ಮಹಿಳಾ ನಿಲಯದ ಯುವತಿಯರಿಗೆ ಕಂಕಣ ಭಾಗ್ಯ
ದಾವಣಗೆರೆ; ಜುಲೈ. 26 : ಸಂಪ್ರದಾಯವನ್ನು ಕೈಬಿಟ್ಟು ರಾಷ್ಟ್ರಕವಿ ಕುವೆಂಪುರವರ ಮಂತ್ರ ಮಾಂಗಲ್ಯ ಧಾರಣೆಯಂತೆ ಜಾತಿ, ಕುಲ, ಮತಗಳೆನ್ನದೇ ಮಹಿಳಾ ನಿಲಯದ ಯುವತಿಯರ ವಿವಾಹವನ್ನು ನೆರವೇರಿಸಲಾಗಿದೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಧಿವೃದ್ಧಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ ಹೇಳಿದರು.
ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ದಾವಣಗೆರೆ ಇವರ ಸಹಯೋಗದಲ್ಲಿ ನಗರದಲ್ಲಿನ ಇಂಡಸ್ಟ್ರಿಯಲ್ ಏರಿಯಾ ಶ್ರೀರಾಮನಗದಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿ ಜರುಗಿದ ವಿವಾಹ ಮಹೋತ್ಸವದಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ; ಅರುಣ್.ಕೆ ಆಗಮಿಸಿ ವಧುವರರಿಗೆ ಆಶೀರ್ವದಿಸಿದರು.
ಜುಲೈ 26 ರಂದು ರಾಜ್ಯ ಮಹಿಳಾ ನಿಲಯದಲ್ಲಿ 9 ವರ್ಷಗಳ ಕಾಲ ಆಶ್ರಯ ಪಡೆದ ರಮ್ಯ(30 ವರ್ಷ} ಮತ್ತು ವಿನೋಧ (34 ವರ್ಷ) ಎಂಬ ಇಬ್ಬರು ಯುವತಿಯರಿಗೆ ವಿಶೇಷ ರೀತಿಯಲ್ಲಿ ಸಾಂಪ್ರದಾಯವನ್ನು ಕೈಬಿಟ್ಟು, ಪುರೋಹಿತರನ್ನು ಕರೆಸದೇ ಸರಳ ವಿಧಾನದಲ್ಲಿ ವಿವಾಹ ಮಹೋತ್ಸವವನ್ನು ನೆರವೇರಿಸಲಾಯಿತು. ಆಶ್ರಿತರು ತಮ್ಮ ಜೀವನದಲ್ಲಿ ಸಾಕಷ್ಟು ಸಂಕಷ್ಟಗಳಿಗೆ ಒಳಗಾಗಿ ನಮ್ಮ ಸಂಸ್ಥೆಗೆ ಬಂದು ಸಣ್ಣ ಪುಟ್ಟ ತರಬೇತಿ ಪಡೆದು ಸ್ವಾವಲಂಬಿಗಳಾಗಿದ್ದಾರೆ.
ಇಬ್ಬರೂ ಮಹಿಳೆಯರು ಸ್ವ-ಇಚ್ಛೆಯಿಂದ ಸಂಸ್ಥೆಯಿಂದಲೇ ವಿವಾಹವಾಗಿ ಬಿಡುಗಡೆಯಾಗಲು ಒಪ್ಪಿದ್ದರಿಂದ ಪೊಲೀಸ್ ವಿಚಾರಣೆ ಮೂಲಕ ವರರ ವ್ಯಕ್ತಿತ್ವ ಹಾಗೂ ಸ್ಥಳ ಪರಿಶೀಲನೆ ನಡೆಸಿದ ನಂತರ ವಿವಾಹದ ಮಾಹಿತಿಯನ್ನು ಇಲಾಖಾ ನಿರ್ದೇಶಕರಿಗೆ ರವಾನಿಸಿ ಅವರ ಅನುಮೋದನೆ ಹಾಗೂ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು ವಿವಾಹವನ್ನು ಏರ್ಪಡಿಸಲಾಗಿದೆ ಎಂದರು.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸಮೀಪದ ಉಂಬಳಮನೆಯ ನಿವಾಸಿ ನಾಗರಾಜ ಪರಮೇಶ್ವರ ಹೆಗಡೆ ಎಂಬುವವರು ಸಂಸ್ಥೆಯ ನಿವಾಸಿ ರಮ್ಯಳನ್ನು ವರಿಸಿದರು. ಇವರು ಸ್ವಂತ ಅಡಿಕೆ ತೋಟದ ಕೃಷಿ ಚಟುವಟಿಕೆಯಲ್ಲಿ ಕಾರ್ಯ ನಿರ್ವಹಿಸುವುದರ ಜೊತೆಗೆ ಕ್ಯಾಟರಿಂಗ್ ಕೆಲಸ ಮಾಡುತ್ತಾರೆ.
ಅದೇ ರೀತಿಯಾಗಿ ಸಂಸ್ಥೆಯ ನಿವಾಸಿ ವಿನೋಧಳನ್ನು ಹರಿಹರ ತಾಲ್ಲೂಕಿನ ದೇವರಬೆಳಕೆರೆ ಗ್ರಾಮದ ನಿವಾಸಿ ಮಲ್ಲಿಕಾರ್ಜುನ ಯು.ಎಂ ವರಿಸಿದರು. ಇವರು ತಮ್ಮದೇ ಆದ ವ್ಯವಸಾಯ ಭೂಮಿಯನ್ನು ಹೊಂದಿದ್ದು, ಆರ್ಥಿಕವಾಗಿ ಸಧೃಡವಾಗಿರುತ್ತಾರೆ.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಕೆ ಪ್ರಕಾಶ್, ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಸೌಮ್ಯ ಶ್ರೀ, ರಾಜ್ಯ ಮಹಿಳಾ ನಿಲಯ, ದಾವಣಗೆರೆ ಅಧೀಕ್ಷಕರಾದ ಶ್ರೀಮತಿ ಶಕುಂತಲಾ ಬಿ ಕೋಳೂರ ಉಪಸ್ಥಿತರಿದ್ದರು.