ಕಸಾಪ ನಡೆ ಶಾಲಾ-ಕಾಲೇಜು ಕಡೆ ಕನ್ನಡ ಭಾಷೆ ಮತ್ತು ಸಾಹಿತ್ಯದ ಪರಿಚಯ ಮಾಲಿಕೆ ಕಾರ್ಯಕ್ರಮ
ಬೀದರ ತಾಲೂಕಿನ ಕೋಳಾರ (ಕೆ) ಗ್ರಾಮದ ಘಾಳೆಪ್ಪಾ ಕೋಟೆ ಪ್ರೌಢ ಶಾಲೆಯಲ್ಲಿ ಇಂದು ಗ್ರಾಮ ವಿಕಾಸ ಟ್ರಸ್ಟ್ (ರಿ) ಆಣದೂರ, ಬೀದರ ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತು, ಯುವ ಘಟಕ ಮತ್ತು ಆಣದೂರ ವಲಯ ಕನ್ನಡ ಸಾಹಿತ್ಯ ಪರಿಷತ್ತು ಇವುಗಳ ಸಂಯುಕ್ತಾಶ್ರಯದಲ್ಲಿ ಕಸಾಪ ನಡೆ ಶಾಲಾ-ಕಾಲೇಜು ಕಡೆ ಅಭಿಯಾನದ ಅಡಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಪರಿಚಯ ಮಾಲಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ ಆಣದೂರ ವಲಯ ಕಸಾಪ ಅಧ್ಯಕ್ಷರಾದ ಶ್ರೀ ಚೇತನ ಸೋರಳ್ಳಿ ಕನ್ನಡ ಭಾಷೆ ಬಹು ವೈಶಿಷ್ಠತೆಯಿಂದ ಕೂಡಿದೆ. ಕನ್ನಡ ಭಾಷೆಗೆ ಪ್ರಾಚೀನ ಇತಿಹಾಸವಿದೆ. ಕ್ರಿ.ಪೂ. ದಿಂದಲೇ ಕನ್ನಡ ಭಾಷೆಯ ಬಳಕೆಗೆ ಅನೇಕ ಕುರುಹುಗಳು ದೊರೆತಿವೆ. ಸಾಮ್ರಾಟ ಅಶೋಕನ ಶಿಲಾಶಾಸನಗಳಲ್ಲಿ ಕನ್ನಡ ಪದಗಳ ಬಳಕೆಯಾಗಿರುವುದು ಇದಕ್ಕೆ ಸೂಕ್ತ ಉದಾಹರಣೆಯಾಗಿದೆ. ಕ್ರಿ.ಶ. 450 ಕ್ಕೆ ಸೇರಿದ ಹಲ್ಮಿಡಿ ಶಾಸನದಲ್ಲಿ ಕನ್ನಡ ಲಿಪಿಯ ಪ್ರಾರಂಭಿಕ ರೂಪವು ದೊರೆತಿದೆ ಎಂದು ಕನ್ನಡ ಭಾಷೆಯ ಪ್ರಾಚೀನತೆ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗ್ರಾಮ ವಿಕಾಸ ಟ್ರಸ್ಟ್ ಮತ್ತು ಬೀದರ ದಕ್ಷಿಣ ಕಸಾಪ ಯುವ ಘಟಕದ ಅಧ್ಯಕ್ಷರಾದ ಶ್ರೀ ಬಸವರಾಜ ಬಶೆಟ್ಟಿ ಅವರು ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕ್ರಿ.ಶ. 9ನೇ ಶತಮಾನಕ್ಕೆ ಮೊದಲು ಸೂಕ್ತ ಸಾಕ್ಷಿಗಳು ಲಭ್ಯವಿಲ್ಲದಿರುವುದರಿಂದ ಕನ್ನಡ ಸಾಹಿತ್ಯದ ಪ್ರಾರಂಭವು ಅಸ್ಪಷ್ಟತೆಯಿಂದ ಕೂಡಿದೆ. ಅನೇಕ ಶಾಸನಗಳಲ್ಲಿ ಕನ್ನಡ ಪದಗಳ ಬಳಕೆಯ ಉದಾಹರಣೆಯಿದ್ದರೂ ಕ್ರಿ.ಶ. 9ನೇ ಶತಮಾನದಲ್ಲಿ ರಾಷ್ಟ್ರಕೂಟ ಅರಸ ನೃಪತುಂಗನ ಆಸ್ಸಾನ ಕವಿಯಾದ ಶ್ರೀ ವಿಜಯನು ಬರೆದಿರುವ ‘ಕವಿರಾಜ ಮಾರ್ಗ’ ಕನ್ನಡ ಸಾಹಿತ್ಯದಲ್ಲಿ ಲಭವಿರುವ ಪ್ರಥಮ ಕೃತಿಯಾಗಿದೆ. ಕ್ರಿ.ಶ. 10 ನೇ ಶತಮಾನದಿಂದ ಕನ್ನಡ ಸಾಹಿತ್ಯವು ವಿವಿಧ ಸಾಹಿತ್ಯ ಸ್ವರೂಪಗಳಲ್ಲಿ ಅಭಿವೃದ್ಧಿಯಾಗತೊಡಿತು. ಹಳೆಗನ್ನಡ ಸಾಹಿತ್ಯದ ಪಂಪ, ಪೊನ್ನ, ರನ್ನ, ಜನ್ಮ ಮುಂತಾದ, ನಡುಗನ್ನಡ ಸಾಹಿತ್ಯದ ವಚನಕಾರರು, ದಾಸ, ಕೀರ್ತನಕಾರರು, ಕುಮಾರವ್ಯಾಸ, ಸರ್ವಜ್ಞ ಮುಂತಾದ ಮತ್ತು ಹೊಸಗನ್ನಡ ಸಾಹಿತ್ಯದ ಜ್ಞಾನಪೀಠ ಪ್ರಶಸ್ತಿ ಪುರಸ್ಕøತರು, ದಲಿತ-ಬಂಡಾಯ ಪಂಥದ ವಿವಿಧ ಸಾಹಿತಿಗಳಿಂದ ಕನ್ನಡ ಭಾಷೆ ಮತ್ತು ಸಾಹಿತ್ಯ ಶ್ರೀಮಂತಗೊಂಡಿದೆ. ಕನ್ನಡ ಸಾಹಿತ್ಯದ ಕಥೆ, ಕಾವ್ಯ, ಕಾದಂಬರಿ, ವಿಮರ್ಶೆ ನಾಟಕ ಮೊದಲಾದ ಪ್ರಕಾರಗಳು ಈ ಕಾಲಘಟ್ಟದಲ್ಲಿ ಪ್ರಸಿದ್ಧಿಗೆ ಬಂದಿರುವವು. ಅಲ್ಲದೆ ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಮಾಧ್ಯಮಗಳ ಕೊಡುಗೆ ಸಹ ಅಪಾರವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಘಟಕಗಳು, ಕನ್ನಡ ಪರ ಸಂಘಟನೆಗಳು ಸಹ ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಕೈ ಜೋಡಿಸಿವೆ ಎಂದು ಕನ್ನಡ ಸಾಹಿತ್ಯದ ಇತಿಹಾಸದ ಕಿರು ಪರಿಚಯ ನೀಡಿದರು.
ಕಾರ್ಯಕ್ರಮದಲ್ಲಿ ಪ್ರವೀಣ ಪಾಟೋದಿ, ಭಾಗವಹಿಸದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಾಳೆಪ್ಪಾ ಕೋಟೆ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಶ್ರೀ ಗೌತಮ ವರ್ಮಾ ವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಮಹೇಶ ಪಾಂಚಾಳ ಮಾಡಿದರೆ ವಂದನಾರ್ಪಣೆಯನ್ನು ಸಹ ಶಿಕ್ಷಕ ಸಚೀನ ನೇರವೇರಿಸಿದರು.