ಬೀದರ್

ಸ್ವಾರ್ಥವಿಲ್ಲದ ಬದುಕು ಸರ್ವ ಕಾಲಕ್ಕೂ ಶ್ರೇಷ್ಠ : ಶ್ರೀ ರಂಭಾಪುರಿ ಜಗದ್ಗುರುಗಳು

ಬೀದರ- ಜುಲೈ-26.ಮನುಷ್ಯನ ಬುದ್ಧಿ ವಿಕಾಸಗೊಂಡಷ್ಟು ಭಾವನೆಗಳು ಬೆಳೆಯುತ್ತಿಲ್ಲ. ಸ್ವಾರ್ಥ ಮತ್ತು ಸಂಕುಚಿತ ಮನೋಭಾವನೆ ಹೆಚ್ಚು ಬೆಳೆಯುತ್ತಿರುವ ಕಾರಣ ಜೀವನದಲ್ಲಿ ನೆಮ್ಮದಿ ಕಾಣುತ್ತಿಲ್ಲ. ಸ್ವಾರ್ಥವಿಲ್ಲದ ಬದುಕು ಸರ್ವ ಕಾಲಕ್ಕೂ ಶ್ರೇಷ್ಠವಾದುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಬುಧವಾರ ತಾಲೂಕಿನ ಕೊಳ್ಳಾರ ಕೆ. ವ್ಯಾಪ್ತಿಯಲ್ಲಿ ಬರುವ ಶ್ರೀ ಜಗದ್ಗುರು ಪಂಚಾಚಾರ್ಯ ಪುಣ್ಯಾಶ್ರಮದಲ್ಲಿ ಜರುಗಿದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅಶೀರ್ವಚನ ನೀಡುತ್ತಿದ್ದರು.
ಮನುಷ್ಯ ನೀರು ಶುದ್ಧಿ ಮಾಡುವುದನ್ನು ಮತ್ತು ಗಾಳಿ ಶುದ್ಧಿ ಮಾಡುವುದನ್ನು ಕಲಿತ. ಆದರೆ ತನ್ನಲ್ಲಿರುವ ಅವಗುಣಗಳನ್ನು ಕಳೆದುಕೊಳ್ಳುವುದನ್ನು ಮರೆತ. ಬಹಿರಂಗ ಅಷ್ಟೇ ಶುದ್ಧಿಯಾದರೆ ಸಾಲದು. ಅಂತರಂಗವೂ ಶುದ್ಧಿಯಾಗಿರಬೇಕು. ಜೀವನದ ಶ್ರೇಯಸ್ಸಿಗೆ ಬಹಿರಂಗ ಮತ್ತು ಅಂತರಂಗ ಎರಡೂ ಶುದ್ಧವಾಗಿರಬೇಕೆಂದು ರೇಣುಕ ಗೀತೆಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ನಿರೂಪಿಸಿದ್ದಾರೆ. ಅತ್ಯಂತ ಕೆಟ್ಟ ಸಮಯದಲ್ಲಿ ನಮ್ಮ ಕೈ ಬಿಟ್ಟವರನ್ನು ಮತ್ತು ಅಂಥದೇ ಸಮಯದಲ್ಲಿ ನಮ್ಮ ಕೈ ಹಿಡಿದವರನ್ನು ಯಾವತ್ತೂ ಮರೆಯಬಾರದು. ಕಷ್ಟ ಬಂದಾಗ ಕಲ್ಲಿನಂತೆ ಗಟ್ಟಿಯಾಗಿರಬೇಕು. ಸುಖ ಬಂದಾಗ ಹೂವಿನಂತೆ ಮೃದುವಾಗಿರಬೇಕು. ಜಗತ್ತಿನ ಎಲ್ಲ ಧರ್ಮಗಳು ಶಾಂತಿ ಸಾಮರಸ್ಯವನ್ನೇ ಹೇಳುತ್ತವೆ ಹೊರತು ಸಂಘರ್ಷವನ್ನಲ್ಲ. ಯತಾರ್ಥ ಜ್ಞಾನದ ಕೊರತೆಯಿಂದಾಗಿ ಮನುಷ್ಯನ ಬದುಕು ದಿಕ್ಕು ದಾರಿ ತಪ್ಪಿ ಹೋಗುತ್ತಿದೆ. ಅದನ್ನು ಶ್ರೀ ಗುರು ತನ್ನ ಜ್ಞಾನಾಮೃತ ಬೋಧನೆಯಿಂದ ತಿದ್ದಿ ಸನ್ಮಾರ್ಗಕ್ಕೆ ಕರೆ ತರುವ ಮಹತ್ಕಾರ್ಯ ಮಾಡಬೇಕಾಗಿದೆ ಎಂದರು.
ತಮಲೂರು ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಕೊಟ್ಟ ಮಾತು ಇಟ್ಟ ನಂಬಿಕೆ ಸುಳ್ಳಾದರೆ ಆತನ ಬೆಲೆ ಶೂನ್ಯವಾಗುತ್ತದೆ. ವೀರಶೈವ ಧರ್ಮದಲ್ಲಿರುವ ಆದರ್ಶ ಮೌಲ್ಯಗಳನ್ನು ಅರಿಯುವ ಆಚರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು. ಹುಡುಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯರು ಹೆಡಗಾಪುರ ಶಿವಲಿಂಗ ಶಿವಾಚಾರ್ಯರು, ಮೇಹಕರ ಹಿರೇಮಠದ ರಾಜೇಶ್ವರ ಶಿವಾಚಾರ್ಯರು ಮತ್ತು ಚಾಂಬೋಳ ರುದ್ರಮುನಿ ಶಿವಾಚಾರ್ಯರು ಧರ್ಮ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಈಶ್ವರಸಿಂಗ ಠಾಕೂರ ಮಾತನಾಡಿ ಹಿಂದೂ ಸಂಸ್ಕøತಿಯ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ಹಿಂದೂ ಸಮಾಜ ಒಗ್ಗಟ್ಟಿನಿಂದ ದೇಶದ ಭದ್ರತೆ ಮತ್ತು ಸಾಮರಸ್ಯ ಸೌಹಾರ್ದತೆ ಬೆಳೆಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದರು. ಬಸವರಾಜ ದೇಶಮುಖ, ಮಾರುತಿ ಪಂಚಬಾಯಿ, ಶಿವಶರಣಪ್ಪ ಸೀರಿ, ಗುರುರಾಜ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಪುಣ್ಯಾಶ್ರಮದ ಸಂಚಾಲಕರಾದ ವೇ.ಷಣ್ಮುಖಯ್ಯ-ಶ್ರೀಮತಿ ತೇಜಮ್ಮ ದಂಪತಿಗಳಿಗೆ ಸಹಸ್ರ ಚಂದ್ರದರ್ಶನ ನಿಮಿತ್ಯ ಶ್ರೀ ರಂಭಾಪುರಿ ಜಗದ್ಗುರುಗಳು ಶಾಲು ಫಲ ಪುಷ್ಪವಿತ್ತು ಶುಭ ಹಾರೈಸಿದರು.
ಲೋಕ ಕಲ್ಯಾಣಾರ್ಥವಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದಲ್ಲಿ ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಭಕ್ತ ಸಮುದಾಯಕ್ಕೆ ಶುಭ ಹಾರೈಸಿದರು. ಸಮಾರಂಭದ ನಂತರ ಅನ್ನ ದಾಸೋಹ ನೆರವೇರಿತು.

Ghantepatrike kannada daily news Paper

Leave a Reply

error: Content is protected !!