ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಿದ ಶಾಸಕ ಬೆಲ್ದಾಳೆ
ಬೀದರ್:ಕೃಷಿ ವಿಶ್ವವಿದ್ಯಾಲಯ ಮಾದರಿಯಲ್ಲಿಯೇ ರಾಜ್ಯದ ಪಶು ವೈದ್ಯಕೀಯ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲೂ ಡಿಪ್ಲೊಮಾ ಕೋರ್ಸ್ ಆರಂಭಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಒತ್ತಾಯಿಸಿದ್ದಾರೆ.
ವಿಧಾನಸಭಾ ಅಧಿವೇಶನದಲ್ಲಿ ಕೃಷಿ ಡಿಪ್ಲೊಮಾ (ಡಿಪ್ಲೊಮಾ ಇನ್ ಅಗ್ರಿಕಲ್ಚರ್) ಕೋರ್ಸ್ ಪ್ರಾರಂಭಿಸುವ ಕುರಿತ ಚರ್ಚೆ ಮೇಲೆ ಮಾತನಾಡಿದ ಅವರು, ಬೀದರ್ ಸೇರಿದಂತೆ ರಾಜ್ಯದ ನಾಲ್ಕು ಕಡೆ ಕೃಷಿ ಡಿಪ್ಲೊಮಾ ಕೋರ್ಸ್ ಪುನಃ ಆರಂಭಿಸಿರುವ ಸರ್ಕಾರದ ಕ್ರಮ ಸ್ವಾಗತಾರ್ಹ. ಇದರಂತೇ ಇನ್ನುಳಿದ ಆರು ಕಡೆ ಕೃಷಿ ಡಿಪ್ಲೊಮಾ ಕೋರ್ಸ್ ಬೇಗ ಆರಂಭಿಸಿ ಈ ವರ್ಷದಿಂದಲೇ ಪ್ರವೇಶ ಪ್ರಕ್ರಿಯೆ ಶುರು ಮಾಡಬೇಕು. ಇದರೊಟ್ಟಿಗೆ ಪಶು ವೈದ್ಯಕೀಯ ಹಾಗೂ ತೋಟಗಾರಿಕೆ ವಿವಿಯಲ್ಲೂ ಡಿಪ್ಲೊಮಾ ಕೋರ್ಸ್ಗಳನ್ನು ಆರಂಭಿಸಿ ರೈತರ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಸರ್ಕಾರದ ಗಮನ ಸೆಳೆದರು.
2012ರಲ್ಲಿ ರಾಜ್ಯ ಸರ್ಕಾರ ಎಸ್ಎಸ್ಎಲ್ಸಿ ನಂತರ ಮೂರು ವರ್ಷದ ಕೃಷಿ ಡಿಪ್ಲೊಮಾ ಆರಂಭಿಸಿತ್ತು. ಆದರೆ ರಾಜ್ಯ ಸರ್ಕಾರ ಬೀದರ್ ಸೇರಿ ಎಲ್ಲೆಡೆ ವರ್ಷದ ಹಿಂದೆ ಈ ಕೋರ್ಸ್ ಬಂದ್ ಮಾಡಿತ್ತು. ಇದರಿಂದ ರೈತರ ಮಕ್ಕಳಿಗೆ ಉತ್ತಮ ಕೋರ್ಸ್ನಿಂದ ವಂಚಿತಗೊಳಿಸಲಾಗಿತ್ತು. ಈ ಬಗ್ಗೆ ನಾನು ಕಳೆದ ಬೆಳಗಾವಿ ಅಧಿವೇಶನದಲ್ಲಿ ಸಹ ಪ್ರಸ್ತಾಪ ಮಾಡಿದ್ದೇನೆ. ಇತ್ತೀಚೆಗೆ ಬೀದರ್ಗೆ ಭೇಟಿ ನೀಡಿದ್ದ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರಿಗೆ ಭೇಟಿ ಮಾಡಿ ಮನವಿ ಪತ್ರ ಸಹ ಸಲ್ಲಿಸಿದ್ದೇನೆ. ಇದಕ್ಕೆ ಸ್ಪಂದಿಸಿರುವುದಕ್ಕೆ ನಾನು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಕೃಷಿ ಡಿಪ್ಲೊಮಾ ಕೋರ್ಸ್ ಮಾಡುವ ವಿದ್ಯಾರ್ಥಿಗಳು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರಸಗೊಬ್ಬರ ಕಂಪನಿ, ಕೃಷಿ ಔಷಧಿ ಕಂಪನಿ ಸೇರಿದಂತೆ ವಿವಿಧೆಡೆ ಉದ್ಯೋಗ ಪಡೆದು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಬಹಳ ಉಪಯುಕ್ತವಾಗಿದೆ. 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಲಾಭ ಪಡೆದಿದ್ದಾರೆ. ಕೃಷಿ ಡಿಪ್ಲೊಮಾ ಪ್ರವೇಶಕ್ಕೆ ಎಸ್ಎಸ್ಎಲ್ಸಿ ಮಾಡಿದ 19 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಅವಕಾಶವಿದೆ. ಈ ವಯೋಮಿತಿ 21ವರ್ಷಕ್ಕೆ ಏರಿಸಬೇಕು. ಇದರಿಂದ ಹಿಂದಿನ ಎರಡು ಅವಧಿಯಲ್ಲಿ ಪ್ರವೇಶದಿಂದ ವಂಚಿತ ಆಗದಂಥ ವಿದ್ಯಾರ್ಥಿಗಳಿಗೂ ಈ ಕೋರ್ಸ್ ಪ್ರವೇಶಕ್ಕೆ ಅನುಕೂಲವಾಗುತ್ತದೆ ಎಂದು ಬೆಲ್ದಾಳೆ ಗಮನ ಸೆಳೆದರು.
ಕೃಷಿ ಸಚಿವರ ಪರವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಉತ್ತರಿಸಿ, ಬೀದರ್, ಮಂಡ್ಯ, ಬೆಳಗಾವಿ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೃಷಿ ಡಿಪ್ಲೊಮಾ ಕೋರ್ಸ್ ಪುನಾರಂಭಕ್ಕೆ ಸರ್ಕಾರ ಕಳೆದ ದಿ. 15 ರಂದೇ ಅನುಮೋದನೆ ನೀಡಿದೆ. ಉಳಿದ 6 ಕಾಲೇಜುಗಳಲ್ಲಿ ಸಹ ಆರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ವಯೋಮಿತಿ ಹೆಚ್ಚಳದ ಬಗ್ಗೆ ತಾವು ನೀಡಿದ ಸಲಹೆ ಬಗ್ಗೆಯೂ ಸರ್ಕಾರ ಗಮನಹರಿಸಲಿದೆ. ಕೃಷಿಕರ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಸಕಾರಾತ್ಮಕ ಹೆಜ್ಜೆಯಿಡಲಿದೆ ಎಂದು ಭರವಸೆ ನೀಡಿದರು.