ಬೀದರ್ ಮಹಾನಗರ ಪಾಲಿಕೆ ಪ್ರಸ್ತಾಪ: ಸಿಎಂಗೆ ಧನ್ಯವಾದ ಅರ್ಪಿಸಿದ ಸಚಿವರು
ಬೀದರ್, ಏ.15: ಬೀದರ್ ನಗರಸಭೆಯೊಂದಿಗೆ 6 ಗ್ರಾಮ ಪಂಚಾಯ್ತಿಗಳ 16 ಗ್ರಾಮಗಳನ್ನು ಸೇರಿಸಿ ದೊಡ್ಡ ನಗರ ಪ್ರದೇಶ ಎಂದು ಘೋಷಿಸಲು ಮತ್ತು ಬೀದರ್ ಮಹಾನಗರ ಪಾಲಿಕೆ ಪ್ರದೇಶ ಎಂದು ನಿರ್ದಿಷ್ಟಪಡಿಸಲು ಗೆಜೆಟ್ ಅಧಿಸೂಚನೆ ಹೊರಡಿಸಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
ನಾಳೆ ಮುಖ್ಯಮಂತ್ರಿಗಳು ಬೀದರ್ ಗೆ ಭೇಟಿ ನೀಡುತ್ತಿದ್ದು, 2025 ಕೋಟಿ ರೂ. ಮೌಲ್ಯದ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸುತ್ತಿದ್ದಾರೆ. ಈಗ ಈ ಗೆಜೆಟ್ ಅಧಿಸೂಚನೆ ಹೊರಬಿದ್ದಿದ್ದು, ಇದು ಬೀದರ್ ಪಾಲಿಗೆ ಐತಿಹಾಸಿಕ ಕ್ಷಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಬೀದರ್ ಮಹಾನಗರ ಪಾಲಿಕೆ ಆಗುವುದರಿಂದ ನಗರದ ಅಭಿವೃದ್ಧಿ ವೇಗ ಪಡೆಯಲಿದೆ ಮತ್ತು ಬೀದರ್ ಜಿಲ್ಲೆಯ ಸರ್ವಾಂಗೀಣ ಪ್ರಗತಿಗೆ ಅನುಕೂಲವಾಗುತ್ತದೆ ಎಂದು ಇಬ್ಬರೂ ಸಚಿವರು ತಿಳಿಸಿದ್ದಾರೆ.
ಸಂಸತ್ ಸದಸ್ಯರ ಹರ್ಷ: ಬೀದರ್ ನಗರಸಭೆಯನ್ನು ಮಹಾನಗರಪಾಲಿಕೆಯಾಗಿ ಉನ್ನತೀಕರಿಸುವ ನಿರ್ಧಾರ ಮಾಡಿ ಪ್ರಸ್ತಾವನೆಯ ಗೆಜೆಟ್ ಅಧಿಸೂಚನೆ ಹೊರಡಿಸಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಸಂಸತ್ ಸದಸ್ಯ ಸಾಗರ್ ಈ ಖಂಡ್ರೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಗರಾಭಿವೃದ್ಧಿ ಸಚಿವರು ಹಾಗೂ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.ಇದೇ ಸಂದರ್ಭದಲ್ಲಿ ಬೀದರ್ ನಗರದ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ.