600ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗಿ – ಉಮೇಶಕುಮಾರ
ಬೀದರ: ಆಗಸ್ಟ್ 31, ಸೆಪ್ಟೆಂಬ್ 1 ಮತ್ತು 2 ರಂದು ಮೂರು ದಿವಸಗಳ ಕಾಲ ನಗರದ ನೆಹರೂ ಮೈದಾನದಲ್ಲಿ ವಿದ್ಯಾಭಾರತಿ ಕರ್ನಾಟಕ ವತಿಯಿಂದ ಪ್ರಾಂತೀಯ ಅಥ್ಲೇಟಿಕ್ ಕ್ರೀಡಾಕೂಟ-2024 ಜರುಗಲಿವೆ. ಈ ಕ್ರೀಡಾಕೂಟದಲ್ಲಿ ರಾಜ್ಯದ 12 ಜಿಲ್ಲೆಗಳ 600ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ ಎಂದು ವಿದ್ಯಾಭಾರತಿ ಕರ್ನಾಟಕ ಸಂಸ್ಥೆಯ ಅಧ್ಯಕ್ಷ ಎಸ್.ಬಿ.ಸಜ್ಜನಶೆಟ್ಟಿ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ರನ್ನಿಂಗ್, ಹರ್ಡಲ್ಸ್, ಹೈಜಂಪ್ ಲಾಂಗ್‍ಜಂಪ್, ಕ್ರಾಸ್ ಕಂಟ್ರಿ, ಗುಂಡು ಎಸೆತ ಸೇರಿದಂತೆ ಸುಮಾರು 23 ಪ್ರಕಾರದ ಆಟಗಳನ್ನು ಆಡಿಸಲಾಗುತ್ತದೆ. ವಿದ್ಯಾಭಾರತಿ ವತಿಯಿಂದ ನಡೆಸುವ ಕ್ರೀಡೆಗಳಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸುತ್ತಾರೆ. ಇಲ್ಲಿ ನ್ಯಾಯಯುತ ನಿರ್ಣಯ ಕೈಗೊಳ್ಳಲಾಗುತ್ತದೆ. ಶಾಂತತೆ, ಶಿಸ್ತು, ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ ಎಂದರು.
ಈ ಅಥ್ಲೇಟಿಕ್ ಕ್ರೀಡಾಕೂಟವನ್ನು ಬೀದರ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹೈ.ಕ.ಶಿ.ಸಂಸ್ಥೆ ನಿರ್ದೇಶಕ ಡಾ. ರಜನೀಶ ವಾಲಿ, ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಹ ಕಾರ್ಯದರ್ಶಿ ಪೀರಪ್ಪ ಔರಾದೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿಎಸ್‍ಪಿ ಎಸ್.ಎ.ಮುನ್ನಾಫ್ ಆಗಮಿಸಲಿದ್ದಾರೆ. ವಕ್ತಾರರಾಗಿ ವಿದ್ಯಾಭಾರತಿ ಕರ್ನಾಟಕ ಪ್ರಾಂತ ಕಾರ್ಯದರ್ಶಿ ವಸಂತಕುಮಾರ ಬೆಂಗಳೂರು, ಗೌರವ ಉಪಸ್ಥಿತಿಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಅಮೃತ ಅಷ್ಟಗಿ, ಸರಸ್ವತಿ ಶಾಲೆಯ ಹಿರಿಯ ವಿದ್ಯಾರ್ಥಿ ಸಂಗಮೇಶ ಕೊಟರ್ಕಿ ವಹಿಸಲಿದ್ದಾರೆ. ಸಮಾರೋಪ ಸಮಾರಂಭವು ಸೆ. 2ರಂದು ಜರುಗಲಿದ್ದು, ಮುಖ್ಯ ಅತಿಥಿಗಳಾಗಿ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ.ವೀರಣ್ಣ ಆಗಮಿಸಲಿದ್ದಾರೆ. ಪ್ರಶಸ್ತಿ ಪ್ರದಾನವನ್ನು ಗುರುನಾನಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಬಲಬೀರಸಿಂಗ್ ಮಾಡಲಿದ್ದಾರೆ. ಸಮಾರೋಪ ನುಡಿಗಳನ್ನು ಪ್ರಾಂತ ಸಂಘಟನಾ ಕಾರ್ಯದರ್ಶಿ ವಿದ್ಯಾಭಾರತಿ ಕರ್ನಾಟಕದ ಉಮೇಶಕುಮಾರ ಬೆಂಗಳೂರು ನುಡಿಯಲಿದ್ದಾರೆ ಎಂದು ಸಜ್ಜನಶೆಟ್ಟಿ ತಿಳಿಸಿದರು.
ಪ್ರಾಂತ ಸಂಘಟನಾ ಕಾರ್ಯದರ್ಶಿ ವಿದ್ಯಾಭಾರತಿ ಕರ್ನಾಟಕದ ಉಮೇಶಕುಮಾರ ಬೆಂಗಳೂರು ಮಾತನಾಡಿ 1965 ರಿಂದ ವಿದ್ಯಾಭಾರತಿ ಕರ್ನಾಟಕ ರಾಜ್ಯದಲ್ಲಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ 620ಕ್ಕೂ ಹೆಚ್ಚು ಶಾಲೆಗಳಿವೆ. 1 ಲಕ್ಷ 57 ಸಾವಿರಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 5700 ಶಿಕ್ಷಕರು, 2500 ಆಡಳಿತ ಮಂಡಳಿ ಸದಸ್ಯರು ಶಿಕ್ಷಣ ಕೇಂದ್ರದಲ್ಲಿದ್ದಾರೆ. ವಿದ್ಯಾಭಾರತಿಯ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡವರು ಎಸ್‍ಜಿಎಫ್‍ಐ ನಲ್ಲಿ ನೇರವಾಗಿ ಪಾಲ್ಗೊಂಡು ವಿಜೇತರಾಗಿದ್ದಾರೆ. ಪ್ಯಾರೀಸ್ ಒಲಿಂಪಿಕ್ಸ್‍ನಲ್ಲಿ ಪಾಲ್ಗೊಂಡ ನಿಜೋ ಚಾಕೋ ಎಂಬ ಕ್ರೀಡಾಪಟು ವಿದ್ಯಾಭಾರತಿ ಸಂಸ್ಥೆಯ ವಿದ್ಯಾರ್ಥಿಯಾಗಿದ್ದು ನಮಗೆ ಹೆಮ್ಮೆಯಿದೆ ಎಂದರು. ಬೀದರ ಜಿಲ್ಲೆಯಲ್ಲಿ ಒಟ್ಟು 36 ಶಾಲೆಗಳು ವಿದ್ಯಾಭಾರತಿ ಜೊತೆ ಗುರುತಿಸಿಕೊಂಡು ಕೆಲಸ ಮಾಡುತ್ತಿವೆ. ಈ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಬಾಲಕ, ಕಿಶೋರ ಮತ್ತು ತರುಣ ಎಂದು ಮೂರು ವಿಭಾಗಗಳಾಗಿ ವಿಂಗಡಣೆ ಮಾಡಲಾಗಿದೆ. ಇದರಲ್ಲಿ ಮಹಿಳೆ ಮತ್ತು ಪುರುಷರು ಇಬ್ಬರಿಗೂ ಭಾಗವಹಿಸಲು ಅವಕಾಶವಿದೆ. ರಾಜ್ಯಮಟ್ಟದ ಈ ಕ್ರೀಡಾಕೂಟದಲ್ಲಿ ವಿಜೇತರಾದವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುತ್ತಾರೆ. ಕ್ರೀಡಾಕೂಟಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕ್ರೀಡಾಪಟುಗಳಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಉಮೇಶಕುಮಾರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿದ್ಯಾಭಾರತಿ ಕರ್ನಾಟಕದ ಜಿಲ್ಲಾ ಕಾರ್ಯದರ್ಶಿ ಭಗುಸಿಂಗ್ ಜಾಧವ್, ಅಥ್ಲೇಟಿಕ್ ಕ್ರೀಡಾಕೂಟದ ಸ್ವಾಗತ ಸಮಿತಿಯ ಕೋಶಾಧ್ಯಕ್ಷೆ ಪ್ರತಿಭಾ ಚಾಮಾ ಉಪಸ್ಥಿತರಿದ್ದರು.