ಬೀದರ್

371ನೇ(ಜೆ) ಕಲಂ ವಿರೋಧಿ ಪಟ್ಟಭದ್ರ ಶಕ್ತಿಗಳ ವಿರುದ್ಧ ಉಗ್ರ ಹೋರಾಟ ನಡೆಸುವುದು ಅತಿ ಅವಶ್ಯವಾಗಿದೆ.

ಬೀದರ : ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಒತ್ತಾಯಿಸಿ ದಶಕಗಳಿಂದ ಸಂವಿಧಾನದ 371ನೇ ಕಲಂ ಜಾರಿಗಾಗಿ ಹೋರಾಟ ಮಾಡಿದ ಫಲಸ್ವರೂಪ ಅದರಂತೆ ಈ ಹೋರಾಟಕ್ಕೆ ಬಲವಾದ ರಾಜಕೀಯ ಇಚ್ಛಾಶಕ್ತಿ ದೊರಕಿರುವುದರಿಂದ 2013 ರಲ್ಲಿ ಕಲ್ಯಾಣ ಕರ್ನಾಟಕಕ್ಕೆ 371ನೇ(ಜೆ) ಕಲಂ ಜಾರಿಗೆ ಬಂದು ಒಂದು ದಶಕ ಕಳೆದಿದೆ. ನಮ್ಮ ಪ್ರದೇಶದ ಅರ್ಹ ಅಭ್ಯರ್ಥಿಗಳಿಗೆ ಸರಕಾರಿ ನೌಕರಿಗಳಲ್ಲಿ ಮತ್ತು ವೃತ್ತಿಪರ ಶೈಕ್ಷಣಿಕ ಪ್ರವೇಶಗಳಲ್ಲಿ ನಮ್ಮ ಹಕ್ಕಿನ ಸ್ಥಾನಗಳು ಲಭ್ಯವಾಗುತ್ತಿರುವ ಸಂದರ್ಭದಲ್ಲಿ ಬೆಂಗಳೂರಿನ ಕೆಲವು ಪಟ್ಟಭದ್ರ ಹಿತಾಸಕ್ತಿ ಜನರು 371ನೇ(ಜೆ) ಕಲಂ ಜಾರಿಯಾಗಿರುವುದರಿಂದ ಕೇವಲ ಕಲ್ಯಾಣ ಕರ್ನಾಟಕದವರಿಗೆ ಮಾತ್ರ ನೌಕರಿಗಳಲ್ಲಿ ಮತ್ತು ಶೈಕ್ಷಣಿಕ ಪ್ರವೇಶಗಳಲ್ಲಿ ಹೆಚ್ಚಿನ ಅವಕಾಶಗಳು ಸಿಗುತ್ತಿವೆ, ರಾಜ್ಯದ 24 ಜಿಲ್ಲೆಗಳಿಗೆ ಇದರಿಂದ ಅನ್ಯಾಯವಾಗುತ್ತಿದೆ ಎಂದು ಆಧಾರ ರಹಿತವಾದ ಸುಳ್ಳು ಸುದ್ದಿಯನ್ನು ಹಬ್ಬಿಸುವ ಮುಖಾಂತರ ಕಲ್ಯಾಣ ಕರ್ನಾಟಕ ವಿರುದ್ಧ, 371ನೇ(ಜೆ) ಕಲಂ ವಿರುದ್ಧ, ಸಂವಿಧಾನ ವಿರೋಧಿ ಹೋರಾಟ ನಡೆಸಿದ್ದಾರೆ. ಈ ಪಟ್ಟಭದ್ರ ಹಿತಾಸಕ್ತಿ ಕಲ್ಯಾಣ ವಿರೋಧಿ ಹೋರಾಟಕ್ಕೆ ಕಲ್ಯಾಣ ಕರ್ನಾಟಕದ ಜನಮಾನಸ ಅತೀ ಗಂಭೀರವಾಗಿ ಪರಿಗಣಿಸಿ ನಮ್ಮ ಅಭಿವೃದ್ಧಿ ವಿರೋಧಿಗಳಿಗೆ ತಕ್ಕ ಉತ್ತರ ನೀಡಲು ಇಡೀ ಕಲ್ಯಾಣ ಕರ್ನಾಟಕದಲ್ಲಿ ಉಗ್ರ ಹೋರಾಟ ನಡೆಸುವುದು ಅತಿ ಅವಶ್ಯವಾಗಿದೆ. ಇದಕ್ಕೆ ಪೂರಕವಾಗಿ ಈಗಾಗಲೇ ಕಲಬುರಗಿ ಮತ್ತು ಸಿಂಧನೂರಿನಲ್ಲಿ ಬೃಹತ್ ಹೋರಾಟ ಕೈಗೊಳ್ಳಲಾಗಿದೆ. ಅದರಂತೆ ಬೀದರ ಸೇರಿದಂತೆ, ಯಾದಗೀರ, ಕಲ್ಯಾಣದ ಎಲ್ಲಾ ಜಿಲ್ಲೆಗಳಲ್ಲಿ ಮತ್ತು ತಾಲ್ಲೂಕುಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲು ಮತ್ತು ಇದಕ್ಕೆ ಸ್ಪಂದಿಸಲು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಸಂಘ ಸಂಸ್ಥೆಗಳಿಗೆ ಜನಪರ, ಕನ್ನಡಪರ, ದಲಿತ, ಹಿಂದುಳಿದ, ಅಲ್ಪ ಸಂಖ್ಯಾತರ, ರೈತ ಕಾರ್ಮಿಕ ಯುವ ಮತ್ತು ವಿದ್ಯಾರ್ಥಿಪರ ಸಂಘಟನೆಗಳಿಗೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಮನವರಿಕೆ ಮಾಡುತ್ತದೆ.
 ಕಲ್ಯಾಣ ಕರ್ನಾಟಕದ ಬೀದರ ಸೇರಿದಂತೆ, ನಮ್ಮ ಭಾಗದ ಜಿಲ್ಲೆಗಳಿಗೆ ಹತ್ತಿರವಿರುವ ಹೈದ್ರಾಬಾದ ರಾಜ್ಯವನ್ನು ಬಿಟ್ಟು ಎಲ್ಲಾ ಕನ್ನಡಿಗರು ಒಂದಾಗಿ ವಿಶಾಲ ಮೈಸೂರುದಲ್ಲಿ ಸೇರಬೇಕೆಂದು ನಮ್ಮ ಪ್ರದೇಶದ ಏಕಿಕರಣ ಚಳುವಳಿಯ ನಾಯಕರಾದ ಆರ್.ವಿ.ಬಿಡಪ್, ಭೀಮಣ್ಣ ಖಂಡ್ರೆ, ರಾಮಚಂದ್ರ ವೀರಪ್ಪ, ಹಕಿಕತ್ತರಾವ ಚಿಟಗುಪ್‌ಕರ್, ಪುಂಡಲಿಕರಾವ ಜ್ಞಾನಮೊಟೆ, ಚಂದ್ರಶೇಖರ ಪಾಟೀಲ ಮಹಾಗಾಂವ, ಶರಣಗೌಡ ಇನಾಮದಾರ್, ಎಂ. ನಾಗಪ್ಪ, ಶಿವಮೂರ್ತಿ ಸ್ವಾಮಿ ಅಳವಂಡಿ, ಚರ್ಚಿಹಾಳಮಠ, ರಾಜಾ ವೆಂಕಟಪ್ಪ ನಾಯಕ, ಶಿವರಾಮ್ ಮೊಘಾ, ಮಹಮ್ಮದ ಅಲಿ ಸೇರಿದಂತೆ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಯ ನಾಯಕರು ಕನ್ನಡ ಮಾತನಾಡುವ ಜನರೆಲ್ಲಾ ಒಂದೇ ರಾಜ್ಯದಲ್ಲಿ ಇರಬೇಕೆಂದು ಫಜಲ ಅಲಿ ಆಯೋಗದ ಎದುರು ಯಾವುದೇ ಷರತ್ತು ಮಂಡಿಸದೆ ಅಖಂಡ ಕರ್ನಾಟಕ ರಚನೆಗೆ ಒತ್ತಾಯಿಸಿದ್ದಲ್ಲದೆ, ಏಕಿಕರಣಕ್ಕಾಗಿ ಹೋರಾಟ ಮಾಡಿದರು. ಭಾರತ ಸರಕಾರದ ಶಿಫಾರಸ್ಸಿನಂತೆ, ಹೈದ್ರಾಬಾದ ರಾಜ್ಯಕ್ಕೆ 1956 ರಲ್ಲಿಯೇ ಸಂವಿಧಾನದ 371ನೇ(ಜೆ) ಕಲಂ ಕೊಡಬೇಕೆಂಬ ನಿರ್ಣಯವಾದರೂ ಸಹ ನಾವು ಆ ಅವಕಾಶವನ್ನು ತಿರಸ್ಕರಿಸಿ ಕನ್ನಡಿಗರೆಲ್ಲಾ ಒಂದೇ ರಾಜ್ಯದಲ್ಲಿರಬೇಕೆಂಬ ಸ್ವಾಭಿಮಾನದಿಂದ ವಿಶಾಲ ಮೈಸೂರು ರಾಜ್ಯದಲ್ಲಿ ಸೇರಿದ್ದೇವು. ನಮ್ಮ ತ್ಯಾಗ ಬಲಿದಾನ ಅರ್ಥ ಮಾಡಿಕೊಳ್ಳದ ಕಲ್ಯಾಣ ವಿರೋಧಿ ಪಟ್ಟಭದ್ರ ಹಿತಾಸಕ್ತಿಯ ಹಸಿರು ಪ್ರತಿಷ್ಠಾನ ವೇದಿಕೆ ನಮ್ಮ ವಿರುದ್ಧ ನಡೆಸುತ್ತಿರುವ ಕುತಂತ್ರದ ಹೋರಾಟಕ್ಕೆ ನಾವು ಪ್ರತಿತಂತ್ರದ ಹೋರಾಟ ನಡೆಸುವುದು ಪ್ರಸ್ತುತ ಅತಿ ಅವಶ್ಯ ಮತ್ತು ಅನಿವಾರ್ಯವಾಗಿದೆ.
 1956ರಲ್ಲಿ ವಿಶಾಲ ಮೈಸೂರು ರಾಜ್ಯದಲ್ಲಿ ಸೇರಿದ ನಂತರ, ಪ್ರಸ್ತುತ 2024 ರಲ್ಲಿಯೂ ಸಹ ನಮ್ಮ ಪ್ರದೇಶ ನೀರಾವರಿ, ಕೈಗಾರಿಕೆ, ರಸ್ತೆ, ಸಾರಿಗೆ, ಶಿಕ್ಷಣ, ಉದ್ಯೋಗ, ವಾಣಿಜ್ಯ, ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿಯೂ ಸಹ ಅತ್ಯಂತ ಕೊನೆಯ ಸ್ಥಾನದಲ್ಲಿ ಇರುವ ಬಗ್ಗೆ ಸರಕಾರದ ಅಧಿಕೃತ ಅಂಕಿ ಅಂಶಗಳೇ ಹೇಳುತ್ತವೆ. ನಮ್ಮ ಜನಸಂಖ್ಯೆ ರಾಜ್ಯದಲ್ಲಿ ಶೇ.19% ರಷ್ಟು ಇದ್ದರೆ, ಸರಕಾರಿ ನೌಕರಿಗಳಲ್ಲಿ ನಮ್ಮ ಪ್ರತಿನಿಧಿತ್ವ ಕೇವಲ 9% ಪ್ರತಿಶತ ಮಾತ್ರ ಇದೆ. ಶೈಕ್ಷಣಿಕ ಕ್ಷೇತ್ರದಲ್ಲಿಯೂ ಸಹ ಬೇರೆ ಭಾಗಕ್ಕೆ ಹೋಲಿಸಿದರೆ, ನಾವು ಅತ್ಯಂತ ಕೊನೆಯ ಸ್ಥಾನದಲ್ಲಿ ಇದ್ದೇವೆ. 371ನೇ(ಜೆ) ಕಲಂ ಜಾರಿಯಾಗಿ ಇನ್ನೂ ಶಿಶು ಅವಸ್ಥೆಯಲ್ಲಿ ಇರುವಾಗಲೇ ಇದರ ವಿರುದ್ಧ 24 ಜಿಲ್ಲೆಗಳಲ್ಲಿ ಅಪಪ್ರಚಾರ ಮಾಡುತ್ತಾ ಸಂವಿಧಾನ ವಿರೋಧಿ, 371ನೇ(ಜೆ) ಕಲಂ ವಿರೋಧಿ, ಕಲ್ಯಾಣ ಕರ್ನಾಟಕ ಜನ ವಿರೋಧಿ, ಹೋರಾಟ ಮಾಡುತ್ತಿರುವ ಪಟ್ಟಭದ್ರ ಹಿತಾಸಕ್ತಿ ಸಂಘಟನೆಗೆ ರಾಜ್ಯ ಸರಕಾರ ತಕ್ಷಣ ನಿಷೇಧಿಸಬೇಕು. ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಗೆ ಕಾಲಮಿತಿಯ ವೈಜ್ಞಾನಿಕ ಕ್ರೀಯಾ ಯೋಜನೆಯನ್ನು ಹಮ್ಮಿಕೊಂಡು ಕಾಲಮಿತಿಯಲ್ಲಿ ಅಭಿವೃದ್ಧಿ ಮಾಡಲು ಸರಕಾರಕ್ಕೆ ಆಗ್ರಹಿಸುತ್ತೇವೆ. ಅದರಂತೆ ನಮ್ಮ ಕಲ್ಯಾಣ ಕರ್ನಾಟಕ ವಿರುದ್ಧ ನಡೆಸುತ್ತಿರುವ ಹೋರಾಟದ ವಿರುದ್ಧ ಬೀದರ ನಗರ ಮತ್ತು ಜಿಲ್ಲೆಯಲ್ಲಿ ಉಗ್ರ ಹೋರಾಟ ನಡೆಸಲು ಶಿಕ್ಷಣ ಸಂಸ್ಥೆಯ ಮುಖಂಡರಿಗೆ, ಸಂಘ ಸಂಸ್ಥೆಯ ಮತ್ತು ಸಂಘಟನೆಯ ಮುಖಂಡರಿಗೆ, ಭೇಟಿ ಮಾಡಿ ಆದಷ್ಟು ಶೀಘ್ರ ಬೀದರದಲ್ಲಿ ಬೃಹತ್ ಪ್ರಮಾಣದಲ್ಲಿ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಲಾಗುವುದು. ಅದರಂತೆ ಈ ವಿಷಯಕ್ಕೆ ಸಂಬAಧಿಸಿ ಬೀದರ ಜಿಲ್ಲೆಯ ಸಚಿವರಾದ ಈಶ್ವರ ಖಂಡ್ರೆ, ರಹೀಂಖಾನ್, ಅದರಂತೆ ಕಲಬುರಗಿಯ ಸಚಿವರುಗಳಾದ ಪ್ರಿಯಾಂಕ್ ಖರ್ಗೆ, ಡಾ. ಶರಣಪ್ರಕಾಶ ಪಾಟೀಲ, ಯಾದಗಿರಿನ ಶರಣಬಸಪ್ಪ ದರ್ಶನಾಪೂರ, ರಾಯಚೂರಿನ ಎನ್.ಎಸ್. ಭೋಸರಾಜು, ಕೊಪ್ಪಳ ಜಿಲ್ಲೆಯ ಶಿವರಾಜ ತಂಗಡಗಿ ಸೇರಿದಂತೆ, ಕಲ್ಯಾಣದ ಎಲ್ಲಾ ಶಾಸಕರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ನಮ್ಮ ಅಸ್ತಿತ್ವ ಮತ್ತು 371ನೇ(ಜೆ) ಕಲಮಿನ ರಕ್ಷಣೆಗೆ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಲು ಸಮಿತಿ ಆಗ್ರಹಿಸುತ್ತದೆ. ರಾಜ್ಯ ಸರಕಾರ, ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಮತ್ತು ಕಾಲಮಿತಿಯ ರಚನಾತ್ಮಕ ಪ್ರಗತಿಗೆ ಈ ಕೆಳಕಂಡ ಮಹತ್ವದ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಈಡೇರಿಸಲು ಈ ಮೂಲಕ ಒತ್ತಾಯಿಸಲಾಗುತ್ತದೆ.
1. 371ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಮತ್ತು ಕಲ್ಯಾಣ ಕರ್ನಾಟಕದ ವಿಶೇಷ ಪ್ರಗತಿಗೆ ಪ್ರತ್ಯೇಕ ಸಚಿವಾಲಯ ರಚನೆ ಮಾಡಬೇಕು.
2. 371ನೇ(ಜೆ) ಕಲಂ ನಿಯಮಾವಳಿಯಂತೆ ನೇಮಕಾತಿಗಳಲ್ಲಿ ಕೃಪಾಂಕ ನೀಡಬೇಕು, ವಯೋ ವಿನಾಯಿತಿ ನೀಡಬೇಕು.
3. 371ನೇ(ಜೆ) ಕಲಂ ಅಡಿ ಬರುವ ವ್ಯಾಜ್ಯಗಳ ನಿವಾರಣೆಗೆ 371ನೇ(ಜೆ) ಕಲಂ ನಿಯಮದಂತೆ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ಪ್ರತ್ಯೇಕ ಟ್ರಿಬ್ಯೂನಲ್ ರಚನೆ ಮಾಡಬೇಕು.
4. ರಾಜ್ಯ ಸರಕಾರದ ಎಲ್ಲಾ ನೇಮಕಾತಿಗಳಿಗೆ ಮೊದಲು ಮೆರಿಟ್ ಮಾನದಂಡದ ಪಟ್ಟಿ ಪ್ರಕಟಿಸಿ ನಂತರ ನಮ್ಮ ಮೀಸಲಾತಿ ಪಟ್ಟಿ ಪ್ರಕಟಿಸಬೇಕು. (ಪ.ಜಾತಿ/ಪ.ಪಂಗಡ ಮಾನದಂಡ ಅನುಸರಿಸಬೇಕು.)
5. ಈಗಾಗಲೇ ಕಲ್ಯಾಣ ಕರ್ನಾಟಕದ ಮತ್ತು ರಾಜ್ಯದ ಇತರೆ ಭಾಗದ ನೂರಾರು ಅರ್ಹ ಅಭ್ಯರ್ಥಿಗಳು ಆಯಾ ಇಲಾಖೆಗಳಲ್ಲಿ ಆಯ್ಕೆಯಾಗಿದ್ದಾರೆ. ಅವರಿಗೆ ವಿನಾಕಾರಣ ವಿಳಂಬ ಮಾಡಿ ಆದೇಶ ಪತ್ರ ನೀಡುತ್ತಿಲ್ಲ. ತಕ್ಷಣ ಸೇವಾ ಆದೇಶ ಪತ್ರ ನೀಡಬೇಕು.
6. ಖಾಲಿ ಇರುವ ಎಲ್ಲಾ ಹುದ್ದೆಗಳು ಕಾಲಮಿತಿಯಲ್ಲಿ ಭರ್ತಿ ಮಾಡಬೇಕು.
7. 1956 ರಿಂದ ಇಲ್ಲಿಯವರೆಗೆ ನೇಮಕಾತಿಗಳಲ್ಲಿ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವಾಗಿರುವದನ್ನು ಸರಿಪಡಿಸಲು ಮತ್ತು ಕಲ್ಯಾಣ ಕರ್ನಾಟಕಕ್ಕೆ ನ್ಯಾಯ ಒದಗಿಸಲು ಎಲ್ಲಾ ಇಲಾಖೆಗಳ ಬ್ಯಾಕಲಾಗ್ ಹುದ್ದೆಗಳು ಭರ್ತಿ ಮಾಡಬೇಕು.
8. ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಗೆ ಮತ್ತು 371ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಕಲ್ಯಾಣ ಕರ್ನಾಟಕದ ಪರಿಣಿತರ, ತಜ್ಞ ಹೋರಾಟಗಾರರ ಸಲಹಾ ಸಮಿತಿ ರಚಿಸಬೇಕು.
Ghantepatrike kannada daily news Paper

Leave a Reply

error: Content is protected !!