, ಲೇಖಕ ವಿಶ್ವೇಶ್ವರ ಭಟ್‌ ಮಾತನಾಡಿ, “ಕನ್ನಡ ಪುಸ್ತಕ ಲೋಕ ಇಂದು ಬರಡಾಗಿದೆ. ರಾಜ್ಯದಲ್ಲಿ 6 ಕೋಟಿ ಜನಸಂಖ್ಯೆ ಇದ್ದರು 6 ಸಾವಿರ ಪುಸ್ತಕಗಳು ಮಾರಾಟವಾಗದೆ ಇರುವುದು ದುರಂತವಾಗಿದೆ. ಈ ವಿಚಾರವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಮುಖ್ಯಮಂತ್ರಿಗಳಿಗೆ ತಿಳಿಸುವ ಉದ್ದೇಶದಿಂದ ನನ್ನ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ರಾಜಕಾರಣಿಗಳನ್ನು ಕರೆದೆ ಎಂಬುವುದನ್ನು ಮೊದಲು ಸ್ಪಷ್ಟ ಪಡಿಸುತ್ತೆನೆ,” ಎಂದರು.

“ರೂಪಾ ಗುರುರಾಜ್‌, ಶಿಶಿರ್‌ ಹೆಗಡೆ, ಕಿರಣ್‌ ಉಪಾಧ್ಯಾಯ ಈ ಮೂರು ಲೇಖಕರು ಬಹಳ ವಿಭಿನ್ನ ಬರಹ ಶೈಲಿಯನ್ನು ಹೊಂದಿದವರು. ವಿದೇಶದಲ್ಲಿ ಕುಳಿತು ಅಂಕಣ ಬರೆಯುದು ಅಷ್ಟು ಸುಲಭದ ಕೆಲಸವಲ್ಲ ಅದನ್ನು ನಮ್ಮ ಈ ಲೇಖಕರು ಮಾಡುತ್ತಿದ್ದಾರೆ. ಕನ್ನಡವನ್ನು ಉಳಿಸಿ ಬೆಳೆಸೋಣ,” ಎಂದು ತಿಳಿಸಿದರು.

ಚಿಕ್ಕಬಳ್ಳಾಪುರ ಕ್ಷೇತ್ರ ಶಾಸಕ ಮತ್ತು ಪರಿಶ್ರಮ ನೀಟ್‌ ಅಕಾಡೆಮಿ ಸಂಸ್ಥಾಪಕ ಪ್ರದೀಪ್‌ ಈಶ್ವರ್‌, “ಲೇಖಕ, ಬರವಣಿಗೆಗಾರ ಆಗುತ್ತೇನೆ ಎಂದು ನಾನು ಅಂದುಕೊಂಡಿರಲಿಲ್ಲ. ಆದರೆ ಇಂದು ಬರವಣಿಗೆ ನನ್ನ ಜೀವನವನ್ನು ಬದಲಿಸಿತು. ನಾನು ಒಂದು ಪುಟ್ಟ ಓದುಗರ ಬಳಗವನ್ನು ಹೊಂದಿದ್ದೇನೆ ಎನ್ನಲು ಹೆಮ್ಮೆಯಿದೆ. ವಿಶ್ವವಾಣಿ ಪತ್ರಿಕೆಯ ‘ಸ್ಫೂರ್ತಿ ಸೆಲೆ’ ಅಂಕಣ ನನ್ನನು ಬರವಣಿಗೆಯತ್ತ ಸೆಳೆಯಿತು ಎಂದು ಯುವ ಜನತೆಗೆ ಉತ್ತಮ ಸಂದೇಶವನ್ನು,” ನೀಡಿದರು.

ವಿಧಾನಪರಿಷತ್ತ್ ಸಭಾಪತಿ ಬಸವರಾಜ ಹೊರಟ್ಟಿ, “ವಿಶ್ವೇಶ್ವರ ಭಟ್‌ ಅವರು ಶ್ರೇಷ್ಠ ಬರಹಗಾರ ಹಾಗೂ ಪತ್ರಕರ್ತರು. ಸ್ನೇಹಜೀವಿ ಕೂಡ ಎಂದು ತಮ್ಮ ಒಡನಾಟದ ಕೆಲವೊಂದು ವಿಚಾರಗಳನ್ನು ಮೆಲುಕು ಹಾಕಿಕೊಂಡರು,”.

ರಾಧಕೃಷ್ಣ ಭಡ್ತಿ ಮಾತಾನಾಡಿ, “ವಿಶ್ವೇಶ್ವರ ಭಟ್‌ ಅವರ ಪುಸ್ತಕ ಬಿಡುಗಡೆ ಎಂದರೆ ಓದುಗರ ಸಮಾವೇಶ ಎನ್ನಬಹುದು. ಈ ನಾಲ್ಕು ಕೃತಿಗಳ ಲೇಖಕರ ಬಗ್ಗೆ ಹೇಳಬೇಕೆಂದರೆ ಅದು ಕಷ್ಟ ಸಾಧ್ಯ. ಸಂಪಾದಕರ ಸದ್ಯಶೋಧನೆ ಇದು ಒಂದು ವಿಭಿನ್ನ ಅಂಕಣಗಳ ಬರಹವಾಗಿದೆ. ‘ಒಂದೊಳ್ಳೆ ಮಾತು – 2’ ‘ಹೊರದೇಶವಾಸಿ’ ಮತ್ತು ‘ಶಿಶಿರ ಕಾಲ’ ಈ ಕೃತಿಗಳು ಕನ್ನಡದ ಕಂಪನ್ನು ವಿದೇಶದಲ್ಲಿ ಪಸರಿಸುವ ಬರಹಗಳಾಗಿವೆ,” ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಪ್ರಭ ಪತ್ರಿಕೆಯ ಸಂಪಾದಕ ರವಿ ಹೆಗಡೆ, ವಿಸ್ತಾರ ವಾಹಿನಿಯ ಸಂಪಾದಕ ಹರಿಪ್ರಕಾಶ ಕೋಣೆಮನೆ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್‌ ಜೋಶಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದರು.

ಕಾರ್ಯಕ್ರಮವನ್ನು ಲೇಖಕಿ ರೂಪಾ ಗುರುರಾಜ್‌ ನಿರೂಪಿಸಿ, ಲೇಖಕ ಕಿರಣ್‌ ಉಪಾಧ್ಯಾಯ ಸ್ವಾಗತಿಸಿದರು. ಹಾಗೂ ಲೇಖಕ ಶಿಶಿರ್‌ ಹೆಗಡೆ ಕಾರ್ಯಕ್ರಮದ ವಂದನಾರ್ಪಣೆಯನ್ನು ನೆರವೇರಿಸಿದರು.

Ghantepatrike kannada daily news Paper

Leave a Reply

error: Content is protected !!