ಬೀದರ್

ಜನಪದದಿಂದ ಸಾಂಸ್ಕೃತಿಕ ಶ್ರೀಮಂತಿಕೆ ವೃದ್ಧಿ – ವಿಜಯಕುಮಾರ ಪಾಟೀಲ ಗಾದಗಿ

ಬೀದರ: ಜನಪದ ಇಂದಿನ ಕಾಲದಲ್ಲಿ ಅತ್ಯವಶ್ಯಕ. ಅದಿಲ್ಲದಿದ್ದರೆ ವ್ಯಕ್ತಿಯ ಬದುಕು ಅಪೂರ್ಣ. ಆದರೂ ಜನರು ತನ್ನತನ ಮರೆತು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವುದು ದುರದೃಷ್ಟಕರ. ಜನಪದ ಹಾಡುಗಳು ಮತ್ತು ಆಚರಣೆಯನ್ನು ಇಂದು ಕೇವಲ ತಾತ್ಕಾಲಿಕವಾಗಿ ಉಪಯೋಗಿಸಿಕೊಂಡು ನಂತರ ಮರೆಯುತ್ತಿರುವುದು ದೊಡ್ಡ ದುರಂತ. ಜನಪದ ಎಂಬುದು ನಿತ್ಯಜೀವನದ ಭಾಗವಾಗಬೇಕೆಂದು ಗಾಂಧಿ ಗಂಜ್ ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ ನುಡಿದರು.
ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಹಾಗೂ ತಾಲ್ಲೂಕು ಘಟಕ ಬೀದರ, ಸಂಸ್ಕೃತಿ ಮಂತ್ರಾಲಯ ನವದೆಹಲಿ, ಓಂಸಾಯಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ತಾಲ್ಲೂಕಿನ ಮಾಳೆಗಾಂವ ಗ್ರಾಮದಲ್ಲಿ ನಡೆದ ಜನಪದ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಮಾತಮಾಡಿದರು.
ಛತ್ತೀಸಗಢ, ಮಧ್ಯಪ್ರದೇಶ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದ ಹಲವು ಕಲಾವಿದರನ್ನು ಕರೆಸಿ ಜನಪದ ನೃತ್ಯ ಮಾಡಿಸುತ್ತಿರುವ ಡಾ. ರಾಜಕುಮಾರ ಹೆಬ್ಬಾಳೆ ಹಳೆಯ ಕಾಲದ ನೆನಪುಗಳನ್ನು ಕಣ್ಣಮುಂದೆ ತಂದು ನಿಲ್ಲಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಮಾಳೆಗಾಂವ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಅನೀಲಕುಮಾರ ಮಾತನಾಡಿ ಕುಟ್ಟುವ ಬೀಸುವ ಸೋಬಾನೆ ಮತ್ತು ಸೀಗಿ ಹಾಡುಗಳು ಜನಪದವನ್ನು ಶ್ರೀಮಂತಗೊಳಿಸಿವೆ. ಮುಂದಿನ ಯುವ ಪೀಳಿಗೆಗೆ ಜನಪದ ಸಂಸ್ಕೃತಿ ತಿಳಿಸುವ ಅಗತ್ಯವಿದೆ. ಇಂತಹ ಕಾರ್ಯಕ್ರಮಗಳು ಜನಪದ ಪಸರಿಸಲು ಸಹಕಾರಿಯಾಗುತ್ತವೆ ಎಂದರು.


ಕಾರ್ಯಕ್ರಮ ಸಂಯೋಜಕ ಡಾ. ರಾಜಕುಮಾರ ಹೆಬ್ಬಾಳೆ ಮಾತನಾಡಿ ಜಿಲ್ಲೆಯ ಜನಪದ ಕಲಾವಿದರನ್ನು ಹೊರರಾಜ್ಯಗಳಿಗೆ ಕಳುಹಿಸುವ, ಹೊರರಾಜ್ಯದ ಕಲಾವಿದರನ್ನು ಜಿಲ್ಲೆಗೆ ಕರೆಸಿ ಸಾಂಸ್ಕೃತಿಕ ವಿನಿಮಯ ಮಾಡುವುದು ಮತ್ತು ನಶಿಸಿ ಹೋಗುತ್ತಿರುವ ನೆಲಮೂಲದ ಸಂಸ್ಕೃತಿ ಉಳಿಸುವುದು ಈ ಉತ್ಸವದ ಪ್ರಮುಖ ಧ್ಯೇಯವಾಗಿದೆ. ಜಿಲ್ಲೆಯಲ್ಲಿ ಒಟ್ಟು ನಾಲ್ಕು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯಶಸ್ವಿಯಾಗಿ ನಡೆದಿವೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷರಾದ ಶಾರುನ್ ನೀಲಿ ವಹಿಸಿದ್ದರು. ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಉಪಾಧ್ಯಕ್ಷೆ ಶಾರದಾ ದಶರಥ, ಉದ್ಯಮಿ ಅಶೋಕ ಹೆಬ್ಬಾಳೆ, ಪ್ರಮುಖರಾದ ತುಕಾರಾಮ ದೊಡ್ಡೆ, ಜಗನ್ನಾಥ ಲಡ್ಡೆ, ಗೋಪಾಲರೆಡ್ಡಿ, ಸಂಗಮೇಧ ಬೀಕ್ಲೆ, ಮಾಣಿಕ ಕೌಡಗಾಂವಕರ್, ಪೆಂಟಾರೆಡ್ಡಿ, ಮಾಣಿಕ ಪಾಟೀಲ, ಪುಂಡಲೀಕ ಪಾಟೀಲ, ಅಜೀಜ ಪಟೇಲ, ಬಸವರಾಜ ಹೆಗ್ಗೆ, ಧನರಾಜ ಆನೆಕಲೆ, ಪ್ರಕಾಶ ಕನ್ನಾಳೆ, ಮಹಾರುದ್ರ ಡಾಕುಳಗೆ, ಪವನ ನಾಟೇಕರ್, ಎಸ್.ಬಿ.ಕುಚಬಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಬಕ್ಕಪ್ಪ ದಂಡೀನ್ ನಿರೂಪಿಸಿದರು. ಶಿವಶರಣಪ್ಪ ಗಣೇಶಪುರ ಸ್ವಾಗತಿಸಿದರು. ಬಸವರಾಜ ಹೆಗ್ಗೆ ವಂದಿಸಿದರು.

ಗಮನ ಸೆಳೆದ ಜನಪದ ಕಲೆ:
ಮಧ್ಯಪ್ರದೇಶದ ಗಣಗೌರ ಜನಪದ ನೃತ್ಯ, ಛತ್ತಿಸಗಢದ ಗೌರಮಾಡಿಯ ನೃತ್ಯ, ಆಂಧ್ರಪ್ರದೇಶದ ಥಪೇಟಗುಲ್ಲು ನೃತ್ಯ, ಮಹಾರಾಷ್ಟ್ರದ ಲಾವಣಿ ನೃತ್ಯ, ಕರ್ನಾಟಕದ ಲಂಬಾಣಿ ಮತ್ತು ಜೋಗತಿ ಯಲ್ಲಮ್ಮ ನೃತ್ಯ, ಕರ್ನಾಟಕ ಜನಪದ ವಿ.ವಿ. ವಿದ್ಯಾರ್ಥಿಗಳ ಸಾವಯವ ಜಾಗೃತಿ ನೃತ್ಯ ಮತ್ತು ವಿಶಾಲ ನೃತ್ಯ ಅಕಾಡೆಮಿಯ ಸುಗ್ಗಿ ನೃತ್ಯ ಸಭೀಕರ ಗಮನ ಸೆಳೆಯಿತು. ಗ್ರಾಮದ ಸಾವಿರಾರು ಜನರು ರಾತ್ರಿ ಸಂದರ್ಭದಲ್ಲಿ ನೃತ್ಯ ವೀಕ್ಷಿಸಿ ಆನಂದಿಸಿದರು.

Ghantepatrike kannada daily news Paper

Leave a Reply

error: Content is protected !!