ಅಭಿಮಾನಿಗಳು, ಕಾರ್ಯಕರ್ತರ ಸಮ್ಮುಖದಲ್ಲಿ ಜನ್ಮ ದಿನ ಆಚರಿಸಿಕೊಂಡ ಬಂಡೆಪ್ಪ ಖಾಶೆಂಪುರ್
ಬೀದರ್ (ಜೂ.16): ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ಅವರ ತೋಟದ ಮನೆಯ ಆವರಣದಲ್ಲಿ ಶನಿವಾರ ದಿನವಿಡೀ ಅಭಿಮಾನಿಗಳು, ಕಾರ್ಯಕರ್ತರ ಸಮ್ಮುಖದಲ್ಲಿ 60ನೇ ವರ್ಷದ ಜನ್ಮ ದಿನ ಆಚರಣೆ ಮಾಡಿಕೊಂಡರು.
ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ಅವರ ತೋಟದ ಮನೆಗೆ ಶನಿವಾರ ಬೆಳಗ್ಗೆಯಿಂದಲೇ ಕಲಬುರಗಿ, ರಾಯಚೂರು, ಯಾದಗಿರಿ, ಬೀದರ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಅಭಿಮಾನಿಗಳು, ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅವರ ಆಪ್ತರು ಕೇಕ್ ಕತ್ತರಿಸಿ, ಶಾಲು, ಹಾರ ಹಾಕಿ, ಹೂಗುಚ್ಛ ನೀಡಿ ಸನ್ಮಾನಿಸಿ, ಗೌರವಿಸುವ ಮೂಲಕ ಬಂಡೆಪ್ಪ ಖಾಶೆಂಪುರ್ ರವರಿಗೆ ಜನ್ಮ ದಿನದ ಶುಭ ಕೋರಿದರು.
ದಿನವಿಡೀ ಮೊಳಗಿದ ಜಯಘೋಷ:
ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರ 60ನೇ ವರ್ಷದ ಜನ್ಮದಿನಕ್ಕೆ ಶುಭ ಕೋರಲು ವಿವಿಧೆಡೆಯಿಂದ ಆಗಮಿಸಿದ ಅವರ ಅಭಿಮಾನಿಗಳು, ಕಾರ್ಯಕರ್ತರು ದಿನವಿಡೀ ಜಯಘೋಷ ಮೊಳಗಿಸಿದರು. ಬಂಡೆಪ್ಪ ಖಾಶೆಂಪುರ್, ಜೆಡಿಎಸ್ ಪಕ್ಷ, ಹೆಚ್.ಡಿ ದೇವೇಗೌಡ, ಹೆಚ್.ಡಿ ಕುಮಾರಸ್ವಾಮಿರವರ ಪರವಾಗಿ ಘೋಷಣೆ ಕೂಗಿ ಹರ್ಷ ವ್ಯಕ್ತ ಪಡಿಸಿದರು.
ಇದಕ್ಕೂ ಮುಂಚೆ, ಜನ್ಮ ದಿನದ ಅಂಗವಾಗಿ ಶನಿವಾರ ಬೆಳಗ್ಗೆ ಬಂಡೆಪ್ಪ ಖಾಶೆಂಪುರ್ ರವರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನ, ಮರಿಗೆಮ್ಮ ದೇವಿ ಮಂದಿರ, ಸದ್ಗುರು ಶ್ರೀ ಸಚ್ಚಿದಾನಂದ ಸ್ವಾಮೀಜಿ ದೇವಸ್ಥಾನ, ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಖಾನಾಪೂರದ ಶ್ರೀ ಕ್ಷೇತ್ರ ಮೈಲಾರ ಮಲ್ಲಣ್ಣಾ (ಖಂಡೊಬಾ) ದೇವಸ್ಥಾನ, ಬೀದರ್ ನಗರದ ಮಂಗಲಪೇಟಾದ ತಾಯಿ ಭವಾನಿ ಮಂದಿರಗಳಿಗೆ ಹಾಗೂ ಅವರ ತಂದೆ ತಾಯಿ ಗದ್ದುಗೆಗಳಿಗೆ ಭೇಟಿ ನೀಡಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ, ಆಶೀರ್ವಾದ ಪಡೆದರು.
ವಿಧಾನ ಪರಿಷತ್ ಮಾಜಿ ಸಭಾಪತಿ ರಘುನಾಥರಾವ್ ಮಲ್ಕಾಪೂರೆ, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೋಲ್ಪೂರ್, ಕಲಬುರಗಿಯ ಜೆಡಿಎಸ್ ಮುಖಂಡ ಕೃಷ್ಣರೆಡ್ಡಿ ಸೇರಿದಂತೆ ಅನೇಕ ಜನಗಣ್ಯರು ಆಗಮಿಸಿ ಶುಭ ಕೋರಿದರು.