Uncategorized

ಪತ್ರಿಕಾ ಭವನ ನಿರ್ವಹಣಾ ಸಮಿತಿ ರದ್ದುಗೊಳಿಸಿ- ಡಿಸಿಗೆ ದೂರು

ಬೀದರ್ : ಜಿಲ್ಲಾ ಪತ್ರಿಕಾ ಭವನದ ನಿರ್ವಹಣಾ ಸಮಿತಿಯಲ್ಲಿ ದುಂದುವೆಚ್ಚ ಹಾಗೂ ಅವ್ಯವಹಾರ ನಡೆದಿದ್ದು, ಕೂಡಲೇ ನಿರ್ವಹಣಾ ಸಮಿತಿ ರದ್ದುಗೊಳಿಸಿ ನಿರ್ವಹಣೆ ಜವಾಬ್ದಾರಿಯನ್ನು ಜಿಲ್ಲಾ ವಾರ್ತಾ ಇಲಾಖೆಗೆ ನೀಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾಡಳಿತಕ್ಕೆ ಒತ್ತಾಯಿಸಿದೆ.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕರಂಜಿ ನೇತೃತ್ವದಲ್ಲಿ ಪತ್ರಕರ್ತರ ನಿಯೋಗವು ಮಂಗಳವಾರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ.
ಜಿಲ್ಲಾ ಪತ್ರಿಕಾ ಭವನ ನಿರ್ಮಾಣಗೊಂಡು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಿರ್ವಹಣಾ ಸಮಿತಿ ರಚಿಸಲಾಗಿತ್ತು. ಆದರೆ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾದ ನಿರ್ವಹಣಾ ಸಮಿತಿ ಏಕಪಕ್ಷೀಯವಾಗಿ ರಚಿಸಲಾಗಿರುತ್ತದೆ. ಬಹುಸಂಖ್ಯಾತ ಪತ್ರಕರ್ತರನ್ನು ದೂರವಿಟ್ಟು ಕೆಲವೇ ಆಯ್ದ ಪತ್ರಕರ್ತರನ್ನು, ಅದರಲ್ಲೂ ರಾಜಕೀಯದಲ್ಲಿ ಸಕ್ರೀಯರಾಗಿರುವವರನ್ನು ನೇಮಿಸಲಾಗಿದೆ.
ನಿರ್ವಹಣಾ ಸಮಿತಿಯ ಓರ್ವ ಸದಸ್ಯ ಬುಡಾದಲ್ಲಿ ನಡೆದ ಅವ್ಯವಹಾರದಲ್ಲಿ  ಸಿಲುಕಿಕೊಂಡಿದ್ದಾರೆ. ಅಕ್ರಮ ಸಾಬೀತಾಗಿರುತ್ತದೆ. ಕ್ರಿಮಿನಲ್ ಪ್ರಕರಣ ದಾಖಲಿಸಲು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿಗಳು ಬುಡಾ ಆಯುಕ್ತರಿಗೆ ಆದೇಶ ಕೂಡ ನೀಡಿದ್ದಾರೆ. ಅಂಥವರನ್ನು ಈ ಸಮಿತಿಗೆ ಸೇರಿಸಿಕೊಳ್ಳಲಾಗಿದೆ. ಗೌಪ್ಯ ಸಭೆ ಕರೆದು ನಿರ್ವಹಣಾ ಸಮಿತಿ ರಚಿಸಲಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷರು ಹಾಗೂ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕರು ಕಾರ್ಯದರ್ಶಿಗಳಾಗಿರುತ್ತಾರೆ. ಆದರೆ, ಯಾರ ಗಮನಕ್ಕೂ ತಾರದೇ ಸಮಿತಿಗೆ ಹೊಸದಾಗಿ ಸದಸ್ಯರನ್ನು ನೇಮಕ ಮಾಡಲಾಗಿದೆ.  ಆದರೆ, ನ್ಯಾಯಾಲಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಮುಂದುವರೆಯುವಂತೆ ಅಶೋಕ್ ಕುಮಾರ್ ಕರಂಜಿ ಅವರಿಗೆ ಆದೇಶ ನೀಡಿದೆ. ಆದರೆ, ಈವರೆಗೂ ನಿರ್ವಹಣಾ ಸಮಿತಿಗೆ ನೇಮಕ ಮಾಡಿಕೊಂಡಿಲ್ಲ ಎಂದು ವಿವರಿಸಿದ್ದಾರೆ.
 ನಿರ್ವಹಣಾ ಸಮಿತಿ ರಚಿಸಿದಾಗಿನಿಂದ ಈವರೆಗೆ ಸಾಕಷ್ಟು ಅವ್ಯವಹಾರ ನಡೆಯುತ್ತಿವೆ  ಎಂಬ ಗಂಭೀರ ಆರೋಪಗಳಿವೆ. ಪತ್ರಿಕಾ ಭವನದ ನಿರ್ವಹಣಾ ಸಮಿತಿ ಸದಸ್ಯರೇ ಪತ್ರಿಕಾ ಭವನದ ಪೀಠೋಪಕರಣಗಳು, ಸೌಂಡ್ ಬಾಕ್ಸ್, ಟೀನ್ ಶೆಡ್ ಖರೀದಿಸುವ ನೆಪದಲ್ಲಿ ತಾವೇ ಗುತ್ತಿಗೆದಾರರಾಗಿರುವುದು ಕಂಡು ಬಂದಿದೆ. ಲಕ್ಷಾಂತರ ರೂ. ಪೀಠೋಪಕರಣಗಳು ಖರೀದಿಸಲಾಗಿದೆ. ಆದರೆ, ಒಂದೇ ಒಂದು ಖರೀದಿಗೆ ಟೆಂಡರ್ ಕೂಡ ಇಲ್ಲ. ಪತ್ರಿಕಾ ಭವನ ಹೆಸರಲ್ಲಿರುವ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಿಕೊಳ್ಳದೇ ನಗದು ವ್ಯವಹಾರ ನಡೆಸಲಾಗಿದೆ. ನಗದು ರೂಪದಲ್ಲಿ ಶಿವಕುಮಾರ್ ಸ್ವಾಮಿ ಹತ್ತಿರ ಕಾನೂನು ಬಾಹಿರವಾಗಿ ಲಕ್ಷಾಂತರ ರೂ. ನಗದು ಹಣ ಇಡಲಾಗುತ್ತಿದೆ. ಇದು ಅಕ್ರಮಕ್ಕೆ ರಹದಾರಿಯಾಗಿದೆ. ನಿತ್ಯ ಪತ್ರಿಕಾಗೋಷ್ಟಿಯಿಂದ ಬರುವ ಹಣ ನಗದು ರೂಪದಲ್ಲಿ ಇಡಲಾಗುತ್ತಿದೆ. ಇದು ಅಕ್ರಮಕ್ಕೆ ದಾರಿ ಮಾಡಿಕೊಡುತ್ತಿದೆ ಎಂದು ಆರೋಪಿಸಿದ್ದಾರೆ.
 ಸಮಾಜಕ್ಕೆ ಪಾರದರ್ಶಕ ನಡೆಯ ಪಾಠ ಹೇಳುವ ನಿರ್ವಹಣಾ ಸಮಿತಿ ಸದಸ್ಯ ಪತ್ರಕರ್ತರು ಏಕಪಕ್ಷೀಯವಾಗಿ ಪತ್ರಿಕಾ ಭವನದ ಹಣ ಖರ್ಚು ಮಾಡುತ್ತಿದ್ದಾರೆ. ಈವರೆಗೆ ಅಂದಾಜು 15 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಲಾಗಿದ್ದು, ಈ ವ್ಯವಹಾರದಿಂದ ಇತರೆ ಪತ್ರಕರ್ತರನ್ನು ದೂರ ಇಡಲಾಗಿದೆ.
ಪತ್ರಿಕಾ ಭವನಕ್ಕೆ ಬರುವ ಆದಾಯಕ್ಕಿಂತ ಹೆಚ್ಚಿನ ಹಣ ಖರ್ಚು ಮಾಡಲು ನಿರ್ವಹಣಾ ಸಮಿತಿ ಸದಸ್ಯರು ಮುಂದಾಗಿರುವುದು ವಿಚಿತ್ರವಾಗಿದೆ.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿಯಲ್ಲಿ ಅವ್ಯವಹಾರ, ದುಂದು ವೆಚ್ಚ ನಡೆಯುತ್ತಿರುವುದು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸರಿಯಾದ ಬೆಳವಣಿಗೆ ಅಲ್ಲ. ಹಾಗಾಗಿ, ಕೂಡಲೇ  ಹಾಲಿ ನಿರ್ವಹಣಾ ಸಮಿತಿ ತಕ್ಷಣ ರದ್ದುಪಡಿಸಬೇಕು. ಹಾಲಿ ನಿರ್ವಹಣಾ ಸಮಿತಿ ಅವಧಿಯಲ್ಲಿ ನಡೆದ ಎಲ್ಲಾ ಖರೀದಿ, ವ್ಯವಹಾರಗಳ ಸಮಗ್ರ ತನಿಖೆ ನಡೆಸಬೇಕು ಹಾಗೂ ಪತ್ರಕರ್ತರ ಸಭೆ ಕರೆದು ಲೆಕ್ಕ- ಪತ್ರ ಬಹಿರಂಗಪಡಿಸಬೇಕು ಹಾಗೂ ಜಿಲ್ಲಾ ವಾರ್ತಾ ಇಲಾಖೆ ಅಧೀನದಿಂದಲೇ ಪತ್ರಿಕಾ ಭವನದ ನಿರ್ವಹಣೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಗಳಾದ ಶ್ರೀಕಾಂತ್ ಬಿರಾದಾರ, ಪೃಥ್ವಿ ಎಸ್, ಹಿರಿಯ ಪತ್ರಕರ್ತ ಮಾರುತಿ ಬಾವಿದೊಡ್ಡಿ,  ಪತ್ರಕರ್ತರಾದ ಅಜಯ್ ಭೋಸ್ಲೆ, ಅನೀಲ್ ಕಮಠಾಣೆ, ಸೋಮನಾಥ್ ಬಿರಾದಾರ, ಸಚಿನ್ ಕರಂಜಿ, ಸ್ವಾಮಿದಾಸ್ ಸೋನೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
Ghantepatrike kannada daily news Paper

Leave a Reply

error: Content is protected !!