ಕೆಎಲ್‍ಇ ಸಂಸ್ಥೆ ಬೀದರ ಸಂಸ್ಥಾಪಕ ಅಧ್ಯಕ್ಷ ಬಸಪ್ಪ ಕಲವಾಡಿಕರ್ 12ನೇ ಪುಣ್ಯ ಸ್ಮರಣೋತ್ಸವ | ಬಸಪ್ಪಾ ಕಲವಾಡಿಕರ್ ದಕ್ಷತೆ, ಪ್ರಾಮಾಣಿಕತೆ ನಮ್ಮೆಲ್ಲರಿಗೂ ಪ್ರೇರಣೆ – ಕಿರಣಕುಮಾರ
ಭಾಲ್ಕಿ: ಕರ್ನಾಟಕ ಕಾರ್ಮಿಕ ಶಿಕ್ಷಣ ಸಂಸ್ಥೆ ಬೀದರನ ಸಂಸ್ಥಾಪಕ ಅಧ್ಯಕ್ಷ ಬಸಪ್ಪಾ ಕಲವಾಡಿಕರ್ ರವರ ದಕ್ಷತೆ ಮತ್ತು ಪ್ರಾಮಾಣಿಕತೆ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ ಎಂದು ಮುಖ್ಯ ಶಿಕ್ಷಕ ಕಿರಣಕುಮಾರ ಭಾಟಸಾಂಗವಿಕರ ಅಭಿಪ್ರಾಯಪಟ್ಟರು.
ತಾಲೂಕಿನ ಕಲವಾಡಿ ಗ್ರಾಮದ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ ನಡೆದ ದಿವಂಗತ ಬಸಪ್ಪಾ ಕಲವಾಡಿಕರ್ ರವರ 12ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತೀರ ಬಡಕುಟುಂಬದಲ್ಲಿ ಜನಿಸಿ, ಅತ್ಯಲ್ಪ ಕಾಲಾವಧಿಯಲ್ಲಿಯೇ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ ದಿ.ಬಸಪ್ಪಾ ಕಲವಾಡಿಯವರು ನಮ್ಮೆಲ್ಲರಿಗೂ ಮಾದರಿಯಗಿದ್ದಾರೆ. ಗ್ರಾಮೀಣ ಪ್ರದೇಶದ ಬಡ ಕುಟುಂಬದಲ್ಲಿ ಜನಿಸಿದ್ದರೂ, ಶಿಕ್ಷಣ ಸಂಸ್ಥೆಯನ್ನು ತೆರೆದು ನೂರಾರು ವಿದ್ಯಾವಂತ ಶಿಕ್ಷಕರಿಗೆ ಉದ್ಯೋಗ ನೀಡಿದ ಕಲವಾಡಿಕರ್ ರವರು ಸ್ಮರಣೀಯರಾಗಿದ್ದಾರೆ. ಅವರು ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಶಾಲೆಗಳನ್ನು ತೆರೆಯುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ಇಂದು ಉನ್ನತ ಮಟ್ಟದ ಅಧಿಕಾರದಲ್ಲಿದ್ದಾರೆ ಎಂದು ಸ್ಮರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಶಿಕ್ಷಕಿ ಶೋಭಾ ಮಾಸಿಮಾಡೆ, ಬಸಪ್ಪ ಕಲವಾಡಿಕರ್ ರವರ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಿರಿಯ ಶಿಕ್ಷಕ ಶಿವಶರಣಪ್ಪ ಸೊನಾಳೆ ಓಂಝೆಡ್ ಬಿರಾದಾರ, ವಿಜಯಕುಮಾರ ಗುತ್ತೆದಾರ ಬಾಜೊಳಗಾ, ಶಿವಾನಂದ ಕೃಷ್ಣಪ್ಪ, ಪ್ರವೀಣ ಸಿಂಧೆ, ಪ್ರದೀಪ ಜೊಳದಪಕೆ, ಶಿವಕುಮಾರ ವಾಡಿಕರ, ಆನಂದ ಖಂಡಗೊಂಡ ಉಪಸ್ಥಿತರಿದ್ದರು.
ಆನಂದ.ಕೆ ಸ್ವಾಗತಿಸಿದರು. ಶಿವಕುಮಾರ ನಿರೂಪಿಸಿದರು. ಶಿವಾನಂದ ವಂದಿಸಿದರು.