ವಿದೇಶ

ಗೋಡೆ ಕುಸಿದು 11 ಮಂದಿ ಕಾರ್ಮಿಕರು ಸಾವು

Source : Associated Press

ಇಸ್ಲಾಮಾಬಾದ್: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಹೊರವಲಯದಲ್ಲಿ ನಿರ್ಮಾಣ ಹಂತದ ಸೇತುವೆ ಬಳಿಯ ಗೋಡೆ ಕುಸಿದು 11 ಕಾರ್ಮಿಕರು ಬುಧವಾರ ಮುಂಜಾನೆ ಸಾವಿಗೀಡಾಗಿದ್ದಾರೆ ಎಂದು ಪೊಲೀಸ್ ಮತ್ತು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಸೇತುವೆ ನಿರ್ಮಾಣದ ಸ್ಥಳದಲ್ಲಿನ ರಸ್ತೆಬದಿಯ ತಮ್ಮ ಟೆಂಟ್‌ಗಳಲ್ಲಿ ಕಾರ್ಮಿಕರು ಕುಳಿತಿದ್ದಾಗ ಗೋಡೆ ಬಿದ್ದಿದೆ.

ಸ್ಥಳೀಯ ಪೊಲೀಸ್ ಅಧಿಕಾರಿ ಮತ್ತು ರಕ್ಷಣಾ ತುರ್ತು ಸೇವೆಯ ಮೊಹಮ್ಮದ್ ಅಕ್ರಂ ಮಾತನಾಡಿ, ನೆರೆಯ ಗೊಲ್ರಾ ಬಳಿಯಲ್ಲಿ ಮುಂಗಾರು ಮಳೆ ಸುರಿಯುತ್ತಿದ್ದು, ಈ ನಡುವೆಯೇ ಕುಸಿತ ಸಂಭವಿಸಿದೆ ಮತ್ತು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಹೇಳಿದರು.

ಮಳೆಯಿಂದಾಗಿ ಪೂರ್ವ ಪಂಜಾಬ್ ಪ್ರಾಂತ್ಯದಲ್ಲಿ ಪಾಕಿಸ್ತಾನದ ನದಿಗಳು ತುಂಬಿ ಹರಿಯುತ್ತಿವೆ. ನೂರಾರು ಹಳ್ಳಿಗಳು ಮುಳುಗಿವೆ ಮತ್ತು ಕನಿಷ್ಠ 15,000 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಕಳೆದ ಬಾರಿ ಮಳೆಯಿಂದಾಗಿ ಪಾಕಿಸ್ತಾನದ ಮೂರನೇ ಒಂದು ಭಾಗದಷ್ಟು ಪ್ರದೇಶ ನೀರಿನಲ್ಲಿ ಮುಳುಗಿದ್ದು, 1,739 ಜನರು ಮೃತಪಟ್ಟಿದ್ದರು. ಇದಾದ ಒಂದು ವರ್ಷದ ನಂತರ ಪಾಕಿಸ್ತಾನದಲ್ಲಿ ಮತ್ತೆ ಮಳೆಯ ಆರ್ಭಟ ಜೋರಾಗಿದೆ.

2022 ರಲ್ಲಿ ಪ್ರವಾಹವು ನಗದು ಕೊರತೆಯಿರುವ ಪಾಕಿಸ್ತಾನದಲ್ಲಿ 30 ಬಿಲಿಯನ್ ಡಾಲರ್ ನಷ್ಟವನ್ನು ಉಂಟುಮಾಡಿತು.

Ghantepatrike kannada daily news Paper

Leave a Reply

error: Content is protected !!