ಬೀದರ್

ಶಾಸಕ ಪ್ರಭು ಚವ್ಹಾಣರಿಂದ ಅಭಿವೃದ್ಧಿ ಕೆಲಸಗಳ ಪರಿಶೀಲನೆ

ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಅ.27ರಂದು ಔರಾದ(ಬಿ) ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಸಂಚರಿಸಿ ಅಭಿವೃದ್ಧಿ ಕೆಲಸಗಳನ್ನು ಪರಿಶೀಲಿಸಿದರು.
ಬಾದಲಗಾಂವ, ನಾಗಮಾರಪಳ್ಳಿ, ರಾಯಪಳ್ಳಿ, ಲಿಂಗದಳ್ಳಿ(ಜೆ), ಚಿಂತಾಕಿ, ಹೇರಾ ತಾಂಡಾ, ಅಶೋಕನಗರ ತಾಂಡಾ, ಎಕಂಬಾ ತಾಂಡಾ, ಬೆಲ್ದಾಳ, ಚಿಕ್ಲಿ(ಜೆ), ಕಂದಗೂಳ, ಕೌಠಾ(ಬಿ) ಸೇರಿದಂತೆ 15ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಂಚರಿಸಿ, ರಸ್ತೆ, ಕುಡಿಯುವ ನೀರು, ಸಮುದಾಯ ಭವನದಂತಹ ಚಾಲ್ತಿಯಲ್ಲಿರುವ ವಿವಿಧ ಅಭಿವೃದ್ಧಿ ಕೆಲಸಗಳನ್ನು ವೀಕ್ಷಿಸಿ, ಕಾಮಗಾರಿಗಳನ್ನು ಯಾವುದೇ ಲೋಪಗಳಿಗೆ ಆಸ್ಪದ ನೀಡದ ರೀತಿಯಲ್ಲಿ ಗುಣಮಟ್ಟದಿಂದ ಪೂರ್ಣಗೊಳಿಸಬೇಕು. ಕೆಲಸ ಕಳಪೆಯಾದರೆ ಸಂಬಂಧಿಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದೆಂದು ಎಚ್ಚರಿಸಿದರು. ಅಧಿಕಾರಿಗಳು ಕೂಡ ಜವಬ್ದಾರಿಯುತವಾಗಿ ಕೆಲಸ ಮಾಡಬೇಕೆಂದು ಹೇಳಿದರು.
ರಾಯಪಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದ ಸಮುದಾಯ ಭವನ ನಿರ್ಮಾಣ ಕೆಲಸದ ಸ್ಥಳಕ್ಕೆ ಭೇಟಿ ನೀಡಿ, ಕೆಲಸ ಅಚ್ಚುಕಟ್ಟಾಗಿ ನಿರ್ಮಿಸಿಕೊಡುವಂತೆ ಸೂಚಿಸಿದರು. ಇನ್ನಷ್ಟು ಅನುದಾನದ ಅಗತ್ಯವಿದೆ ಎಂದು ಗ್ರಾಮಸ್ಥರು ಬೇಡಿಕೆಯಿಟ್ಟಾಗ, ಅವಶ್ಯವಿರುವಷ್ಟು ಅನುದಾನ ಒದಗಿಸಲಾಗುವುದೆಂದು ಭರವಸೆ ನೀಡಿದರು.
ಮನೆ-ಮನೆಗೆ ನೀರು ತಲುಪಲಿ: ಇಟಗ್ಯಾಳ ಹಾಗೂ ಮತ್ತಿತರೆ ಗ್ರಾಮಗಳಲ್ಲಿ ಜೆಜೆಎಂ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಕೆಲವು ಫಲಾನುಭವಿಗಳ ಮನೆಗೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು‌. ಪ್ರತಿದಿನ ಸರಿಯಾಗಿ ನೀರು ಸರಬರಾಜು ಆಗುತ್ತಿದೆಯೇ ? ನಲ್ಲಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿವೆಯೇ ? ಎಂದು ಪ್ರಶ್ನಿಸುವ ಮೂಲಕ ಯೋಜನೆಯ ಬಗ್ಗೆ ಮಾಹಿತಿ ಪಡೆದರು. ಕುಡಿಯುವ ನೀರಿನ ಸಮಸ್ಯೆಯ ಶಾಶ್ವತ ಪರಿಹಾರ ಕಲ್ಪಿಸಲು ಈ ಯೋಜನೆ ಸಾಕಷ್ಟು ಸಹಕಾರಿಯಾಗಿದ್ದು, ಎಲ್ಲ ಕೆಲಸಗಳು ಸರಿಯಾಗಿ ಆಗಬೇಕು. ಎಲ್ಲಿಯೂ ಕಾಮಗಾರಿ ಗುಣಮಟ್ಟದ ಬಗ್ಗೆ ದೂರುಗಳಿಗೆ ಆಸ್ಪದ ಕೊಡಬಾರದು ಎಂದು ಸೂಚಿಸಿದರು.
ಬೆಲ್ದಾಳ ಗ್ರಾಮದಲ್ಲಿ ತೆರೆದ ಬಾವಿ ನಿರ್ಮಿಸಬೇಕೆಂದು ಗ್ರಾಮಸ್ಥರು ಮನವಿ ಸಲ್ಲಿಸುತ್ತಿದ್ದಂತೆ ಸಂಬಂಧಿಸಿದ ಅಧಿಕಾರಿಯನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ, ಜೆಜೆಎಂ ಕಾಮಗಾರಿಯಲ್ಲಿ ಏಕೆ ಬಾವಿ ಕೆಲಸವನ್ನು ಇಟ್ಟಿಲ್ಲವೆಂದು ವಿಚಾರಿಸಿದರು. ಎಲ್ಲೆಲ್ಲಿ ತೆರೆದ ಬಾವಿಗಳ ಅವಶ್ಯಕತೆಯಿದೆ ಎನ್ನುವ ಗ್ರಾಮಗಳ ಪಟ್ಟಿ ಸಲ್ಲಿಸಿದಲ್ಲಿ ಕೆಕೆಆರ್ ಡಿಬಿ ಅಥವಾ ನರೇಗಾ ಯೋಜನೆಯಡಿ ಹೊಸ ತೆರೆದ ಬಾವಿಗಳನ್ನು ನಿರ್ಮಿಸಿಕೊಡಲು ಕ್ರಮ ವಹಿಸಲಾಗುವುದೆಂದು ಹೇಳಿದರು.
ಚಿಂತಾಕಿ ಆಸ್ಪತ್ರೆಯ ಬಗ್ಗೆ ಮೆಚ್ಚುಗೆಚಿಂತಾಕಿ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು. ಚಿಕಿತ್ಸೆ, ವೈದ್ಯರ ಸ್ಪಂದನೆಯ ಕುರಿತು ಆಸ್ಪತ್ರೆಯಲ್ಲಿದ್ದ ರೋಗಿಗಳಿಂದ ಮಾಹಿತಿ ಪಡೆದರು. ಆಸ್ಪತ್ರೆಯಲ್ಲಿನ ಸ್ವಚ್ಛತೆ ಹಾಗೂ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು, ಕ್ಣೇತ್ರದ ಎಲ್ಲ ಕಡೆಗಳಲ್ಲಿಯೂ ಇದೇ ರೀತಿಯಲ್ಲಿ ಸುಧಾರಣೆಯಾಗಬೇಕೆಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ನಾಗಮಾರಪಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರನ್ನು ವಿಚಾರಿಸಿ, ಇಲಾಖೆಯ ಕೆಲಸ ಕಾರ್ಯಗಳು ಹೇಗೆ ನಡೆಯುತ್ತಿವೆ ಎಂದು ವಿವರಣೆ ಪಡೆದರು. ಆರೋಗ್ಯ ಇಲಾಖೆಯ ಯೋಜನೆಗಳನ್ನು ಜನತೆಯ ಬಳಿಗೆ ಪರಿಣಾಮಕಾರಿಯಾಗಿ ತಲುಪಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ರಮೇಶ ಉಪಾಸೆ, ಮಾರುತಿ ರೆಡ್ಡಿ ಪಟ್ನೆ, ರಾಮರೆಡ್ಡಿ ಪಾಟೀಲ, ರವೀಂದ್ರ ರೆಡ್ಡಿ, ನಾಗನಾಥ ಮೋರ್ಗೆ, ಗೋವಿಂದ ರೆಡ್ಡಿ, ಖಂಡೋಬಾ ಕಂಗಟೆ, ವೀರಾರೆಡ್ಡಿ, ಜಗದೀಶ್ ಪಾಟೀಲ್, ರಾವಸಾಬ್ ಪಾಟೀಲ್, ಸುಜಿತ್ ರಾಠೋಡ್, ಪ್ರದೀಪ ಪವಾರ, ಬಂಟಿ ರಾಂಪೂರೆ, ಉದಯ ಸೋಲಾಪೂರೆ, ವೀರೇಶ ಅಲ್ಮಾಜೆ, ಸಂಜು ಒಡೆಯರ್, ಎಂ.ಡಿ ನಯ್ಯೂಮ್, ಶರಣಪ್ಪ ಪಾಟೀಲ ಇಟಗ್ಯಾಳ, ಶಿವಕುಮಾರ ಮಜಗೆ, ನಾಗರೆಡ್ಡಿ ಚಿಂತಾಕಿ, ಸಂಜು ರೆಡ್ಡಿ ಚಿಂತಾಕಿ ಹಾಗೂ ಇತರರು ಉಪಸ್ಥಿತರಿದ್ದರು.
Ghantepatrike kannada daily news Paper

Leave a Reply

error: Content is protected !!