ರಾಜ್ಯ

ಲೀಟರ್‌ಗೆ ೩ ರೂಪಾಯಿ ಹೆಚ್ಚಿಸಲು ಸರ್ಕಾರ ಒಪ್ಪಿಗೆ ಸಾಧ್ಯತೆ

ಬೆಂಗಳೂರು, ಜು. ೨೧- ನಂದಿನಿ ಹಾಲಿನ ದರ ಏರಿಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಭೆ ಕರೆದಿದ್ದು, ನಂದಿನಿ ಹಾಲಿನ ದರವನ್ನು ಲೀಟರ್‌ಗೆ ೩ ರೂಪಾಯಿ ಹೆಚ್ಚಿಸಲು ಸರ್ಕಾರ ಒಪ್ಪಿಗೆ ನೀಡುವ ಸಾಧ್ಯತೆಗಳಿವೆ.
ಕಳೆದ ವಾರವೇ ನಂದಿನಿ ಹಾಲಿನ ದರ ಸಂಬಂಧ ಮುಖ್ಯಮಂತ್ರಿಗಳು ಸಭೆ ಕರೆದಿದ್ದರಾದರೂ ಅನಾರೋಗ್ಯದ ಕಾರಣ ಸಭೆ ನಡೆದಿರಲಿಲ್ಲ.
ಇಂದು ಹಾಲಿನ ದರ ಏರಿಕೆ ಸಂಬಂಧ ಮುಖ್ಯಮಂತ್ರಿಗಳು ಸಂಜೆ ೬ ಗಂಟೆಗೆ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಲಿದ್ದಾರೆ.
ಈ ಸಭೆಯಲ್ಲಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ೩ ರೂ. ಹೆಚ್ಚಿಸುವ ತೀರ್ಮಾನಕ್ಕೆ ಸಮ್ಮತಿಸುವ ಸಾಧ್ಯತೆಗಳು ಹೆಚ್ಚಿವೆ.
ಕರ್ನಾಟಕ ಹಾಲು ಮಹಾ ಮಂಡಳ ಪ್ರತಿ ಲೀಟರ್ ಹಾಲಿಗೆ ೫ ರೂಪಾಯಿ ಏರಿಕೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರ ೫ ರೂಪಾಯಿ ಬದಲು ಪ್ರತಿ ಲೀಟರ್ ಹಾಲಿಗೆ ೩ ರೂಪಾಯಿ ಹೆಚ್ಚಿಸಲು ಒಪ್ಪಿಗೆ ನೀಡಲಿದೆ ಎಂದು ಹೇಳಲಾಗಿದೆ.
ನಂದಿನಿ ಹಾಲಿನ ದರ ಏರಿಕೆ ಸಂಬಂಧ ಮುಖ್ಯಮಂತ್ರಿಗಳು ಕರೆದಿರುವ ಸಭೆಯಲ್ಲಿ ಕರ್ನಾಟಕ ಹಾಲು ಮಹಾ ಮಂಡಳದ ಅಧ್ಯಕ್ಷ ಭೀಮನಾಯಕ್, ಎಲ್ಲ ನಿರ್ದೇಶಕರುಗಳು ಹಾಗೂ ಅಧಿಕಾರಿಗಳು ಭಾಗಿಯಾಗುವರು.
ಈ ಸಭೆಯ ನಂತರ ಹಾಲಿನ ದರ ಏರಿಕೆಯ ಬಗ್ಗೆ ತೀರ್ಮಾನಗಳನ್ನು ಪ್ರಕಟಿಸಲಾಗುತ್ತದೆ.

Ghantepatrike kannada daily news Paper

Leave a Reply

error: Content is protected !!