ಆಯುಷ್ಮಾನ್ ಭಾರತ: ಸಾಯಿ ಗಣೇಶ ಆಸ್ಪತ್ರೆಗೆ ಪ್ರಶಸ್ತಿ
ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಅಡಿಯ ಸಾಧನೆಗೆ ಬೀದರ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಯಿ ಗಣೇಶ ಕಿಡ್ನಿ ಆ್ಯಂಡ್ ಎಂಡ್ರಾಲಜಿ ಆಸ್ಪತ್ರೆಯ ಮುಖ್ಯಸ್ಥ ಡಾ. ಶಿವಪುತ್ರ ಖಪ್ಲೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು
ಬೀದರ್: ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಜಿಲ್ಲೆಯಲ್ಲೇ ಅತಿ ಹೆಚ್ಚು ರೋಗಿಗಳಿಗೆ ವೈದ್ಯಕೀಯ ಸೇವೆ ಒದಗಿಸಿದ್ದಕ್ಕೆ ಇಲ್ಲಿಯ ಚಿದ್ರಿ ರಸ್ತೆಯಲ್ಲಿ ಇರುವ ಸಾಯಿ ಗಣೇಶ ಕಿಡ್ನಿ ಆ್ಯಂಡ್ ಎಂಡ್ರಾಲಜಿ ಆಸ್ಪತ್ರೆಗೆ ಪ್ರಶಸ್ತಿ ಲಭಿಸಿದೆ.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಗಂಜಲಖೇಡ ಪ್ರಶಸ್ತಿ ಪ್ರದಾನ ಮಾಡಿದರು.
ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಯೋಜನೆಯಡಿ ನಿತ್ಯ ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಶ್ರಮಿಸಲಾಗುತ್ತಿದೆ ಎಂದು ಪ್ರಶಸ್ತಿ ಸ್ವೀಕರಿಸಿದ ಆಸ್ಪತ್ರೆಯ ಮುಖ್ಯಸ್ಥರೂ ಆದ ಕಿಡ್ನಿ ತಜ್ಞ ಡಾ. ಶಿವಪುತ್ರ ಖಪ್ಲೆ ಹೇಳಿದರು.
ಪ್ರಶಸ್ತಿ ಆಸ್ಪತ್ರೆಯ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೋಗಗಳಿಗೆ ಯೋಜನೆ ಲಾಭ ದೊರಕಿಸಿಕೊಡುವ ದಿಸೆಯಲ್ಲಿ ಕಾರ್ಯ ನಿರ್ವಹಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಕಿರಣ ಪಾಟೀಲ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯ ಪ್ರಾದೇಶಿಕ ಸಹಾಯಕ ಸಂಯೋಜಕ ಡಾ. ಎಸ್.ಬಿ. ದೇಶಮುಖ, ಜಿಲ್ಲಾ ಸಂಯೋಜಕಿ ಡಾ. ಪೂಜಾ ಪಿ. ರಾವ್, ಡಾ. ಶಿವಶಂಕರ ಬೊಮ್ಮಾ, ಡಾ. ರಾಜಶೇಖರ ಪಾಟೀಲ ಮೊದಲಾದವರು ಇದ್ದರು.