ದರ ಹೆಚ್ಚಳ: ಹಾಲು ಉತ್ಪಾದಕರಿಗೆ ಲಾಭ : ನಿರ್ದೇಶಕ ಮಲ್ಲಿಕಾರ್ಜುನ ಬಿರಾದಾರ
ಬೆಂಗಳೂರಿನಲ್ಲಿ ಕಲಬುರಗಿ-ಬೀದರ್-ಯಾದಗಿರಿ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಮಲ್ಲಿಕಾರ್ಜುನ ಬಿರಾದಾರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಒಕ್ಕೂಟದ ಪ್ರಸ್ತಾವಗಳ ಕುರಿತು ಚರ್ಚೆ ನಡೆಸಿದರು
ಬೀದರ್: ರಾಜ್ಯ ಸರ್ಕಾರ ನಂದಿನಿ ಹಾಲು ದರ ಏರಿಕೆಗೆ ಸಹಮತ ವ್ಯಕ್ತಪಡಿಸಿರುವುದರಿಂದ ರಾಜ್ಯದ ಹಾಲು ಉತ್ಪಾದಕರಿಗೆ ಲಾಭವಾಗಲಿದೆ ಎಂದು ಕಲಬುರಗಿ- ಬೀದರ್- ಯಾದಗಿರಿ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಮಲ್ಲಿಕಾರ್ಜುನ ಬಿರಾದಾರ ಹೇಳಿದ್ದಾರೆ.
ದರ ಹೆಚ್ಚಳದಿಂದಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷಾಂತರ ಜನರಿಗೆ ಪ್ರಯೋಜನವಾಗಲಿದೆ. ಒಕ್ಕೂಟದ ಬಲವರ್ಧನೆಗೂ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಹಾಲು ಮಹಾ ಮಂಡಳ ಹಾಗೂ ಎಲ್ಲ ಹಾಲು ಒಕ್ಕೂಟಗಳ ಸಭೆಯಲ್ಲಿ ರೈತರ ಅನುಕೂಲಕ್ಕಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿ ಲೀಟರ್ ನಂದಿನಿ ಹಾಲು ಬೆಲೆ ರೂ. 3 ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಆಗಸ್ಟ್ 1 ರಿಂದಲೇ ದರ ಏರಿಕೆ ಜಾರಿಗೆ ಬರಲಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಅವರು ತಿಳಿಸಿದ್ದಾರೆ.
ರೈತರ ಹಿತ ಗಮನದಲ್ಲಿ ಇಟ್ಟುಕೊಂಡು ಹಾಲು ಬೆಲೆ ಹೆಚ್ಚಳಕ್ಕೆ ಹಸಿರು ನಿಶಾನೆ ತೋರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸಲಾಗುವುದು. ಬೆಲೆ ಏರಿಕೆಯ ಲಾಭವನ್ನು ಸಂಪೂರ್ಣ ರೈತರಿಗೆ ತಲುಪಿಸಲಾಗುವುದು ಎಂದು ಹೇಳಿದ್ದಾರೆ.