ಜಿಲ್ಲೆಯ ಎಂಟು ಹುತಾತ್ಮ ಯೋಧರ ಕುಟುಂಬಕ್ಕೆ ನೆರವು
ಏಕಲ್ ಅಭಿಯಾನ ವತಿಯಿಂದ ಬೆಂಗಳೂರಿನಲ್ಲಿ ನಡೆದ ಹುತಾತ್ಮ ಯೋಧರ ಪರಿವಾರದವರ ಅಭಿನಂದನಾ ಸಮಾರಂಭದಲ್ಲಿ ಬೀದರ್ ಜಿಲ್ಲೆಯ ಹುತಾತ್ಮ ಯೋಧರ ಕುಟುಂಬದ ಸದಸ್ಯರಿಗೆ ಚೆಕ್ ಹಾಗೂ ಗೃಹೋಪಯೋಗಿ ಸಾಮಗ್ರಿಯ ಕಿಟ್ ವಿತರಿಸಲಾಯಿತು
ಬೀದರ್: ಏಕಲ್ ಅಭಿಯಾನವು ಜಿಲ್ಲೆಯ ಎಂಟು ಮಂದಿ ಹುತಾತ್ಮ ಯೋಧರ ಕುಟುಂಬಗಳಿಗೆ ನೆರವಿನ ಹಸ್ತ ಚಾಚುವ ಮೂಲಕ ಗಮನ ಸೆಳೆದಿದೆ.
ಏಕಲ್ ಅಭಿಯಾನ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿದ್ದ ಹುತಾತ್ಮ ಯೋಧರ ಪರಿವಾರದವರ ಅಭಿನಂದನಾ ಕಾರ್ಯಕ್ರಮದಲ್ಲಿ ವಿದ್ಯಾ ಶೆಡೋಳೆ, ಸುಲೋಚನಾ, ಲಕ್ಷ್ಮೀಬಾಯಿ, ರಾಧಿಕಾ, ಈಶ್ವರಿ, ಮನೋಹರ ಕುಲಕರ್ಣಿ, ಸವಿತಾ ಹಾಗೂ ಸುಜಾತಾ ಅವರಿಗೆ ತಲಾ ರೂ. 21 ಸಾವಿರ ಚೆಕ್ ಹಾಗೂ ತಲಾ ರೂ. 10 ಸಾವಿರ ಮೌಲ್ಯದ ಗೃಹೋಪಯೋಗಿ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನ್ಯಾಚುರಲ್ ಮೆಡಿಷಿನ್ ಪ್ರಾಡಕ್ಟ್ ಪ್ರಾಯೋಜಕತ್ವದಲ್ಲಿ ಬೀದರ್‍ನ ಎಂಟು ಜನ ಸೇರಿ ರಾಜ್ಯದ ಒಟ್ಟು 32 ಹುತಾತ್ಮ ಯೋಧರ ಕುಟುಂಬಗಳ ಸದಸ್ಯರನ್ನು ಅಭಿನಂದಿಸಿ, ನೆರವು ಕಲ್ಪಿಸಲಾಗಿದೆ. ವಿವಿಧೆಡೆಯಿಂದ ಬೆಂಗಳೂರಿಗೆ ಹೋಗಿ ಬರುವ ಖರ್ಚನ್ನೂ ಅಭಿಯಾನವೇ ನೋಡಿಕೊಂಡಿದೆ ಎಂದು ಏಕಲ್ ಅಭಿಯಾನದ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ರಾಜಕುಮಾರ ಅಳ್ಳೆ ತಿಳಿಸಿದರು.
ನ್ಯಾಚ್ಯುರಲ್ ಮೆಡಿಷಿನ್ ಪ್ರಾಡಕ್ಟ್ ವ್ಯವಸ್ಥಾಪಕ ನಿರ್ದೇಶಕ ಅನುರಾಗ್ ಅಗರವಾಲ್, ಏಕಲ್ ಅಭಿಯಾನದ ಸಂಸ್ಥಾಪಕ ಶ್ಯಾಮಜಿ ಗುಪ್ತಾ, ಭಾರತೀಯ ಸೇನೆಯ ನಿವೃತ್ತ ಸುಬೇದಾರ್ ಯೋಗೇಂದ್ರ ಸಿಂಹ, ಏಕಲ್ ಶ್ರೀಹರಿ ವನವಾಸಿ ಫೌಂಡೇಷನ್ ರಾಷ್ಟ್ರೀಯ ಸಂರಕ್ಷಕ ಸತ್ಯನಾರಾಯಣ ಕಾಬರಾ, ಫೆಡರೇಷನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಅಧ್ಯಕ್ಷ ರಮೇಶಚಂದ್ರ ಲಾಹೋಟಿ, ರಿತು ಅಗರವಾಲ್, ಅಭಿಯಾನದ ದಕ್ಷಿಣ ಭಾರತ ಪ್ರಮುಖ ಅನಿಲಕುಮಾರ, ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ರಾಜಕುಮಾರ ಅಳ್ಳೆ, ಕಾರ್ಯದರ್ಶಿ ಸಚ್ಚಿದಾನಂದ ಚಿದ್ರೆ, ಖಜಾಂಚಿ ದತ್ತಾತ್ರೇಯ ಸಗ್ಗಮ್, ರಥ ಯೋಜನೆ ಪ್ರಮುಖ ಮನೋಹರ ಖಂಡೆ ಮೊದಲಾದವರು ಪಾಲ್ಗೊಂಡಿದ್ದರು.