ಎನ್ಎಚ್ಎಂ ನೌಕರರ ಹೋರಾಟ
ಬೀದರ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎನ್ಎಚ್ಎಂ ನೌಕರರನ್ನು ಕಾಯಂಗೊಳಿಸುವAತೆ ಒತ್ತಾಯಿಸಿ ಕಪ್ಪು ಪಟ್ಟಿ ಧರಿಸಿ ಒಳಗುತ್ತಿಗೆ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಆ.೧೬ರಿಂದ ಹೋರಾಟ ಆರಂಭಿಸಿದ್ದಾರೆ. ಕಳೆದ ಎರಡು ದಶಕದಿಂದ ರಾಜ್ಯದಲ್ಲಿ ೨೮ ಸಾವಿರಕ್ಕೂ ಅಧಿಕ ನೌಕರರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದ್ದು, ನೌಕರರ ಕಾಯಂಗೆ ಕಡತ ಸಿದ್ಧಪಡಿಸಲು ಸಚಿವರು ಸೂಚಿಸಿದ್ದಾರೆ. ಅದರಂತೆ ಕಡತ ಸಿದ್ದಗೊಂಡು ಇಲಾಖೆ ಹಂತದಲ್ಲಿಯೇ ಇದೆ.
ಕರೊನಾ ಮೊದಲ ಹಾಗೂ ಎರಡನೇ ಅಲೆಯಲ್ಲಿ ಜೀವದ ಹಂಗು ತೋರೆದು ಕೆಲಸ ನಿರ್ವಹಿಸಿದ್ದಾರೆ. ಇದರಲ್ಲಿ ಕೆಲವರು ಜೀವವನ್ನು ತೆತ್ತಿದ್ದಾರೆ. ಚುನಾವಣೆ ಪೂರ್ವ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಕಾಂಗ್ರೆಸ್ ಸರ್ಕಾರ ನೌಕರರ ಕಾಯಂಗೊಳಿಸಲು ಆದೇಶಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ನೌಕರರು ಕಪ್ಪು ಪಟ್ಟಿ ಧರಿಸಿ ಮೊದಲ ಹಂತದಲ್ಲಿ ಹೋರಾಟಕ್ಕೆ ಮುಂದಾಗಿದ್ದಾರೆ. ಬೇಡಿಕೆ ಸರ್ಕಾರ ನಿರ್ಲಕ್ಷö್ಯ ಮಾಡಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎನ್ಎಚ್ಎಂ ಒಳಗುತ್ತಿಗೆ ನೌಕರರಾದ ಕೃಪಾ, ಮೋಹಿನಿ ಮೋರೆ, ರಾಚಣ್ಣ, ಗುರು, ಎಲಿಜಬತ್ ರಾಣಿ, ಶೋಭಾ ವಾಯಿ, ಡಾ.ಎಸ್. ನೌಬಾದೆ ಹೇಳಿದ್ದಾರೆ.