ಆರೋಗ್ಯ ರಕ್ಷಣೆಯಲ್ಲಿ ಎದೆ ಹಾಲು ಪಾತ್ರ ಮಹತ್ವದ್ದು
ಬೀದರ್: ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ತಾಯಿ ಎದೆ ಹಾಲಿನ ಪಾತ್ರ ಮಹತ್ವದ್ದಾಗಿದೆ ಎಂದು ಡಾ. ಶರಣ ಬುಳ್ಳಾ ಹೇಳಿದರು.
ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ಔರಾದ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಅಂಗವಾಗಿ ಆಯೋಜಿಸಿದ್ದ ಸ್ತನ್ಯಪಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಗುವಿಗೆ ಅಗತ್ಯವಾದ ಎಲ್ಲ ಪೌಷ್ಟಿಕಾಂಶಗಳು ತಾಯಿ ಹಾಲಿನಲ್ಲಿ ಇರುತ್ತವೆ. ಹೀಗಾಗಿ ಆರು ತಿಂಗಳ ವರೆಗೆ ತಾಯಿ ಹಾಲನ್ನೇ ಕುಡಿಸಬೇಕು ಎಂದು ತಿಳಿಸಿದರು.
ಸ್ತನ್ಯಪಾನ ಮಾಡಿಸುವುದರಿಂದ ತಾಯಂದಿರದಲ್ಲಿ ಬೊಜ್ಜಿನ ಸಮಸ್ಯೆ ಕಡಿಮೆಯಾಗುತ್ತದೆ. ಮಧುಮೇಹ ಬರುವ ಸಾಧ್ಯತೆ ಕೂಡ ಅಲ್ಪವಾಗಿರುತ್ತದೆ ಎಂದು ತಿಳಿಸಿದರು.
ಸ್ತನ್ಯಪಾನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಆಗಸ್ಟ್ 1 ರಿಂದ 7 ರ ವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಿಸಲಾಗುತ್ತದೆ ಎಂದು ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಅಧ್ಯಕ್ಷ ಡಾ. ಕಪಿಲ್ ಪಾಟೀಲ ಹೇಳಿದರು.
ತಾಯಿಯ ಎದೆ ಹಾಲು ಸೇವನೆಯಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದರು.
ಕ್ಲಬ್ ಕಾರ್ಯದರ್ಶಿ ಶಿವಕುಮಾರ ಪಾಖಾಲ್, ಆಯುಷ್ಮಾನ್ ಭಾರತ ಯೋಜನೆಯ ಕಲಬುರಗಿ ವಲಯ ಅಧಿಕಾರಿ ಡಾ. ಶಂಕರರಾವ್ ದೇಶಮುಖ, ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಇದ್ದರು.