ವಾಸವದತ್ತಾ ರೈಲು ಸಂಚಾರ ಸಮಯ ಬದಲು : ಡಿಸಿ ಭರವಸೆ ರೈಲ್ವೆ ಇಲಾಖೆ ಜೊತೆಗೆ ಚರ್ಚಿಸಿ ಕ್ರಮ : ನಂತರ ರೈಲು ಹಳಿ ಸ್ಥಳಾಂತರಕ್ಕೆ ಕ್ರಮ
ಸೇಡಂ: ವಾಸವದತ್ತಾ ಸಿಮೆಂಟ್ ಕಾರ್ಖಾನೆಗೆ ಹಾದುಹೋಗಿರುವ ರೈಲು ಸಂಚಾರ ಸಮಯ ಬದಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಭರವಸೆ ನೀಡಿದ್ದಾರೆ.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಡೆದ ಜಿಲ್ಲಾಧಿಕಾರಿಗಳ ನೇತೃತ್ವದ ಜನಸ್ಪಂದನಾ ಸಭೆಯಲ್ಲಿ, ಸೇಡಂ ಜನಹಿತ ರಕ್ಷಣಾ ಸಮಿತಿ ಸಲ್ಲಿಸಿದ ಮನವಿ ಆಲಿಸಿದ ಅವರು, ಕೂಡಲೆ ರೈಲ್ವೆ ಇಲಾಖೆಯ ಸಿಕಿಂದರಾಬಾದ ಡಿವಿಜನ್ ಅಧಿಕಾರಿಗಳಿಗೆ ಸೂಚಿಸಿ ರೈಲು ಸಮಯ ಬದಲಿಸುವುದಾಗಿ ಹೇಳಿದರು.
ಅಲ್ಲದೆ ರೈಲ್ವೆ ಹಳಿ ಸ್ಥಳಾಂತರ ಕುರಿತು ಮುಂದಿನ ದಿನಗಳಲ್ಲಿ ಚರ್ಚಿಸಲಾಗವುದು. ಸಾರ್ವಜನಿಕರು ಅನುಭವಿಸುತ್ತಿರುವ ಸಮಸ್ಯೆಗೆ ಪರಿಹಾರ ಕಲ್ಪಿಸುವುದಾಗಿ ಅವರು ಇದೇ ವೇಳೆ ಹೇಳಿದ್ದಾರೆ.
ಅನೇಕ ವರ್ಷಗಳಿಂದ ಪಟ್ಟಣದ ಹೃದಯ ಭಾಗದಿಂದ ವಾಸವದತ್ತಾ ಸಿಮೆಂಟ್ ಕಾರ್ಖಾನೆಗೆ ಹಾದುಹೋಗಿರುವ ರೈಲು ಹಳಿಯಿಂದ ದಿನನಿತ್ಯ ಸಾವಿರಾರು ಜನ ತೊಂದರೆ ಎದುರಿಸುತ್ತಿದ್ದರು. ಪಟ್ಟಣದ ರೈಲು ಹಳಿಯ ಒಂದು ಭಾಗದಲ್ಲಿ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು, ಸರಕಾರಿ ಶಾಲಾ, ಕಾಲೇಜುಗಳು ಹಾಗೂ ಸರಕಾರಿ ಕಚೇರಿಗಳು ಇದ್ದು, ಪ್ರತಿನಿತ್ಯ ಹತ್ತಾರು ಗೂಡ್ಸ್ ರೈಲುಗಳ ಸಂಚಾರದಿಂದ ಸಾವು ನೋವುಗಳು ಸಂಭವಿಸಿದ್ದವು. ಆದರೂ ಸಹ ಸಿಮೆಂಟ್ ಕಾರ್ಖಾನೆ ಇದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.
ಇತ್ತೀಚೆಗೆ ಸೇಡಂ ಜನಹಿತ ರಕ್ಷಣಾ ಸಮಿತಿ ವತಿಯಿಂದ ಕೇಂದ್ರದ ಮತ್ತು ರಾಜ್ಯದ ರೈಲ್ವೆ ಸಚಿವರಿಗೆ ಮನವಿ ಪತ್ರ ರವಾನಿಸಿ, ಸಮಸ್ಯೆಗೆ ತಿಲಾಂಜಲಿ ಹಾಡಬೇಕು. ರೈಲ್ವೆ ಇಲಾಖೆ ಬೇಕಾಬಿಟ್ಟಿಯಾಗಿ ರೈಲು ಸಂಚಾರಕ್ಕೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿತ್ತು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸಹ ಸಮಿತಿಯ ಮನವಿಗೆ ಸ್ಪಂಧಿಸಿದ್ದು, ಶೀಘ್ರವೆ ಸಮಸ್ಯೆಗೆ ಪರಿಹಾರ ಕಂಡುಕೊಡುವ ಭರವಸೆ ನೀಡಿದ್ದು, ಸಾರ್ವಜನಿಕರಲ್ಲಿ ಭರವಸೆ ಮೂಡುವಂತಾಗಿದೆ.
ವಿಹಿಂಪ ಪ್ರಾಂತ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ, ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಮೆಕ್ಯಾನಿಕ್, ಸಿದ್ದಪ್ಪ ನಿಲಂಗಿ, ಮಳಖೇಡ ಗ್ರಾಮ ಪಂಚಾಯತ ಸದಸ್ಯ ಉಮೇಶ ಜಾಧವ, ರೈತ ಮುಖಂಡ ಆಮಶೆಟ್ಟಿ ಪಾಟೀಲ ಹೆಡ್ಡಳ್ಳಿ, ವಸಂತ ಪೂಜಾರಿ ಇತರರು ಈ ವೇಳೆ ಹಾಜರಿದ್ದರು.
ಹೋರಾಟಕ್ಕೆ ವರ್ತಕರ ಸಂಘದ ಬೆಂಬಲ
ಸೇಡಂ ಜನಹಿತ ರಕ್ಷಣಾ ಸಮಿತಿಯ ಹೋರಾಟಕ್ಕೆ ವರ್ತಕರ ಸಂಘ ಬೆಂಬಲ ನೀಡಿದೆ. ಅಲ್ಲದೆ ಮುಂದಿನ ಹೋರಾಟದ ರೂಪುರೇಷೆಗಳನ್ನು ಮಾಡುವ ಮೂಲಕ ಪ್ರತಿಭಟನೆಯನ್ನು ಮತ್ತಷ್ಟು ಬಲಿಷ್ಠ ಮಾಡುವುದಾಗಿ ಸಂಘದ ಅಧ್ಯಕ್ಷ ಶಿವಕುಮಾರ ಬೋಳಶೆಟ್ಟಿ ತಿಳಿಸಿದ್ದಾರೆ.