ರಾಜ್ಯ

ಸತ್ವ ಮತ್ತು ಸಮೃದ್ಧಿ ಎಚ್.ಎಸ್.ವಿ ಅವರ ಕಾವ್ಯದ ವೈಶಿಷ್ಟ್ಯ: ಬಿ.ಆರ್‌. ಲಕ್ಷ್ಮಣರಾವ್

ಕರ್ನಾಟಕ ಸುಗಮ ಸಂಗೀತ ಪರಿಷತ್ತು, ಬೆಂಗಳೂರಿನ ಅಂಕಿತ ಪುಸ್ತಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರಿಗೆ ‘ಗೀತ ಗೌರವ’ ಮತ್ತು ಅವರ ಸಾಹಿತ್ಯ ಕೇಂದ್ರಿತ ಆತ್ಮಕಥನ ‘ನೆನಪಿನ ಒರತೆ’ ಬಿಡುಗಡೆ ಸಮಾರಂಭವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 2023 ಆಗಸ್ಟ್ 2ರ, ಬುಧವಾರದಂದು ಅದ್ಧೂರಿಯಾಗಿ ನೆರವೇರಿತು.

ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಕವಿ ಹಾಗೂ ಸಾಹಿತಿ ದೊಡ್ಡರಂಗೇಗೌಡ, “ಆಳವಾಗುತ್ತಾ ಅಗಲವಾಗುತ್ತ, ಒಳಸುಳಿವುಗಳಲ್ಲಿ ಮಡುವಾಗುತ್ತಾ, ಸೀಳಿಕೊಂಡು ನುಗ್ಗುತ್ತದೆ ಎಚ್.ಎಸ್. ವಿ ಅವರ ಸಾಹಿತ್ಯ. ಇನ್ನು ಸಾಹಿತ್ಯದ ಸೂರ್ಯನನ್ನು ಹಿಡಿಯುವುದು ಅವರ ಅಭೀಪ್ಸೆ. ಎಚ್.ಎಸ್.ವಿ ಅವರು ಅನೇಕ ಮೌಲಿಕ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಅವುಗಳೊಳಗೆ ಭಾವಗೀತೆ ಗುಪ್ತಗಾಮಿನಿಯಾಗಿ ಹರಿದಿದೆ,” ಎಂದು ತಿಳಿಸಿದರು.

ಹಿರಿಯ ಕವಿ ಬಿ.ಆರ್. ಲಕ್ಷ್ಮಣರಾವ್ ಮಾತನಾಡಿ, “ಸತ್ವ ಮತ್ತು ಸಮೃದ್ಧಿ ಎಚ್.ಎಸ್.ವಿ ಅವರ ಕಾವ್ಯದ ವೈಶಿಷ್ಟ್ಯ. ಕಾವ್ಯವಷ್ಟೇ ಅಲ್ಲದೇ ಬಹುತೇಕ ಎಲ್ಲಾ ಪ್ರಕಾರಗಳಲ್ಲಿಯೂ ಅವರ ಕೊಡುಗೆ ಅಗ್ರಗಣ್ಯ. ಸುಗಮ ಸಂಗೀತ ಮತ್ತು ಚಲನಚಿತ್ರಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಕಳೆದ ಐದು ಆರು ದಶಕಗಳ ಪರೋಕ್ಷ ಸಾಹಿತ್ಯ ಚರಿತ್ರೆಯಾಗಿ ಕೃತಿಗೆ ತಾನಾಗಿ ಒಂದು ಮಹತ್ವದ ಸ್ಥಾನ ಪ್ರಾಪ್ತಿಯಾಗಿದೆ. ‘ನೆನಪಿನ ಒರತೆ’ ನಮ್ಮ ಕಾಲದ ಅಥವಾ ನಮ್ಮ ತಲೆಮಾರಿನ ಮಹತ್ವದ ಚರಿತ್ರೆಯಾಗಿ ಸ್ಥಾನವನ್ನು ಗಿಟ್ಟಿಸಿದೆ,” ಎಂದರು.

ಸಾಹಿತಿ ಹಾಗೂ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ, “ಶಿಥಿಲವಾಗುತ್ತಿರುವ ಮಾನವೀಯ ಸಂಬಂಧಗಳಲ್ಲಿ ಸಂಬಂಧವನ್ನು ಎತ್ತಿ ಹಿಡಿಯುವ ಅಪರೂಪದ ವ್ಯಕ್ತಿ ಎಚ್.ಎಸ್.ವಿ. ನಮ್ಮ ಕಾಲದಲ್ಲಿ ಅವರು ಪಾಪ್ಯುಲರ್ ಕಲ್ಚರ್ ಅನ್ನು ಪ್ರವೇಶ ಮಾಡಿ ತಮ್ಮನ್ನು ತಾವು ಕಾಪಾಡಿಕೊಂಡಿದ್ದಾರೆ. ಇದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ,” ಎಂದು ತಿಳಿಸಿದರು.

ಚಲನಚಿತ್ರ ಹಾಗೂ ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಂ, “ಜಗತ್ತಿನ ಇಡೀ ಮನುಕುಲದ ಸಾಲಿನಂತೆ ಅವರು ಪದ್ಯಗಳನ್ನು ಬರೆಯುತ್ತಾರೆ. ಅವೆಲ್ಲವೂ ಇಂದಿಗೂ ಕೂಡ ಜೀವಂತ. ನನ್ನ ಧಾರವಾಹಿಗಳಿಗೆ ಅವರು ಹಲವು ಗೀತೆಗಳನ್ನು ನೀಡಿದ್ದಾರೆ. ಅವರೊಂದಿಗೆ ಕೆಲಸ ಮಾಡಿದ ಅನುಭವ ಬಹಳಷ್ಟು ಪ್ರಿಯ,” ಎಂದು ಎಚ್.ಎಸ್.ವಿ ಅವರೊಂದಿಗಿನ ತಮ್ಮ ಒಡನಾಟವನ್ನು ನೆನೆದರು”.

ಚಲನಚಿತ್ರ ಹಾಗೂ ಕಿರುತೆರೆ ನಿರ್ದೇಶಕ ಟಿ.ಎಸ್. ನಾಗಾಭರಣ ಮಾತನಾಡಿ, “ಕರ್ನಾಟಕದಲ್ಲಿ ಇಬ್ಬರೇ ಚಿನ್ನಾರಿ ಮುತ್ತುಗಳಿರುವುದು. ಒಬ್ಬ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಹಾಗೂ ಇನ್ನೊಂದು ಅದನ್ನು ಸೃಷ್ಟಿಸಿದ ಎಚ್.ಎಸ್.ವಿಯವರು. ಮುತ್ತಿನಂತಹ ಮಾತಿನ ಜೊತೆಯಲ್ಲಿ ಇಡೀ ಕರ್ನಾಟಕವನ್ನು ತಮ್ಮ ಮುತ್ತಿನ ಸಾಹಿತ್ಯದಲ್ಲಿ ಬಿಗಿಯಾಗಿ ಬಂಧಿಸಿದವರು ಎಚ್.ಎಸ್. ವೆಂಕಟೇಶಮೂರ್ತಿ. ಇವತ್ತು ಒಂದು ಖುಷಿ ಹಾಗೂ ಇಪ್ಪತ್ತು ವರ್ಷ ಕಾಯುವಿಕೆಯ ಸಂಭ್ರಮ ಜೊತೆಗೂಡಿದೆ. ಆ ಕನಸ್ಸನ್ನು ಎಚ್.ಎಸ್.ವಿಯವರು ತಮ್ಮದೇ ಆದಂತಹ ವರ್ಚಸ್ಸಿನಿಂದ ನನಸು ಮಾಡಬೇಕೆಂದರು.”

ಹಿರಿಯ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ, “ನನ್ನ ಸಾಹಿತ್ಯಿಕ ಜೀವನದಲ್ಲಿ ಹಲವಾರು ಜನಗಳು ಭಾಗಿಯಾಗಿದ್ದಾರೆ. ನನ್ನ ಸಾಹಿತ್ಯವನ್ನು, ಗೀತೆಗಳನ್ನು ಕರ್ನಾಟಕದ, ದೇಶ-ದೇಶದ ಮನೆಗಳಿಗೆ ತಲುಪಿಸಿದ್ದಾರೆ. ಇವೆಲ್ಲವೂ ನನಗೆ ಬಹಳಷ್ಟು ಸಂಭ್ರಮವನ್ನು ನೀಡಿದೆ” ಎಂದರು.

ಕಾರ್ಯಕ್ರಮದಲ್ಲಿ ವೈ.ಕೆ. ಮುದ್ದು ಕೃಷ್ಣ, ಮಲ್ಲೇಪುರಂ ಜಿ. ವೆಂಕಟೇಶ್, ನಾ. ಸೋಮಶೇಖರ್, ರಮೇಶ್ ಉಡುಪ, ಅಂಜನಾ ಹೆಗಡೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ‘ಭಾವ ರಂಗ ಚಿತ್ರ ಧಾರಾ- ಗಾಯನ’ ಕಾರ್ಯಕ್ರಮವು ಗಾಯಕರ ಸಹಭಾಗಿತ್ವದಲ್ಲಿ ಅದ್ಭುತವಾಗಿ ಮೂಡಿಬಂದಿತು.

Ghantepatrike kannada daily news Paper

Leave a Reply

error: Content is protected !!