ಅಂಚೆ ಸಿಬ್ಬಂದಿಗೆ ವಿಭಾಗಮಟ್ಟದ ಪ್ರಶಸ್ತಿ ಪ್ರದಾನ: ವಿ. ತಾರ ಸಲಹೆ ಉತ್ತಮ ಸೇವೆ ಆದ್ಯತೆ ಆಗಲಿ
ಬೀದರ್: ಗ್ರಾಹಕರಿಗೆ ಉತ್ತಮ ಸೇವೆ ಅಂಚೆ ಸಿಬ್ಬಂದಿಯ ಆದ್ಯತೆ ಆಗಬೇಕು ಎಂದು ಭಾರತೀಯ ಅಂಚೆ ಇಲಾಖೆಯ ಉತ್ತರ ಕರ್ನಾಟಕ ವಲಯ ನಿರ್ದೇಶಕಿ ವಿ. ತಾರ ಸಲಹೆ ಮಾಡಿದರು.
ನಗರದ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು ಸಭಾಂಗಣದಲ್ಲಿ ಸೋಮವಾರ ಬೀದರ್ ಅಂಚೆ ವಿಭಾಗದ ಸಿಬ್ಬಂದಿಗೆ ಏರ್ಪಡಿಸಿದ್ದ ವಿಭಾಗಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕೆಲಸವನ್ನು ಪ್ರೀತಿಸಬೇಕು. ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದು ಹೇಳಿದರು.
ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಬೀದರ್ ಅಂಚೆ ವಿಭಾಗ ಮುಂಚೂಣಿಯಲ್ಲಿದೆ. ಗ್ರಾಹಕರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೀದರ್ ಅಂಚೆ ಅಧೀಕ್ಷಕ ಎಸ್. ಶ್ರೀಕರ ಬಾಬು ಮಾತನಾಡಿ, ಬೀದರ್ ವಿಭಾಗದ ವ್ಯಾಪ್ತಿ ಕಿರಿದಾಗಿದ್ದರೂ, ಎಲ್ಲ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದೆ. ಸಿಬ್ಬಂದಿ ಈಗಿನ ಕಾರ್ಯ ದಕ್ಷತೆಯನ್ನೇ ಮುಂದುವರಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.
‘ತೀನ್ ದಿನ್ ತೀನ್ ಲಾಖ್’, ‘ಚಾರ್ ದಿನ್ ಚಾರ್ ಲಾಖ್’ ಅಂಚೆ ಉಳಿತಾಯ ಖಾತೆ ತೆರೆಯುವಿಕೆ, ಸಾರ್ವಜನಿಕರಿಗೆ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ವಿವಿಧ ಸೇವೆಗಳ ಪರಿಚಯ, ಸಾಮ್ರಾಟ್ ಅಭಿಯಾನದಡಿ ಅತಿಹೆಚ್ಚು ಜೀವ ವಿಮಾ ಪಾಲಿಸಿ ನೋಂದಣಿ ಸೇರಿದಂತೆ 2023-24ನೇ ಸಾಲಿನಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಹಾಗೂ ಗುರಿ ಸಾಧಿಸಿದ ಅಂಚೆ ಸಿಬ್ಬಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ವಿಜಯಕುಮಾರ, ಬೀದರ್ ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಅಕ್ಷಯ್ ಕಾಮತ್ ಮಾತನಾಡಿದರು.
ಶ್ರುತಿ ಸ್ವಾಮಿ ಪ್ರಾರ್ಥನೆ ನಡೆಸಿಕೊಟ್ಟರು. ಮಂಗಲಾ ಭಾಗವತ್ ನಿರೂಪಿಸಿದರು. ಕಲ್ಲಪ್ಪ ಕೋಣಿ ವಂದಿಸಿದರು.