ಬೀದರ್

ಮಹಾರಾಷ್ಟ್ರ ಪಠ್ಯಕ್ರಮಕ್ಕೆ ಶಾಹೀನ್ ವಿದ್ಯಾರ್ಥಿ ಸಾಹಸ ಕತೆ

‘ರಾಷ್ಟ್ರೀಯ ಮಕ್ಕಳ ಶೌರ್ಯ ಪ್ರಶಸ್ತಿ’ಯೊಂದಿಗೆ ಬೀದರ್‍ನ ಶಾಹೀನ್ ಪದವಿ ಕಾಲೇಜು ವಿದ್ಯಾರ್ಥಿ ಏಜಾಜ್ ನದಾಫ್

ಬೀದರ್: ಇಲ್ಲಿಯ ಶಾಹೀನ್ ಪದವಿ ಕಾಲೇಜು ವಿದ್ಯಾರ್ಥಿ ಏಜಾಜ್ ನದಾಫ್ ಸಾಹಸ ಗಾಥೆ ಮಹಾರಾಷ್ಟ್ರದ ಪಠ್ಯಕ್ರಮ ಸೇರಿದೆ.
ಈಗ ಅಲ್ಲಿಯ ಆರನೇ ತರಗತಿಯ ಉರ್ದು ಪಠ್ಯ ಪುಸ್ತಕದಲ್ಲಿ ಏಜಾಜ್ ಶೌರ್ಯದ ಕತೆ ಓದಬಹುದಾಗಿದೆ.
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಅರ್ಧಾಪುರ ತಾಲ್ಲೂಕಿನ ಪರಡಿ ಗ್ರಾಮದ ಏಜಾಜ್, 2017ರ ಏಪ್ರಿಲ್ 30 ರಂದು ಬಟ್ಟೆ ತೊಳೆಯಲು ಹೋಗಿ ನದಿಯಲ್ಲಿ ಮುಳುಗುತ್ತಿದ್ದ ಇಬ್ಬರು ಬಾಲಕಿಯರನ್ನು ರಕ್ಷಿಸಿ ಸಾಹಸ ಮೆರೆದಿದ್ದರು. ಇದಕ್ಕಾಗಿ ಅವರಿಗೆ 2018 ರ ಜನವರಿ 26 ರಂದು ‘ರಾಷ್ಟ್ರೀಯ ಮಕ್ಕಳ ಶೌರ್ಯ ಪ್ರಶಸ್ತಿ’ ಕೊಡಲಾಗಿತ್ತು.
ಒಂದರಿಂದ 12ನೇ ತರಗತಿ ವರೆಗಿನ ಶಿಕ್ಷಣ ಸ್ವ ಗ್ರಾಮದಲ್ಲೇ ಪೂರೈಸಿದ ಅವರು, 10ನೇ ತರಗತಿಯಲ್ಲಿದ್ದಾಗ ಬಾಲಕಿಯರ ಜೀವ ಉಳಿಸಿದ್ದರು.
ಬಡತನದ ಕಾರಣ 10ನೇ ನಂತರ ಏಜಾಜ್ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿದ್ದರು. ಆರ್ಥಿಕ ಸಂಕಷ್ಟದ ನಡುವೆಯೇ ಶೇ 82 ರಷ್ಟು ಅಂಕಗಳೊಂದಿಗೆ 12ನೇ ತರಗತಿ ಶಿಕ್ಷಣ ಮುಗಿಸಿದ್ದರು.
ವಿದ್ಯಾರ್ಥಿಯ ಸಂಕಷ್ಟ ಗಮನಕ್ಕೆ ಬರುತ್ತಿದ್ದಂತೆಯೇ ಬೀದರ್‍ನ ಶಾಹೀನ್ ಶಿಕ್ಷಣ ಸಂಸ್ಥೆ ಶೈಕ್ಷಣಿಕವಾಗಿ ದತ್ತು ಪಡೆದುಕೊಂಡಿತು. ಏಜಾಜ್ ಸದ್ಯ ಶಾಹೀನ್ ಪದವಿ ಕಾಲೇಜಿನಲ್ಲಿ ಬಿ.ಎ. ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಜತೆಗೆ ಇದೇ ಸಂಸ್ಥೆಯಲ್ಲಿ ಯುಪಿಎಸ್‍ಸಿ ಪರೀಕ್ಷೆಗೆ ತಯಾರಿಯನ್ನೂ ನಡೆಸಿದ್ದಾರೆ.
ನನ್ನ ಸಾಹಸ ಕತೆ ಪಠ್ಯಕ್ರಮ ಸೇರಿರುವುದು ತಂದೆಯಿಂದ ಗೊತ್ತಾಯಿತು. ನನಗೆ ರೋಮಾಂಚನ ಆಯಿತು ಎಂದು ತಿಳಿಸುತ್ತಾರೆ ಏಜಾಜ್.
ರಾಷ್ಟ್ರಪ್ರಶಸ್ತಿ ಬಂದಾಗ, ಜನಪ್ರತಿನಿಧಿಗಳು ಹಾಗೂ ರಾಜಕಾರಣಿಗಳು ಶಿಕ್ಷಣದ ಖರ್ಚು ನೋಡಿಕೊಳ್ಳುವ ಭರವಸೆ ಮಾತ್ರ ನೀಡಿದ್ದರು. ಆದರೆ, ನಿಜವಾಗಿ ನನಗೆ ನೆರವಾದವರು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್. ಅವರ ಸಹಾಯದಿಂದ ಶಿಕ್ಷಣ ಮುಂದುವರಿಸಿರುವೆ. ಐಎಎಸ್ ಗುರಿ ನನ್ನದಾಗಿದೆ ಎನ್ನುತ್ತಾರೆ.
ಏಜಾಜ್ ಶೌರ್ಯದ ಕತೆ ಮಹಾರಾಷ್ಟ್ರದ ಪಠ್ಯಕ್ರಮಕ್ಕೆ ಸೇರ್ಪಡೆಯಾಗಿರುವುದು ಸಂತಸದ ಸಂಗತಿಯಾಗಿದೆ. ಇದು, ಮಕ್ಕಳಿಗೆ ಪ್ರೇರಣೆ ಆಗಲಿದೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಹೇಳುತ್ತಾರೆ.
ಶಾಹೀನ್ ಸಂಸ್ಥೆ ಮೊದಲಿನಿಂದಲೂ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗುತ್ತ ಬಂದಿದೆ. ಅವರ ಆತ್ಮವಿಶ್ವಾಸ ಇಮ್ಮಡಿಗೊಳಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸುತ್ತಾರೆ.

Ghantepatrike kannada daily news Paper

Leave a Reply

error: Content is protected !!