371 ಜೆ ಮೀಸಲಾತಿಗೆ ಟಚ್ ಮಾಡಿದರೆ ಸುಮ್ಮನಿರಲ್ಲ: ಡಾ. ರಜನೀಶ ವಾಲಿ ಎಚ್ಚರಿಕೆ
ಬೀದರ್: ಕಲ್ಯಾಣ ಕರ್ನಾಟಕ ಕಲಂ 371 ಜೆ ವಿಧೇಯಕಕ್ಕೆ ಟಚ್ ಮಾಡಿದರೆ ಬೀದರ ಜನ ಬಿದ್ರಿಗಳೇ ಎಂಬುದು ಹಸಿರು ಪ್ರತಿಷ್ಠಾನದವರು ನೆನಪು ಮಾಡಿಕೊಳ್ಳಲಿ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷರು ಹಾಗೂ ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯರಾದ ಡಾ. ರಜನೀಶ ವಾಲಿ ತಿಳಿಸಿದರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ವತಿಯಿಂದ ಗುರುವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು ಈ ಭಾಗಕ್ಕೆ 371 ಜೆ ಬರಲು ಇಪ್ಪತ್ತು ವರ್ಷಗಳ ನಿರಂತರ ಹೋರಾಟ ನಡೆದಿದೆ. ನೂರಾರು ಸಾವು ನೋವುಗಳ ಬಳಿಕ ಈ ಭಾಗಕ್ಕೆ ಸೂಕ್ತ ಸ್ಥಾನಮಾನ ದೊರೆತಿದೆ. ಆದರೆ ಹಸಿರು ಪ್ರತಿಷ್ಠಾನ ಎಂದು ಹೇಳಿಕೊಳ್ಳುವ ಕೆಲವು ಭಂಡರು ಸರ್ಕಾರದ ಮೇಲೆ ಒತ್ತಡ ತಂದು ಇದನ್ನು ರದ್ದುಗೊಳಿಸಲು ಪ್ರಯತ್ನಿಸುತ್ತಿರುವರು. ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಅವರು ಇದಕ್ಕೆ ಪುಷ್ಠಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಈ ಭಾಗದ ಎಲ್ಲಾ ನೇಮಕಾತಿಗಳನ್ನು ತಡೆ ಹಿಡಿಯುವಂತೆ ಒತ್ತಾಯಿಸಿರುತ್ತಾರೆ. ಇಂತಹ ಅಸೂಯೆ ರಾಜಕೀಯಕ್ಕೆ ಮುಖ್ಯಮಂತ್ರಿಗಳು ಹಾಗೂ ಸರ್ಕಾರ ಬೆಲೆ ನೀಡದೆ ನಿಮ್ಮದೇ ಕೇಂದ್ರ ಸರ್ಕಾರ ನೀಡಿರುವ ಈ ಸ್ಥಾನಮಾನ ಮುಂದುವರೆಸಬೇಕೆಂದು ಆಗ್ರಹಿಸಿದರು.
ಈ ತಿಂಗಳ 29 ರಂದು ಬೆ. 10 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಸುಮಾರು ಹತ್ತು ಸಾವಿರ ವಿವಿಧ ಸಂಘಟನೆಗಳ ಪ್ರಮುಖರು, ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು, ಕಾಲೇಜು ವಿದ್ಯಾರ್ಥಿಗಳು, ವ್ಯಾಪಾರಸ್ಥರು ಸೇರಿ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಮಾತನಾಡಿ 371 ಜೆ ಮೀಸಲಾತಿಗೆ ಮುಟ್ಟಿದರೆ ರಕ್ತಕ್ರಾಂತಿಯಾಗುತ್ತದೆ. ಬೆಂಗಳೂರಿನ ಕೆಲವು ಫುಡಾರಿಗಳು ಕ.ಕರ್ನಾಟಕದ ಮೀಸಲಾತಿಗೆ ವಿರೋಧಿಸುತ್ತಿರುವುದನ್ನು ನೋಡಿಯೂ ಈ ಭಾಗದ ಸಂಸದರು, ಸಚಿವರು, ಶಾಸಕರು ಸುಮ್ಮನೆ ಕುಳಿತುಕೊಳ್ಳದೆ ಬಿಸಿ ಮುಟ್ಟಿಸುವ ಕಾರ್ಯ ಮಾಡಬೇಕು. ಸಚಿವ ಎಚ್.ಕೆ.ಪಾಟೀಲರು ಕಣ್ತಪ್ಪಿನಿಂದ ಸಹಿ ಮಾಡಲಾಗಿದೆ ಎಂದು ಹೇಳುತ್ತಾರೆ. ಇದೆಂಥಾ ಬೇಜವಾಬ್ದಾರಿತನ? ಎಂದು ಆಕ್ರೋಶ ಹೊರಹಾಕಿದರು. ನಾವು ಮಲಗಿದರೆ ಕುಂಭಕರ್ಣ, ಎದ್ದರೆ ವೀರಭದ್ರ ಎಂಬುದನ್ನು ಸರ್ಕಾರ ಅರಿಯಬೇಕು. ರಾಜ್ಯದ ಅಖಂಡತೆಗಾಗಿ ಕ.ಕ. ಜನತೆ ಹೋರಾಡುತಿದ್ದಾರೆ. ಶರಣರ, ಸಂತರ ಭೂಮಿಯಿದು. ನಮ್ಮಲ್ಲಿ ಸ್ವಾಭಿಮಾನದ ಕಿಚ್ಚಿದೆ. ನಾವೇನು ಭಿಕ್ಷೆ ಬೇಡುತ್ತಿಲ್ಲ. 371 ಜೆ ನಮ್ಮ ಸಂವಿಧಾನಾತ್ಮಕ ಹಕ್ಕು. ಇದಕ್ಕೆ ಕೆಣಕಿದರೆ ಮುಂದಿನ ದಿನಗಳಲ್ಲಿ ಕ.ಕರ್ನಾಟಕ ಬಂದ್ ಮಾಡಿ ಹೋರಾಟ ಮಾಡಲಾಗುವುದು ಎಂದರು.
ಬೀದರ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ.ಶೆಟಕಾರ ಮಾತನಾಡಿ ಜೂ. 29 ರಂದು ಬೆ. 11 ಗಂಟೆಗೆ ಹೋರಾಟದ ಸಂದರ್ಭದಲ್ಲಿ ಎರಡು ಗಂಟೆಗಳ ಕಾಲ ವ್ಯಾಪಾರ ಮತ್ತು ವಾಣಿಜ್ಯ ಮಳಿಗೆಗಳನ್ನು ಬಂದ್ ಮಾಡಿ ಹೋರಾಟಕ್ಕೆ ಬೆಂಬಲಿಸಬೇಕೆಂದು ಕರೆಕೊಟ್ಟರು.
ಕ.ಕ.ಹೋರಾಟ ಸಮಿತಿ ಸಹ ಸಂಚಾಲಕ ವಿನಯ ಮಾಳಗೆ, ಹೋರಾಟ ಸಮಿತಿ ಸಲಹೆಗಾರ ರಾಜೇಂದ್ರ ವಣಗೇರಿ ಮಾತನಾಡಿದರು.
ಸಮಿತಿಯ ಸಂಚಾಲಕ ಸುರೇಶ ಚನಶೆಟ್ಟಿ, ಕಾರ್ಯದರ್ಶಿ ಶಿವಶಂಕರ ಟೋಕರೆ, ಚಂದ್ರಶೇಖರ ಪಾಟೀಲ ಹೋಚಕನಳ್ಳಿ ಉಪಸ್ಥಿತರಿದ್ದರು.