ಚಿತ್ತಾಪುರ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಸಭೆ
ಚಿತ್ತಾಪುರ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಯಿತು.
ಚಿತ್ತಾಪುರ ತಾಲೂಕಿನಲ್ಲಿ ಮಳೆಯ ಅಭಾವದಿಂದಾಗಿ ಉದ್ದು ಹಾಗೂ ಹೆಸರುಕಾಳು ಬೆಳೆ ಸಂಪೂರ್ಣ ಹಾನಿಯಾಗಿದೆ. ತೊಗರಿ ಶೇ.100 ಬಿತ್ತನೆ ಪೂರ್ಣಗೊಂಡಿದೆ. ಆದರೆ, ಇನ್ನೊಂದು ವಾರದೊಳಗೆ ಮಳೆ ಬೀಳದೆ ಇದ್ದರೆ ತೊಗರಿ ಬೆಳೆಯೂ ಕೂಡಾ ಹಾನಿಯಾಗಲಿದೆ.
ತೊಗರಿಯ ನೆಟೆರೋಗದ ಪರಿಹಾರದ ಮೂರು ಹಂತಗಳ ಪೈಕಿ ಇದುವರೆಗೆ ಮೊದಲನೇ ಹಂತದ ಪರಿಹಾರ ಹಣ ಬಿಡುಗಡೆಯಾಗಿದ್ದು ಇನ್ನುಳಿದ ಹಂತದ ಪರಿಹಾರ ಬಿಡುಗಡೆಗಾಗಿ ಈಗಾಗಲೇ ಸಂಬಂದಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಜೊತೆಗೆ ಬರ ಘೋಷಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಬೆಳೆ ಹಾನಿಯ ಸರ್ವೆ ಮಾಡಲಾಗಿದೆ.
ಪ್ರಸ್ತುತ ತಾಲೂಕಿಗೆ ಗೋದಾಮು ಅವಶ್ಯಕತೆ ಇದ್ದು, ಗೋದಾಮು ನಿರ್ಮಾಣ ಮಾಡಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದು ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದೇನೆ.
ಹಳೆ ಕಲ್ಯಾಣಿಗಳ ಪುನಶ್ಚೇತನಗೊಳಿಸುವುದು ಸೇರಿದಂತೆ ತಾಲೂಕಿನ ಜಲಮೂಲಗಳ ಸಂರಕ್ಷಣೆಗೆಗಾಗಿ ಯೋಜನೆ ಹಾಕಿಕೊಳ್ಳಲಾಗಿದ್ದು, ಸಣ್ಣ, ಬೃಹತ್ ನೀರಾವರಿ ಇಲಾಖೆ, KBJNL, KNNL ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಗಳ ಜಂಟಿ ನೀಲನಕ್ಷೆ ತಯಾರಿಸಲು ಸೂಚಿಸಲಾಗಿದೆ.
ಸನ್ನತಿ ಏತ ನೀರಾವರಿ ಯೋಜನೆಯಡಿಯಲ್ಲಿ 16,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದ್ದು, ಈವರೆಗೆ 11,830 ಹೆಕ್ಟರ್ ನೀರಾವರಿ ಹೊಂದಲಾಗಿದ್ದು ಸ್ಥಳೀಯ ರೈತರ ಅಸಹಕಾರದಿಂದಾಗಿ ಬಾಕಿ ಇರುವ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಾಗಿಲ್ಲ.
ಇನ್ನು ಪುನರ್ವಸತಿ ಕುರಿತಂತೆ ಸನ್ನತಿ ಯೋಜನೆಯಿಂದಾಗಿ ಸನ್ನತಿ ಗ್ರಾಮ ಭಾದ್ಯಸ್ಥವಾಗುವುದಿಲ್ಲ ಆದರೆ, ಹುರಸಗುಂಡಗಿ ಗ್ರಾಮದ 700 ಕ್ಕೂ ಅಧಿಕ ಮನೆಗಳು ಹಾನಿಯಾಗುತ್ತಿದ್ದು ಆ ಪೈಕಿ 400 ಕ್ಕೂ ಅಧಿಕ ಮನೆಗಳಿಗೆ ಪರಿಹಾರ ನೀಡಲಾಗಿದೆ.
KNNL ಇಲಾಖೆಯ ವತಿಯಿಂದ SCP /TSP ಯೋಜನೆಯಡಿಯಲ್ಲಿ ಈ ಹಿಂದೆ ಕರೆಯಲಾಗಿರುವ ಎಲ್ಲ ಟೆಂಡರ್ ಗಳನ್ನು ರದ್ದುಗೊಳಿಸಿ ಹೊಸದಾಗಿ ಟೆಂಡರ್ ಕರೆಯಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಶಿಕ್ಷಣ ಇಲಾಖೆಯಲ್ಲಿ 15 ಹೊಸ ಶಾಲೆಗಳ ನಿರ್ಮಾಣಕ್ಕಾಗಿ ನೀಲಿನಕ್ಷೆ ತಯಾರಿಸಲಾಗಿದ್ದು ಶಾಲೆ ಕಟ್ಟಡಗಳ ನಿರ್ಮಾಣಕ್ಕಾಗಿ ಕೋಟಿಗಟ್ಟಲೆ ಅನುದಾನ ಬಿಡುಗಡೆ ಮಾಡಿದ್ದರೂ ಕೂಡಾ ಕಳಪೆ ಕಾಮಗಾರಿ ಆಗುತ್ತಿವೆ. ಕಟ್ಟಡಗಳ ಕಳಪೆ ಕಾಮಗಾರಿಯಲ್ಲಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಕಟ್ಟಡ ನಿರ್ಮಾಣ ಮಾಡಿ ನಾಲ್ಕು ವರ್ಷ ಆಗಿರುವುದಿಲ್ಲ ಆದರೂ ಸೋರುತ್ತಿವೆ. ಇದರ ಬಗ್ಗೆ ಸಮಗ್ರ ತನಿಖೆಗೆ ಸೂಚಿಸಿದ್ದೇನೆ.
ತಾಲೂಕಿನಲ್ಲಿ 334 ಶಿಕ್ಷಕರ ಕೊರತೆ ಇದ್ದು 254 ಅತಿಥಿ ಶಿಕ್ಷಕರನ್ನು ಶಿಕ್ಷಣ ಇಲಾಖೆಯ ಮೂಲಕ ಒದಗಿಸಲಾಗಿದೆ. ಮೂಲಭೂತ ಸೌಲಭ್ಯ ಒದಗಿಸುವ ಜವಾಬ್ದಾರಿ ನನ್ನದು ಆದರೆ, ಉತ್ತಮ ಕಲಿಕೆಯ ಜವಾಬ್ದಾರಿ ನಿಮ್ಮದು ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದೇನೆ.
ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದಲ್ಲಿ ವರ್ಗಾವಣೆಯಾದರೂ ರಿಲೀವ್ ಆಗದ ಇಂಜಿನಿಯರ್ ಗಳನ್ನು ಮತ್ತು ರಿಲೀವ್ ಮಾಡದ ಎಲ್ಲ ಅಧಿಕಾರಿಗಳನ್ನು ಅಮಾನತು ಮಾಡಲು ಪಂಚಾಯತ ರಾಜ್ ಇಲಾಖೆಯ ಕಾರ್ಯದರ್ಶಿ ಅವರಿಗೆ ಸೂಚಿಸಿದೆ.
ತಾಲೂಕಿಗೆ ಅಗತ್ಯವಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಅದಕ್ಕೆ ಬೇಕಾಗುವ ಸಿಬ್ಬಂದಿಗಳು ಮತ್ತು ಇತರೆ ಮೂಲಭೂತ ಸೌಲಭ್ಯಗಳ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದೆ.
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮೆಟ್ರಿಕ್ ಪೂರ್ವ ಹಾಗೂ ನಂತರದ ಹೊಸ ಹಾಸ್ಟೆಲ್ ಗಳ ನಿರ್ಮಾಣಕ್ಕೆ ಹಾಗೂ ಹಳೆ ಹಾಸ್ಟೆಲ್’ಗಳನ್ನು ನೆಲಸಮಗೊಳಿಸಿ ಜನಸಂಖ್ಯೆಗೆ ಅನುಗುಣವಾಗಿ ಹೊಸ ಹಾಸ್ಟೆಲ್’ಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆದಷ್ಟು ಬೇಗ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದೆ.
ತಾಲೂಕಿನ ಸಮಗ್ರ ಅಭಿವೃದ್ಧಿಗೆ ವಿನೂತನ ಕಾರ್ಯಕ್ರಮಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದು ಕೆಲ ಅಧಿಕಾರಿಗಳನ್ನು ಹೊರತುಪಡಿಸಿ ಉಳಿದವರು ಆ ಬಗ್ಗೆ ಗಂಭೀರವಾಗಿ ಪರಿಗಣಿಸಿದಂತೆ ಕಂಡು ಬರುತ್ತಿಲ್ಲ. ಹಾಗಾಗಿ, ಸರ್ಕಾರದ ಇಲಾಖೆಯ ಅಧಿಕಾರಿಗಳು ಆದಷ್ಟು ಬೇಗ ಪ್ರಸ್ತಾವನೆ ಸಲ್ಲಿಸಿ. ಈ ಅವಧಿಯಲ್ಲಿ ಚಿತ್ತಾಪುರದ ಅಭಿವೃದ್ದಿ ಆಗದಿದ್ದರೆ ಮುಂದೆಯೂ ಆಗುವುದಿಲ್ಲ. ನೀವು ಬಜೆಟ್ ಬಂದ ಮೇಲೂ ಮೈಗಳ್ಳತನ ತೋರಿಸಿದರೆ ನಾನೂ ಕೂಡಾ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಸೂಚಿಸಿದೆ.
ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ, ತಹಸೀಲ್ದಾರ ಶಾ ವಲಿ, ಸಿಪಿಐ ಪ್ರಕಾಶ ಯಾತನೂರು, ಕಾಳಗಿ ಮತ್ತು ಶಹಾಬಾದ್ ತಹಸೀಲ್ದಾರ ಅವರು ಉಪಸ್ಥಿತರಿದ್ದರು