ಬೀದರ್

ತರಬೇತಿ ಕಾರ್ಯಕ್ರಮದಲ್ಲಿ ಶಿವಯ್ಯ ಸ್ವಾಮಿ ಸಲಹೆ ಬಯಲು ಬಹಿರ್ದೆಸೆ ಮುಕ್ತ ಬೀದರ್‍ಗೆ ಪಣ ತೊಡಿ

ಬೀದರ್: ಜಿಲ್ಲೆಯನ್ನು ಸ್ವಚ್ಛ ಹಾಗೂ ಬಯಲು ಬಹಿರ್ದೆಸೆ ಮುಕ್ತಗೊಳಿಸಲು ಜನ ಪಣ ತೊಡಬೇಕು ಎಂದು ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ಸಲಹೆ ಮಾಡಿದರು.
ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಸ್ವಚ್ಛ ಹಾಗೂ ಬಯಲು ಬಹಿರ್ದೆಸೆ ಮುಕ್ತ ಬೀದರ್ ಅಭಿಯಾನದ ಅಂಗವಾಗಿ ನಗರದ ಜನವಾಡ ರಸ್ತೆಯಲ್ಲಿ ಇರುವ ಜಿಲ್ಲಾ ಪಶು ವೈದ್ಯಕೀಯ ತರಬೇತಿ ಕೇಂದ್ರದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‍ನ ಪಶು ಸಖಿ, ಸ್ವಸಹಾಯ ಗುಂಪು ಹಾಗೂ ಜಿ.ಪಿ.ಎಲ್.ಎಫ್ ಸದಸ್ಯರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನರ ಸಹಭಾಗಿತ್ವದಿಂದ ಮಾತ್ರ ಯಾವುದೇ ಅಭಿಯಾನ ಯಶಸ್ವಿಗೊಳ್ಳಲು ಹಾಗೂ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ. ಹೀಗಾಗಿ ಶಾಂತೀಶ್ವರಿ ಸಂಸ್ಥೆ ನಡೆಸುತ್ತಿರುವ ಅಭಿಯಾನಕ್ಕೆ ಜಿಲ್ಲೆಯ ಜನರ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಸ್ವಚ್ಛ ಮನೆ, ಓಣಿ, ಗ್ರಾಮ, ಪಂಚಾಯಿತಿ, ಹೋಬಳಿ, ತಾಲ್ಲೂಕು ಹಾಗೂ ಜಿಲ್ಲೆಗಳ ನಿರ್ಮಾಣದಿಂದ ಮಹಾತ್ಮ ಗಾಂಧೀಜಿ ಅವರು ಕಂಡಿದ್ದ ಸ್ವಚ್ಛ ಭಾರತ ಕನಸು ಸಾಕಾರಗೊಳಿಸಬಹುದಾಗಿದೆ. ಪಶು ಸಖಿ, ಎಸ್‍ಎಚ್‍ಜಿ ಹಾಗೂ ಬಿ.ಪಿ.ಎಲ್.ಎಫ್. ಸದಸ್ಯರು ಸ್ವಚ್ಛತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಕೇಂದ್ರ ಸರ್ಕಾರದ 2023ನೇ ಸಾಲಿನ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ ವೇಳೆ ಜಿಲ್ಲೆ ಉತ್ತಮ ಸ್ಥಾನ ಪಡೆಯುವ ದಿಸೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶ್ರಮಿಸಬೇಕಿದೆ ಎಂದರು.
ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ಶರಣಯ್ಯ ಮಠಪತಿ ಮಾತನಾಡಿ, ಸರ್ಕಾರಿ ನೌಕರರು ಬಯಲು ಬಹಿರ್ದೆಸೆ ಮುಕ್ತ ಬೀದರ್ ಅಭಿಯಾನಕ್ಕೆ ಸಹಕಾರ ನೀಡಬೇಕು. ಸ್ವಚ್ಛ ಭಾರತ ಅಭಿಯಾನದ ಉದ್ದೇಶವನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಬೇಕು ಎಂದು ತಿಳಿಸಿದರು.
ಕೇಂದ್ರದ ಮುಖ್ಯ ಪಶು ವೈದ್ಯಾಧಿಕಾರಿ ಡಾ. ವಿಕ್ರಮ ಚಾಕೋತೆ ಮಾತನಾಡಿ, ಸ್ವಚ್ಛ ಹಾಗೂ ಬಯಲು ಬಹಿರ್ದೆಸೆ ಬೀದರ್ ಅಭಿಯಾನದ ಯಶಸ್ವಿಗಾಗಿ ಶಾಂತೀಶ್ವರಿ ಸಂಸ್ಥೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ. ಸಂಸ್ಥೆಯ ಉತ್ತಮ ಕಾರ್ಯಕ್ಕೆ ಇಲಾಖೆ ಸಹಕಾರ ಇರಲಿದೆ ಎಂದು ಹೇಳಿದರು.
ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಾಗರಾಜ ಮಠ ಮಾತನಾಡಿದರು. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‍ನ ಜಿಲ್ಲಾ ಕೃಷಿ ವ್ಯವಸ್ಥಾಪಕ ಆಕಾಶ ಸ್ವಾಮಿ ತರಬೇತಿ ನಡೆಸಿಕೊಟ್ಟರು. ಸ್ವಚ್ಛ ಭಾರತ ಅಭಿಯಾನದ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.
ನಾಗಯ್ಯ ಸ್ವಾಮಿ ನಿರೂಪಿಸಿದರು. ಗುರುದಾಸ ಹಲಗೆ ಸ್ವಾಗತಿಸಿದರು. ಶರಣಯ್ಯ ಸ್ವಾಮಿ ವಂದಿಸಿದರು.

Ghantepatrike kannada daily news Paper

Leave a Reply

error: Content is protected !!