ಬೀದರ್ನ ಕೋಟೆಯಲ್ಲಿ ಶಾಹೀನ್ ಫುಡ್ ಕೋರ್ಟ್ ಅನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಉದ್ಘಾಟಿಸಿದರು
ಬೀದರ್: ಇಲ್ಲಿಯ ಬಹಮನಿ ಕೋಟೆಯೊಳಗೆ ಬಹು ದಿನಗಳ ನಂತರ ಮತ್ತೆ ಕ್ಯಾಂಟೀನ್ ಶುರುವಾಗಿದೆ.
‘ಶಾಹೀನ್ ಫುಡ್ ಕೋರ್ಟ್’ (ಎಸ್ಎಫ್ಸಿ) ಹೆಸರಿನ ಕ್ಯಾಂಟೀನ್ ಅನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಗುರುವಾರ ಉದ್ಘಾಟಿಸಿದರು.
ಕೋಟೆಯಲ್ಲಿ ಕ್ಯಾಂಟೀನ್ ಆರಂಭ ಆಗಿರುವುದರಿಂದ ವಿವಿಧೆಡೆಯಿಂದ ಬರುವ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಬರುವ ದಿನಗಳಲ್ಲಿ ಇತರ ಐತಿಹಾಸಿಕ ಸ್ಮಾರಕಗಳಲ್ಲೂ ಅಗತ್ಯ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಬೀದರ್ ಕೋಟೆ ಐತಿಹಾಸಿಕ ಕೋಟೆಗಳಲ್ಲಿ ಒಂದಾಗಿದೆ. ದೇಶ, ವಿದೇಶದ ಪ್ರವಾಸಿಗರು ಕೋಟೆ ವೀಕ್ಷಣೆಗೆ ಬರುತ್ತಾರೆ. ಆದರೆ, ಕೋಟೆಯೊಳಗೆ ಕ್ಯಾಂಟೀನ್ ಇರದ ಕಾರಣ ಅವರಿಗೆ ಕುಡಿಯುವ ನೀರು, ಉಪಹಾರಕ್ಕೆ ತೊಂದರೆ ಆಗುತ್ತಿತ್ತು. ಜಿಲ್ಲಾ ಆಡಳಿತದ ಅಪೇಕ್ಷೆ ಮೇರೆಗೆ ಪ್ರವಾಸಿಗರ ಹಿತದೃಷ್ಟಿಯಿಂದ ಕ್ಯಾಂಟೀನ್ ಪ್ರಾರಂಭಿಸಲಾಗಿದೆ ಎಂದು ಶಾಹೀನ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಹಸೀಬ್ ಹೇಳಿದರು.
ಕ್ಯಾಂಟೀನ್ ಬೆಳಿಗ್ಗೆ 7 ರಿಂದ ಸಂಜೆ 5 ರ ವರೆಗೆ ತೆರೆದಿರಲಿದೆ. ಬೇಕರಿ ತಿನಿಸು, ತಂಪು ಪಾನೀಯ, ಕುಡಿಯುವ ನೀರಿನ ಬಾಟಲಿ ಮೊದಲಾದವು ಕ್ಯಾಂಟೀನ್ನಲ್ಲಿ ಸಿಗಲಿವೆ ಎಂದು ತಿಳಿಸಿದರು.
ನಗರದಿಂದ 130 ಕಿ.ಮೀ. ದೂರದಲ್ಲಿ ಇರುವ ಹೈದರಾಬಾದ್ಗೆ ನಿತ್ಯ ನೂರಾರು ವಾಹನಗಳಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಕ್ಯಾಂಟೀನ್ ಹಾಗೂ ಇತರ ಸೌಲಭ್ಯಗಳಿಂದ ಪ್ರವಾಸಿಗರನ್ನು ಬೀದರ್ವರೆಗೂ ಸೆಳೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಕೋಟೆ ಸುತ್ತಲು ಬ್ಯಾಟರಿ ಚಾಲಿತ ವಾಹನ, ಗೈಡ್ಗಳ ವ್ಯವಸ್ಥೆ ಮಾಡಿದ್ದಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಇನ್ನಷ್ಟು ನೆರವಾಗಲಿದೆ ಎಂದು ಸ್ಥಳದಲ್ಲಿದ್ದ ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ್ ಬದೋಲೆ, ಬೀದರ್ ಉಪ ವಿಭಾಗಾಧಿಕಾರಿ ಲವೀಶ್ ಓರ್ಡಿಯಾ, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಬೀದರ್ ವಿಭಾಗದ ಸಹಾಯಕ ಸಂರಕ್ಷಣಾಧಿಕಾರಿ ಅನಿರುದ್ಧ್ ದೇಸಾಯಿ, ಅಬ್ದುಲ್ ಮನ್ನಾನ್ ಸೇಠ್ ಮತ್ತಿತರರು ಇದ್ದರು.