ರಾಜ್ಯ

“ಕನಿಷ್ಠ ವೇತನ”- ವಿವಿಧ ದೃಷ್ಟಿಕೋನಗಳು ಎಂಬ ವಿಚಾರ ಸಂಕಿರಣ

ಬೆಂಗಳೂರು: ಎಂಜಿನಿಯರಿಂಗ್ ಅಂಡ್ ಜನರಲ್ ವರ್ಕರ್‍ಸ್ ಯೂನಿಯನ್ ಸುವರ್ಣ ಮಹೋತ್ಸವದ ಅಂಗವಾಗಿ ಕಾಂ|| ಎಂ.ಡಿ. ಹರಿಗೋವಿಂದ ಸ್ಮಾರಕ ಉಪನ್ಯಾಸ ಕಾರ್ಯಕ್ರಮವು “ಕನಿಷ್ಠ ವೇತನ”- ವಿವಿಧ ದೃಷ್ಟಿಕೋನಗಳು ಎಂಬ ವಿಚಾರ ಸಂಕಿರಣವು 2023 ಸೆಪ್ಟೆಂಬರ್ 03, ಭಾನುವಾರದಂದು ಗಾಂಧಿ ಭವನ ಕುಮಾರ ಕೃಪಾ ರಸ್ತೆಯ ಮಹಾದೇವ ದೇಸಾಯಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿದ ಹೊಸತು ಮಾಸಪತ್ರಿಕೆಯ ಸಂಪಾದಕ ಸಿದ್ಧನಗೌಡ ಪಾಟೀಲ, “ತಮ್ಮ ಬದುಕಿನ ಕೊನೆ ಕ್ಷಣದವರೆಗೂ ಕಾರ್ಮಿಕ ವರ್ಗದವರ ಹಿತಾಸಕ್ತಿಗಾಗಿ ದುಡಿದವರು ಎಂ.ಡಿ ಹರಿಗೋವಿಂದ. ಹಲವಾರು ನಿಲುವುಗಳನ್ನು ಅವರು ಹೊಂದಿದ್ದರು. ಕಾರ್ಮಿಕ ವರ್ಗದ ಸಮಸ್ಯೆಗಳನ್ನು ಬಗೆಹರಿಸಲು ಪ್ರಬಲವಾಗಿ ಹೋರಾಡಿದ್ದರು. ಎಐಟಿಸಿಯು ಸ್ಥಾಪನೆಯ ಸಂದರ್ಭದಲ್ಲಿ ಅವರು ಒಂದು ಮಾತನ್ನು ಹೇಳುತ್ತಾರೆ, “ಕಾರ್ಮಿಕ ವರ್ಗ ಕೇವಲ ತನ್ನ ಬೇಡಿಕೆಗೆ ಸೀಮಿತವಾಗಿರಬಾರದು. ಇವತ್ತು ದೇಶದಲ್ಲಿ ಸ್ವಾತಂತ್ಯ್ರ ಹೋರಾಟ ನಡೆಯುತ್ತಿದೆ. ಆ ಕಾರಣಕ್ಕಾಗಿ ಈ ಕಾರ್ಮಿಕ ವರ್ಗ ಸ್ವಾತಂತ್ಯ್ರ ಹೋರಾಟದಲ್ಲಿ ಹಿಂದೆ ಬೀಳಬಾರದು ಎಂಬ ಕರೆಯನ್ನು ಅಂದು ಅವರು ನೀಡಿದ್ದರು. ಅದರನ್ವಯ ಎಐಟಿಸಿಯು ಸಂಘ ಬಹಳಷ್ಟು ಮಹತ್ತರವಾದ ಕಾರ್ಯಗಳನ್ನು ಮಾಡಿದೆ, ಸಂಪೂರ್ಣ ಸ್ವರಾಜ್ಯ ಅನ್ನುವ ಘೋಷಣೆ ಮೊಟ್ಟ ಮೊದಲು ಕೊಟ್ಟಿದ್ದೂ ಕೂಡ ಎಐಟಿಸಿಯು,” ಎಂದು ತಿಳಿಸಿದರು.

ಅತಿಥಿಯಾಗಿ ಆಗಮಿಸಿದ್ದ ಬೆಂಗಳೂರಿನ ಸೆಂಟರ್ ಫಾರ್ ಲೇಬರ್ ಸ್ಟಡೀಸ್ನ್ಯಾಷನಲ್ ಲಾ ಸ್ಕೂಲ್ ಯೂನಿವರ್ಸಿಟಿಯ ಪ್ರೊ. ಬಾಬು ಮ್ಯಾಥ್ಯೂ, “ಎಂ.ಡಿ ಹರಿಗೋವಿಂದ ಅವರು ತೋರಿಕೆಗಾಗಿ ಬಹಳ ತಾಳ್ಮೆಯ ವ್ಯಕ್ತಿಯಾಗಿದ್ದರೂ, ಅವರು ನಿಲುವು ಯಾವತ್ತಿಗೂ ಕಾರ್ಮಿಕ ವರ್ಗದವರ ಸಮಸ್ಯೆಗಳನ್ನು ಬಗೆಹರಿಸುವುದಾಗಿತ್ತು. ಇದಕ್ಕಾಗಿ ಅವರು ಹೋರಾಟಗಳನ್ನು ಮಾಡಿದ್ದರು. ಇನ್ನು ಎಐಟಿಸಿಯು ಕಾರ್ಮಿಕ ವರ್ಗದವರ ಏಳಿಗೆಗಾಗಿ ಬಹಳಷ್ಟು ದುಡಿಯಬೇಕಾಗಿದೆ,” ಎಂದು ಅಭಿಪ್ರಾಯಿಸಿದರು.

ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಎಸ್.ಎನ್. ಮೂರ್ತಿ ಮಾತನಾಡಿ“ಭ್ರಷ್ಟಾಚಾರವು ನಮ್ಮ ಸಮಾಜವನ್ನು ಆವರಿಸಿದೆ. ಅದು ಯಾವುದೇ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ, ಎಲ್ಲವನ್ನೂ ಆವರಿಸಿ ಸಂಕಷ್ಟಕ್ಕೆ ಎಡೆಮಾಡಿದೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾರತೀಯ ವಕೀಲರ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಾಂ. ಮುರಳಿಧರ, ಎಐಟಿಸಿಯು ಕರ್ನಾಟಕ ರಾಜ್ಯ ಮಂಡಳಿ ಪ್ರಧಾನ ಕಾರ್ಯದರ್ಶಿ ಕಾಂ. ವಿಜಯ ಭಾಸ್ಕರ್ ಡಿ.ಎ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!