ಜೆಜೆಎಂ ಕಳಪೆಯಾಗಲು ಅಧಿಕಾರಿಗಳು, ಗುತ್ತಿಗೆದಾರರೇ ಹೊಣೆ: ಪ್ರಭು ಚವ್ಹಾಣ ಆಕ್ರೋಶ
ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಔರಾದ(ಬಿ) ಮತಕ್ಷೇತ್ರದಲ್ಲಿ ನಡೆದ ಎಲ್ಲ ಕಾಮಗಾರಿಗಳು ಸಂಪೂರ್ಣ ಕಳಪೆಯಾಗಿವೆ. ಯಾವ ಗ್ರಾಮಕ್ಕೆ ಬೇಟಿ ನೀಡಿದರೂ ಜೆಜೆಎಂ ಲೋಪಗಳ ಕುರಿತು ದೂರುಗಳು ಬರುತ್ತಿವೆ. ಇದಕ್ಕೆ ಅಧಿಕಾರಿಗಳು ಮತ್ತು ಗುತ್ತಿಗೆದಾರರೇ ಹೊಣೆ ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಆಕ್ರೋಶ ಹೊರಹಾಕಿದರು.
ಔರಾದ(ಬಿ) ಪಟ್ಟಣದ ತಾಲ್ಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಆ.21ರಂದು ಜಲ ಜೀವನ್ ಮಿಷನ್(ಜೆಜೆಎಂ) ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. ಔರಾದ(ಬಿ) ಮತಕ್ಷೇತ್ರದಲ್ಲಿರುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬೇಕೆಂಬ ಉದ್ದೇಶದಿಂದ 200 ಕೋಟಿಗೂ ಹೆಚ್ಚು ಅನುದಾನ ತಂದು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. 276 ಕಾಮಗಾರಿಗಳ ಪೈಕಿ ಬಹುತೇಕ ಎಲ್ಲ ಕಾಮಗಾರಿಗಳು ಕಳಪೆಯಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಪೈಪ್ಲೈನ್ಗಾಗಿ ಅಗೆದ ರಸ್ತೆಗಳನ್ನು ಸರಿಪಡಿಸದೇ ಬಿಡಲಾಗಿದೆ. ಕೊಳಚೆಯಲ್ಲಿಯೇ ಪೈಪ್ಲೈನ್ ಮಾಡಲಾಗಿದೆ. ಕೆಲವೆಡೆ ನೀರಿನ ಟ್ಯಾಪ್ಗಳೇ ಇಲ್ಲ. ನೀರಿನ ಟ್ಯಾಂಕ್ಗಳು ಸರಿಯಾಗಿಲ್ಲ. ಜಲ ಮೂಲಗಳು ಇಲ್ಲದ ಕಡೆ ಕಾಮಗಾರಿ ಪೂರ್ಣಗೊಳಿಸಿದ್ದು, ಅಲ್ಲಿ ಕುಡಿಯಲು ನೀರು ಸಿಗುತ್ತಿಲ್ಲ. ಹಲವು ಕಡೆ ಕೆಲಸವಾದರೂ ನೀರು ಸರಬರಾಜು ಆಗುತ್ತಿಲ್ಲ. ಇಂತಹ ಹತ್ತು ಹಲವಾರು ಸಮಸ್ಯೆಗಳು ಪ್ರತಿ ಹಳ್ಳಿಯಲ್ಲಿಯೂ ಕಾಣಿಸುತ್ತಿವೆ. ಕಾಮಗಾರಿಗಾಗಿ ಅಗೆದ ರಸ್ತೆಗಳನ್ನು ಸರಿಪಡಿಸದೇ ಬಿಡಲಾಗಿದೆ. ಮಳೆ ನೀರಿನಿಂದ ಗುಂಡಿಗಳು ತುಂಬಿ ರಸ್ತೆಗಳು ಕೆಸರು ಗದ್ದೆಯಂತಾಗಿವೆ. ಇದರಿಂದಾಗಿ ಡೆಂಗ್ಯೂ, ಮಲೇರಿಯಾ, ಚಿಕುನ್ಗುನ್ಯಾದಂತಹ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದೆ. ಇದಕ್ಕೆಲ್ಲ ಯಾರು ಜವಾಬ್ದಾರರು ಎಂದು ಪ್ರಶ್ನಿಸಿದರು.
ಪ್ರತಿ ಸಭೆಯಲ್ಲಿ ಜೆಜೆಎಂ ಕಾಮಗಾರಿಯ ಬಗ್ಗೆ ತಿಳಿಸುತ್ತಾ ಬರುತ್ತಿದ್ದೇನೆ. ಇಲ್ಲಿವರೆಗೆ ಯಾರ ವಿರುದ್ಧವೂ ಕಠಿಣ ಕ್ರಮವಾಗಿಲ್ಲ. ಇನ್ನು ಮುಂದೆ ಸುಮ್ಮನಿರುವುದಿಲ್ಲ. ಜನತೆಗೆ ಮೋಸ ಮಾಡಲು ಬಿಡುವುದಿಲ್ಲ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಿಂದ ಹಿಡಿದು ಸರ್ಕಾರದ ಪ್ರಧಾನ ಕಾರ್ಯದರ್ಶಿವರೆಗೆ, ಸಂಬಂಧಪಟ್ಟ ಸಚಿವರಿಗೆ ದೂರು ಕೊಡುತ್ತೇನೆ. ವಿಧಾನಸಭಾ ಅಧಿವೇಶದಲ್ಲಿ ವಿಷಯ ಎತ್ತುತ್ತೇನೆ. ಜನತೆಗಾಗಿ ಉಪವಾಸ ಸತ್ಯಾಗ್ರಹ ಮಾಡಲು ಹಿಂಜರಿಯುವುದಿಲ್ಲ ಎಂದು ತಿಳಿಸಿದರು.
ಧಮ್ಮಾನಾಯಕ್ ತಾಂಡಾ, ಜಂಬಗಿ, ಮಸ್ಕಲ್ ತಾಂಡಾ, ಮಣಿಗೆಂಪೂರ, ಬಾಬಳಿ, ಕೌಡಗಾಂವ, ಆಲೂರ(ಕೆ), ಆಲೂರ(ಬಿ), ಬೇಲೂರ, ಆಲೂರ ತಾಂಡಾ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಎಲ್ಲ ಬಿಲ್ಲುಗಳನ್ನು ಪಾವತಿಸಲಾಗಿದೆ. ಆದರೆ ಕೆಲಸ ಪೂರ್ಣಗೊಳಿಸಿಲ್ಲ. ಕ್ಷೇತ್ರದಲ್ಲಿ ಸೇ.85ರಷ್ಟು ಬಿಲ್ಲುಗಳನ್ನು ಪಾವತಿಸಲಾಗಿದೆ ಜೆಜೆಎಂ ಸಮಸ್ಯೆಗಳ ಬಗ್ಗೆ ವಿವರಣೆ ನೀಡಿದರು.
ಕಾಮಗಾರಿ ಸಮರ್ಪಕವಾಗಿ ಮಾಡದ, ಸಾಕಷ್ಟು ವಿಳಂಬ ಮಾಡುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಪದೇ ಪದೇ ಹೇಳುತ್ತಿದ್ದೇನೆ. ಆದರೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಇನ್ನು ಮುಂದೆ ಸುಮ್ಮನಿರುವುದಿಲ್ಲ. 2-3 ವರ್ಷಗಳಿಂದ ಕೆಲಸ ಮಾಡದೇ ಇರುವ ಗುತ್ತಿಗೆದಾರರಿಗೆ ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಜೆಜೆಎಂ ಯೋಜನೆ ಅಡಿಯಲ್ಲಿ ಕಾಮಗಾರಿ ನಡೆದ ಗ್ರಾಮಗಳಲ್ಲಿ ಸುಮಾರು 30 ವರ್ಷ ಕುಡಿಯುವ ನೀರಿನ ಯೋಜನೆಗೆ ಅನುದಾನ ಬರುವುದಿಲ್ಲ. ಕುಡಿಯುವ ನೀರಿನ ಸಮಸ್ಯೆ ಪಂಚಾಯಿತಿಗಳಿಗೆ ಎದುರಾಗುವುದರಿಂದ ಎಲ್ಲ ಪಿಡಿಓಗಳು ಕೆಲಸ ಸಂಪೂರ್ಣ ಮುಗಿಯುವ ವರೆಗೆ ಯಾವುದೇ ಕಾರಣಕ್ಕೂ ಕಾಮಗಾರಿ ಅಧಿನಕ್ಕೆ ಪಡೆಯಬಾರದು. ಇಲ್ಲವಾದರೆ ಸಮಸ್ಯೆಗೆ ಸಿಲುಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೆಲವು ಕಡೆಗಳಲ್ಲಿ ಬಾವಿ ಮತ್ತು ಟ್ಯಾಂಕ್ ನಿರ್ಮಾಣಕ್ಕಾಗಿ ಸ್ಥಳದ ಸಮಸ್ಯೆಯಾಗುತ್ತಿರುವ ಬಗ್ಗೆ ಗುತ್ತಿಗೆದಾರರು ಶಾಸಕರ ಗಮನಕ್ಕೆ ತಂದರು. ಎಇಇ, ಜೆಇ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಎಲ್ಲೆಲ್ಲಿ ಈ ರೀತಿಯ ಸಮಸ್ಯೆಯಿದೆ ಎನ್ನುವುದನ್ನು ಪರಿಶೀಲಿಸಿ ಶೀಘ್ರ ಪರಿಹಾರ ಕಂಡುಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಾಮಗಾರಿ ವಿಳಂಬವಾಗಬಾರದು ಎಂದು ನಿರ್ದೇಶನ ನೀಡಿದರು.
ಎಇಇ ಕೆಲಸದ ಬಗ್ಗೆ ಬೇಸರ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಎಲ್ಲ ಮಾಹಿತಿಗೂ ತಲೆಯಾಡಿಸುತ್ತಾರೆ. ಆದರೆ ಕೆಲಸ ಮಾತ್ರ ಮಾಡುವುದಿಲ್ಲ. ಸಹಾಯಕ ಎಂಜಿನೀಯರುಗಳು ಕೂಡ ಸ್ಥಳಪರಿಶೀಲನೆ ಮಾಡುವುದಿಲ್ಲ. ಹಾಗಾಗಿಯೇ ಜೆಜೆಎಂ ಕೆಲಸಗಳು ಸಂಪೂರ್ಣ ವಿಫಲಗೊಳ್ಳುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಸಭೆಯಲ್ಲಿ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳಲ್ಲಿ ನಡೆದ ಜೆಜೆಎಂ ಕಾಮಗಾರಿಯ ಬಗ್ಗೆ ಗ್ರಾಮವಾರು ಪ್ರಗತಿ ಪರಿಶೀಲನೆ ನಡೆಸಿದರು. ಇದೇ ವೇಳೆ ಎಲ್ಲ ಗ್ರಾಮಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ರಸ್ತೆಗಳನ್ನು ಸರಿಯಾಗಿ ಇಡಬೇಕು. ಕುಡಿಯುವ ನೀರು ಮತ್ತು ಬೀದಿ ದೀಪಗಳು ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕೆಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ಸಭೆಯಲ್ಲಿ ಔರಾದ(ಬಿ) ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬೀರೇಂದ್ರಸಿಂಗ್ ಠಾಕೂರ್, ಕಮಲನಗರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ರಾಮಲಿಂಗ ಬಿರಾದಾರ, ಜೆಸ್ಕಾಂ ಎಇಇ ರವಿ ಕಾರಬಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸಭೆಯಲ್ಲಿ ಉಪಸ್ಥಿತರಿದ್ದರು.