ಬೀದರ್

ಔರಾದ್ ನಲ್ಲಿ 27ರಂದು “ದಹಿ ಹಂಡಿ” ಉತ್ಸವ

ಔರಾದ್: ಶ್ರೀ ಕೃಷ್ಣ ಜನ್ಮಾಷ್ಠಮಿ‌ನಿಮಿತ್ತ ಶ್ರೀ ಉದ್ಭವಲಿಂಗ ಅಮರೇಶ್ವರ ದಹಿ ಹಂಡಿ ಉತ್ಸವ ಸಮಿತಿ ಹಾಗೂ ಪ್ರಭು ಎಂಟರ್‌ಪ್ರೈಸೆಸ್ ಆಶ್ರಯದಲ್ಲಿ ಆಗಸ್ಟ್ 27ರಂದು( ಮಂಗಳವಾರ) ಮಧ್ಯಾಹ್ನ 3 ಗಂಟೆಗೆ ಔರಾದ್(ಬಿ) ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಇದೇ‌ ಮೊದಲ ಬಾರಿ ಸಾರ್ವಜನಿಕ
‘ದಹಿ ಹಂಡಿ ಉತ್ಸವ’ (ಮೊಸರು ಗಡಿಗೆ ಒಡೆಯುವ ಸ್ಪರ್ಧೆ) ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಅದ್ದೂರಿ, ಅರ್ಥಪೂರ್ಣ ಜೊತೆಗೆ ನಮ್ಮ ಶ್ರೇಷ್ಠ ಪರಂಪರೆ, ಸಂಸ್ಕೃತಿ ಉಳಿಸಿ, ಬೆಳೆಸಲು ಪೂರಕವಾಗಿ ದಹಿ ಹಂಡಿ ಉತ್ಸವ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಎಲ್ಲ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ‌ ಪ್ರಭು ಎಂಟರ್ ಪ್ರೈಸಸ್ ‌ಮುಖ್ಯಸ್ಥರೂ ಆಗಿರುವ ಶಾಸಕ ಪ್ರಭು.ಬಿ ಚವ್ಹಾಣ್ ಅವರು ಮನವಿ ಮಾಡಿದ್ದಾರೆ.

ಶ್ರೀ ಕೃಷ್ಣ ಜನ್ಮಾಷ್ಠಮಿ ದೇಶ-ವಿದೇಶಗಳಲ್ಲಿ ಅತ್ಯಂತ ಶೃದ್ಧೆ, ಭಕ್ತಿಯೊಂದಿಗೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಲೀಲೆಗಳಲ್ಲಿ ಬಾಲಲೀಲೆ ವಿಶಿಷ್ಟವಾಗಿದೆ.‌ ದಹಿ ಹಂಡಿ‌ ಒಡೆಯುವಿಕೆಯು ಬಾಲಕೃಷ್ಣನ ಕ್ರಿಯೆಗಳನ್ನು ಅನುಕರಿಸುತ್ತದೆ. ಹೀಗಾಗಿ ಎಲ್ಲೆಡೆ ದಹಿ ಹಂಡಿ ಉತ್ಸವ(ಮಡಿಕೆ ಉತ್ಸವ) ಬಹಳಷ್ಟು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ ಉತ್ಸವ ನಮ್ಮಲ್ಲಿಯೂ ನಡೆಯಬೇಕೆಂಬುದು ಬಹಳಷ್ಟು ದಿನಗಳ ಆಕಾಂಕ್ಷೆಯಾಗಿತ್ತು. ಅದರಂತೆ ಈ ವರ್ಷ ಅದ್ದೂರಿಯಾಗಿ ದಹಿ ಹಂಡಿ ಉತ್ಸವ ಏರ್ಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಜೃಂಭಣೆಯಿಂದ ಆಚರಿಸಲು ಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ವಿಜೇತರಿಗೆ ಬಹುಮಾನ: ದಹಿ ಹಂಡಿ ಉತ್ಸವದಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರಿಗಾಗಿ ಎರಡು ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ವಿಜೇತ ತಂಡಗಳಿಗೆ ಪ್ರಥಮ ಬಹುಮಾನ 21,000, ದ್ವಿತೀಯ ಬಹುಮಾನ 11,000 ಹಾಗೂ ತೃತಿಯ ಬಹುಮಾನ 7,000 ಮತ್ತು ಪಾರಿತೋಷಕ ವಿತರಿಸಲಾಗುತ್ತದೆ. ಹಾಗೆಯೇ ಶ್ರೀಕೃಷ್ಣ ವೇಷಧಾರಿ ಮಕ್ಕಳಿಗೆ ವಿಶೇಷ ಬಹುಮಾನ ಇರುತ್ತದೆ. 10 ವರ್ಷದೊಳಗಿನ‌ ಮಕ್ಕಳು ಮಾತ್ರ ಶ್ರೀ ಕೃಷ್ಣ ವೇಷಧಾರಿ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಹೇಳಿದ್ದಾರೆ.

ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಅತ್ಯಂತ ಪವಿತ್ರ ಹಾಗೂ ಮಹಾಗ್ರಂಥವಾದ ಭಗವದ್ಗೀತೆ ಹಾಗೂ ಮಹಾಭಾರತದ ಪ್ರಮುಖ ಪಾತ್ರಧಾರಿ ಶ್ರೀಕೃಷ್ಣರು ಭಗವಾನ ವಿಷ್ಣುವಿನ ಎಂಟನೇ ಅವತಾರವಾಗಿದ್ದಾರೆ. ಅವರು ಬೋಧಿಸಿದ ಗೀತೆ ಭಗವದ್ಗೀತೆ ಎಂದೇ ಪ್ರಸಿದ್ಧವಾಗಿದೆ. ಎಲ್ಲ ವ್ಯಕ್ತಿಗಳಿಗೂ, ಎಲ್ಲ ಸಂದರ್ಭಕ್ಕೂ, ಎಲ್ಲ ಕಾಲಕ್ಕೂ ಅನ್ವಯವಾಗುವ ಸಾರಗಳನ್ನು ಇದು ಒಳಗೊಂಡಿದೆ. ಅತ್ಯಂತ ಸ್ಪೂರ್ತಿದಾಯಕವಾಗಿರುವ ಶ್ರೀಕೃಷ್ಣನ ಜೀವನದಿಂದ ನಾವು ಸಾಕಷ್ಟು ನೀತಿಗಳನ್ನು ಕಲಿಯಬಹುದು. ಇಂತಹ ವಿಷಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಮತ್ತು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಲು ಇಂತಹ ಕಾರ್ಯಕ್ರಮ ಸಹಕಾರಿಯಾಗಲಿವೆ ಎಂದು ಶಾಸಕರು ತಿಳಿಸಿದ್ದಾರೆ.

ತಂಡಗಳ ನೋಂದಣಿಗೆ ಅವಕಾಶ: ದಹಿ ಹಂಡಿ ಉತ್ಸವದಲ್ಲಿ ಭಾಗವಹಿಸುವ ತಂಡಗಳ ನೋಂದಣಿಗೆ ಮಂಗಳವಾರ‌ ಬೆಳಿಗ್ಗೆವರೆಗೆ ಅವಕಾಶವಿದೆ. ಭಾಗಿಯಾಗಬೇಕಾದ ತಂಡದ
ಸದಸ್ಯರು 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು. ಒಂದು ತಂಡದಲ್ಲಿ ಕನಿಷ್ಟ 12 ಜನರು ಇರಬೇಕು. ಆಸಕ್ತ ತಂಡಗಳು ಆಗಸ್ಟ್ 27ರ ಬೆಳಗ್ಗೆ 11 ಗಂಟೆಯೊಳಗಾಗಿ ಶಿವರಾಜ ಅಲ್ಮಾಜೆ-9448605300, ಅಥವಾ ಬಸವರಾಜ ಹಳ್ಳೆ- 8123979550ಗೆ ಕರೆ ಮಾಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ನಂತರ ಬರುವವರಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಶಾಸಕರು ತಿಳಿಸಿದ್ದಾರೆ.
——–

ಶ್ರೀಕೃಷ್ಣನು ಭೂಮಿಯ ಮೇಲೆ ಅವತರಿಸಿದ ಶುಭ ದಿನವನ್ನು ಶ್ರೀ ಕೃಷ್ಣ ಜನ್ಮಾಷ್ಠಮಿ ಎಂದು ಆಚರಿಸಲಾಗುತ್ತದೆ. ಭಾರತೀಯ ಪರಂಪರೆಯಲ್ಲಿ ಇದು ಬಹುದೊಡ್ಡ ಹಬ್ಬ. ಈ ದಿನಕ್ಕೆ ವಿಶೇಷ ಮಹತ್ವವಿದೆ. ಗೀತೋಪದೇಶ ಮೂಲಕ ಶ್ರೀಕೃಷ್ಣನು ಇಡೀ ಮನುಕುಲದ ಏಳ್ಗೆಗೆ ಸರಳ ಮಾರ್ಗ ತೋರಿಸಿದ್ದಾನೆ. ಜನ್ಮಾಷ್ಠಮಿಯ ಶುಭ ದಿನದಂದು ಶ್ರೀಕೃಷ್ಣನನ್ನು ಪೂಜಿಸಿ, ನೆನೆದರೆ ಎಲ್ಲ ಸಂಕಷ್ಟ ನಿವಾರಣೆಯಾಗುತ್ತವೆ ಎಂಬ ಅಚಲ ನಂಬಿಕೆಯಿದೆ. ದಹಿ ಹಂಡಿ‌ ಉತ್ಸವ, ವೇಷಭೂಷಣ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕು ಮತ್ತು ಕಾರ್ಯಕ್ರಮ ಶಾಂತಿ, ಸೌಹಾರ್ದತೆಯಿಂದ ನಡೆಯಲು ಸಹಕರಿಸಬೇಕು.

Ghantepatrike kannada daily news Paper

Leave a Reply

error: Content is protected !!