ವಿಜಯಪುರ

ದಲಿತರು ವಿಶ್ವ ಸಾಹಿತ್ಯ ಓದಿ, ವಿಶ್ವ ಸಾಹಿತ್ಯ ರಚಿಸುವಂತಾಗಬೇಕು : ಮೂಡ್ನಾಕೂಡು ಚಿನ್ನಸ್ವಾಮಿ

ವಿಜಯಪುರ: 10ನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ (ಪ್ರಬುದ್ಧ ಭಾರತ) ಕಾರ್ಯಕ್ರಮಕ್ಕೆ 2023 ಜುಲೈ 29ರಂದು ಚಾಲನೆ ನೀಡಲಾಗಿದ್ದು, ಎರಡನೇ ದಿನದ ಬೆಳ್ಳಿ ಸಂಭ್ರಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಭಾನುವಾರದಂದು ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆಯಿತು .

ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ, ‘ದಲಿತ ಬರಹಗಾರರು ಅಧ್ಯಯನ, ಸಂಶೋಧನೆಯಲ್ಲಿ ಹೆಚ್ಚು ತೊಡಗಬೇಕು’ . ‘ದಲಿತ ಬರಹಗಾರರಿಗೆ, ವಿದ್ಯಾರ್ಥಿಗಳಿಗೆ ಕಾಲೇಜು, ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಕೆಲವರು ಆಪಾದಿಸುತ್ತಾರೆ. ಆದರೆ, ಅಂಬೇಡ್ಕರ್ ಗೆ ಯಾರು ಪ್ರೋತ್ಸಾಹ ನೀಡಿದ್ದರು. ಹೀಗಾಗಿ ನಮಗೆಲ್ಲ ಅಂಬೇಡ್ಕರೇ ದೊಡ್ಡ ಪ್ರೋತ್ಸಾಹ’ ಎಂದು ಹೇಳಿದರು. ‘ದಲಿತ ಸಾಹಿತ್ಯ ಬೇರೆ ಬೇರೆ ಭಾಷೆಗಳಿಗೆ ಹೆಚ್ಚೆಚ್ಚು ಭಾಷಾಂತರವಾಗಬೇಕಿದೆ. ಭಾರತದ ನೈಜ ಜನ ಜೀವನದ ಅನುಭವ ಇರುವುದೇ ದಲಿತ ಸಾಹಿತ್ಯದಲ್ಲಿ ಹೀಗಾಗಿ ಇದು ಬೇರೆ ಭಾಷೆಗಳಿಗೆ ಭಾಷಾಂತರವಾಗಬೇಕಿದೆ’ ಎಂದರು.

‘ದಲಿತ ಸಾಹಿತ್ಯ ಹೇಗಿದೆಯೋ ಹಾಗೇ ಬೇರೆ ಭಾಷೆಗಳಿಗೆ ಅನುವಾದವಾಗಬೇಕಾದರೆ ದಲಿತ ಭಾಷಾಂತರಕಾರರೇ ಬೇಕು. ಆಗ ಮಾತ್ರ ಯಥಾ ಪ್ರಕಾರ ಅನುವಾದ ಸಾಧ್ಯ’ ಎಂದರು. ‘ದಲಿತರು ವಿಶ್ವ ಸಾಹಿತ್ಯ ಓದಿ, ವಿಶ್ವ ಸಾಹಿತ್ಯ ರಚಿಸುವಂತಾಗಬೇಕು. ಬ್ರಾಹ್ಮಣ ಧರ್ಮದ ಅವಿವೇಕವನ್ನು ತೆರೆದು ತೋರಿಸುವ ಶಕ್ತಿ ದಲಿತ ಸಾಹಿತ್ಯಕ್ಕೆ ಮಾತ್ರ ಇದೆ’ ಎಂದರು.

‘800 ವರ್ಷ ಭಾರತವನ್ನು ಮೊಘಲರು ಆಳಿದರೂ ಬ್ರಾಹ್ಮಣರಿಗೆ ಯಾವುದೇ ತೊಂದರೆಯಾಗಿರಲಿಲ್ಲ. ಮೊಘಲರ ಅವಧಿಯಲ್ಲಿ ಬ್ರಾಹ್ಮಣರು ದಿವಾನರಾಗಿ ಅಧಿಕಾರ ಅನುಭವಿಸಿದ್ದರು. ಮೊಘಲರು ಇವರಿಗೆ ಯಾವುದೇ ತೊಂದರೆ ನೀಡಲಿಲ್ಲ. ಆದರೆ, ಬ್ರಿಟಿಷರ ಅವಧಿಯಲ್ಲಿ ಹೀಗಾಗಲಿಲ್ಲ. ಅವರು ಕಾಯ್ದೆ, ಕಾನೂನು ಜಾರಿಗೆ ತಂದರು. ಇದು ಬ್ರಾಹ್ಮಣರ ಹಿತಾಶಕ್ತಿಗೆ ಧಕ್ಕೆಯಾಯಿತು. ಮೊಘಲರನ್ನು ಸಹಿಸಲು ಆಗದೇ ವಿರೋಧ ವ್ಯಕ್ತಪಡಿಸಿದರು’ ಎಂದು ಹೇಳಿದರು.

‘ಬ್ರಾಹ್ಮಣರು ಸತಿ ಪದ್ಧತಿ ಪರವಾಗಿ ಬ್ರಿಟಿಷ್ ಕೋರ್ಟ್‌ನಲ್ಲಿ ವಾದ ಮಾಡಿದರು. ಕೇರಳದಲ್ಲಿ ಈಳವ ಸಮುದಾಯದ ಮಹಿಳೆಯರು ಎದೆ ಮೇಲೆ ವಸ್ತ್ರ ಧರಿಸಬಾರದು ಎಂದು ಬ್ರಿಟಿಷ್ ನ್ಯಾಯಾಲಯದಲ್ಲಿ ವಾದ ನಡೆಸಿದರು. ಈಳವ ಮಹಿಳೆಯರು ಬ್ರಾಹ್ಮಣ ಹೆಣ್ಣು ಮಕ್ಕಳ ರೀತಿ ವಸ್ತ್ರಧರಿಸಬಾರದು ಎಂದು ವಾದಿಸಿದರು. ಇದೇ ಕಾರಣಕ್ಕೆ ಕೇರಳದಲ್ಲಿ ಈಳವರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತಧರ್ಮಕ್ಕೆ ಮತಾಂತರವಾದರು. ಕ್ರೈಸ್ತಧರ್ಮೀಯ ಹೆಣ್ಣು ಮಕ್ಕಳು ಧರಿಸುವ ವಸ್ತ್ರವನ್ನು ಈಳವ ಹೆಣ್ಣುಮಕ್ಕಳು ಧರಿಸಲು ಅವಕಾಶ ಕಲ್ಪಿಸಿದರು’ ಎಂದರು.

‘ ಜನರಿಗೆ ಪುರಾಣಗಳನ್ನು ನಂಬಿಸಿ, ಮೂರ್ಖರನ್ನಾಗಿ ಮಾಡಲು ಬ್ರಾಹ್ಮಣರು ಹವಣಿಸುತ್ತಿದ್ದಾರೆ. ದಲಿತರಿಗೆ ಕೇವಲ ಅಕ್ಷರ ಮಾತ್ರವಲ್ಲ. ಅನ್ನ, ನೀರು ಕೊಡದೇ ಬ್ರಾಹ್ಮಣರು ವಂಚಿಸಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಬಾರದೇ ಇದಿದ್ದರೇ ದಲಿತರ ಪರಿಸ್ಥಿತಿ ಬದಲಾಗುತ್ತಿರಲಿಲ್ಲ’ ಎಂದರು.

“ಅಂಬೇಡ್ಕರ್ ಎಂಬ ಒಬ್ಬ ವ್ಯಕ್ತಿಯ ಹೋರಾಟದಿಂದ ದಲಿತರು ಇಂದು ಸಮಾನತೆ, ಸ್ವಾತಂತ್ರ್ಯದ ಹಕ್ಕುಗಳನ್ನು ಪಡೆದುಕೊಂಡು ಸುಧಾರಣೆಯಾಗಿದ್ದಾರೆ’ ಎಂದರು.

ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಪ್ರೊ. ಎಚ್‌.ಟಿ.ಪೋತೆ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅರ್ಜುನ ಗೊಳಸಂಗಿ, ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಚೆಲುವರಾಜು ಉಪಸ್ಥಿತರಿದ್ದರು.

ಗೌರವ ಪ್ರಶಸ್ತಿ

ದಲಿತ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆರ್.ದೊಡ್ಡಗೌಡ, ವೀರ ಹನುಮಾನ, ಶ್ರೀಶೈಲ ನಾಗರಾಳ, ಡಾ.ಗವಿಸಿದ್ದಪ್ಪ ಪಾಟೀಲ, ಮುತುರ್ಜಾ ಬೇಗಂ ಕೊಡಗಲಿ, ಹಾರೋಹಳ್ಳಿ ರವೀಂದ್ರ, ಪರಶುರಾಮ ಶಿವಶರಣ ಹಾಗೂ ನರೇಂದ್ರ ನಾಗವಾಲ(ಸಮಾಜ ಸೇವೆ), ಮುಳ್ಳೂರ ಶಿವಮಲ್ಲು(ದಲಿತ ಚಳವಳಿ), ಡಾ.ಸಂಜೀವಕುಮಾ‌ರ್ ಮಾಲಗತಿ(ಪತ್ರಿಕಾರಂಗ), ರಾಜು ವಿಜಯಪುರ (ಪತ್ರಿಕಾರಂಗ), ಸೌಜನ್ಯ ಕರಡೋಣಿ (ಚಿತ್ರಕಲೆ) ಸಿ.ಆರ್.ನಟರಾಜ(ಸಂಗೀತ) ಹಾಗೂ ದೇವು ಕೆ.ಅಂಬಿಗ(ಸಿವಿಮಾ) ಅವರಿಗೆ ಬೆಳ್ಳಿ ಸಂಭ್ರಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪುಸ್ತಕ ಪ್ರಶಸ್ತಿ

ಬಿದಲೋಟಿ ರಂಗನಾಥ ಮತ್ತು ಡಾ.ಸದಾಶಿವ ದೊಡಮನಿ(ಕಾವ್ಯ), ಶಾಂತನಾಯ್ಕ ಶಿರಗಾನಹಳ್ಳಿ (ಕಾದಂಬರಿ), ರೇಣುಕಾ ಹೆಳವರ(ಕತೆ). ಪಿ.ಅರಡಿ ಮಲ್ಲಯ್ಯ ಕಟ್ಟರ(ಸಂಶೋಧನೆ), ಪ್ರಸನ್ನ ನ೦ಜಾಪುರ ಮತ್ತು ಗಿರೀಶ ಮೂಗ್ತಿಹಳ್ಳಿ(ವಿಮರ್ಶೆ), ಪ್ರಭುಲಿಂಗ ನೀಲೂರ (ಅನುವಾದ), ಗೌಡಗೆರೆ ಮಾಯಾಶ್ರೀ(ಹರಟೆ),ಎಚ್‌.ಡಿ.ಉಮಾಶಂಕರ(ಅಂಕಣ ಬರಹ), ಸೋಮಲಿಂಗ ಗೆಣ್ಣೂರ(ವೈಚಾರಿಕ). ಎಂ.ಬಿ.ಕಟ್ಟಿ (ಸಂಕೀರ್ಣ), ಹೊಂಬಯ್ಯ ಹೊನ್ನಲಗೆರೆ ಮತ್ತು ಅಮರೇಶ ಯತಗಲ್ (ಸಂಪಾದನೆ) ಪೂರ್ಣಿಮಾ ಧಾಮಣ್ಣವರ ಮತ್ತು ರಾಯಸಾಬ ದರ್ಗಾದವರ(ಮೊದಲ ಕೃತಿ) ಅವರಿಗೆ ಪುಸ್ತಕ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ಗಣಪತಿ ಚಲವಾದಿ, ತಾಯರಾಜ್‌ ಮರ್ಚಟಹಾಳ ಮತ್ತು ಹುಸೇನಪ್ಪ ಅಮರಾಪೂರ ಅವರಿಗೆ ‘ದಲಿತ ಸಾಹಿತ್ಯ ಪರಿಷತ್ತಿನ ಅತ್ಯುತ್ತಮ ಸಂಘಟಕ ಸಾಧಕಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Ghantepatrike kannada daily news Paper

Leave a Reply

error: Content is protected !!