ಕಾಮಗಾರಿ ಕಳಪೆಯಾದರೆ ಶಿಸ್ತು ಕ್ರಮ: ಶಾಸಕ ಪ್ರಭು ಚವ್ಹಾಣ ಎಚ್ಚರಿಕೆ
ಜಲ ಜೀವನ್ ಮಿಷನ್ ಯೋಜನೆಯಡಿ ಕ್ಷೇತ್ರದಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಕಾಮಗಾರಿ ಸರಿಯಾಗಿ ಆಗಬೇಕು. ಕೆಲಸ ಕಳಪೆಯಾದರೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಎಚ್ಚರಿಸಿದರು.
ಆಗಸ್ಟ್ 12ರಂದು ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಸಂಚರಿಸಿ ಜೆಜೆಎಂ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಪ್ರತಿ ಮನೆಗೆ ನಲ್ಲಿಗಳನ್ನು ಅಳವಡಿಸಿ ಶುದ್ಧ ಕುಡಿಯುವ ನೀರು ಪೂರೈಸುವುದು ಈ ಯೋಜನೆಯ ಉದ್ದೇಶವಾಗಿದ್ದು, ನೀರಿನ ತೊಟ್ಟಿ ಹಾಗೂ ಪೈಪ್ ಲೈನ್ ಕೆಲಸ ಸರಿಯಾಗಿ ಆಗಬೇಕು. ಪೈಪ್ ಅಳವಡಿಸಲು ಅಗೆದ ಗುಂಡಿಗಳನ್ನು ಸರಿಯಾಗಿ ಮುಚ್ಚಬೇಕು. ಕೆಲಸ ನಿಗದಿತ ಅವಧಿಯಲ್ಲಿ ಮುಗಿಸಿ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಗ್ರಾಮಸ್ಥರು ಕೂಡ ಅಭಿವೃದ್ಧಿ ಕೆಲಸಗಳಿಗೆ ಸಹಕರಿಸುವ ಜೊತೆಗೆ ಕೆಲಸ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕು. ಏನಾದರೂ ಲೋಪಗಳು ಕಾಣಿಸಿದಲ್ಲಿ ತಕ್ಷಣ ಸಂಬAಧಿಸಿದ ಅಧಿಕಾರಿ ಅಥವಾ ತಮ್ಮನ್ನು ಸಂಪರ್ಕಿಸಬೇಕೆAದು ಹೇಳಿದರು.
ಹಂಗರಗಾದಲ್ಲಿ 1.50 ಕೋಟಿ, ವನಮಾರಪಳ್ಳಿಯಲ್ಲಿ 1.96 ಕೋಟಿ, ಬಾದಲಗಾಂವ ತಾಂಡಾದಲ್ಲಿ 35.57 ಲಕ್ಷ, ದುಢಕನಾಳ್ ನಲ್ಲಿ 1.02 ಕೋಟಿ, ಸಂಗ್ರಾಮ ತಾಂಡಾದಲ್ಲಿ 27.51 ಲಕ್ಷ, ತೋರ್ಣಾ ವಾಡಿಯಲ್ಲಿ 1.38 ಕೋಟಿ, ತಪಶ್ಯಾಳದಲ್ಲಿ 2.63 ಕೋಟಿ ಹಾಗೂ ಖಂಡಿಕೇರಿ ತಾಂಡಾದಲ್ಲಿ 22.90 ಲಕ್ಷ ಮೊತ್ತದ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಸಾರ್ವಜನಿಕರ ಅಹವಾಲು ಸ್ವೀಕಾರ: ಶಾಸಕರು ತಾವು ಭೇಟಿ ನೀಡಿದ ಗ್ರಾಮಗಳಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು. ಸ್ಥಳೀಯರು ಗ್ರಾಮದಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಬೇಡಿಕೆ ಸಲ್ಲಿಸಿದರು. ಎಲ್ಲ ಬೇಡಿಕೆಗಳನ್ನು ಆದ್ಯತೆಯ ಮೇರೆಗೆ ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರರಾದ ಮಲಶೆಟ್ಟಿ ಚಿದ್ರೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಡಿ.ಸುಭಾಷ, ಮುಖಂಡರಾದ ವಸಂತ ಬಿರಾದಾರ, ರಾಜು ಪೋಕಲವಾರ, ಸುರೇಶ ಭೋಸ್ಲೆ, ರಾಮಶೆಟ್ಟಿ ಪನ್ನಾಳೆ,ಪ್ರತೀಕ್ ಚವ್ಹಾಣ, ಸಚಿನ ರಾಠೋಡ್, ದೊಂಡಿಬಾ ನರೋಟೆ, ವಸಂತ ರಾಠೋಡ್, ರಮೇಶ ಉಪಾಸೆ, ಸುನೀಲ ಸಿಗ್ರೆ, ಬಾಬುರಾವ ಬಿರಾದಾರ ಹಾಗೂ ಇತರರು ಉಪಸ್ಥಿತರಿದ್ದರು.