ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದ ಸಾಗರ್ ಖಂಡ್ರೆ ಅವರು ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಕ್ಷೇತ್ರದಲ್ಲಿ ಹೊಸ ದಾಖಲೆ ಬರೆದಿದ್ದಾರೆ.
2009 ರಿಂದ ಬೀದರ್ ಲೋಕಸಭಾ ಸಾಮಾನ್ಯ ಕ್ಷೇತ್ರವಾಗಿ ಬದಲಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮಾಜಿ ಸಿಎಂ ಧರ್ಮಸಿಂಗ್ ಜಯ ಗಳಿಸಿದ್ದರು. ಬಳಿಕ 2014 ಹಾಗೂ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಭಗವಂತ ಖೂಬಾ ಎನ್.ಧರ್ಮಸಿಂಗ್ ಹಾಗೂ ಈಶ್ವರ ಖಂಡ್ರೆ ಅವರನ್ನು ಕ್ರಮವಾಗಿ ಸೋಲಿಸಿ ಎರಡು ಬಾರಿ ಮೋದಿ ಅಲೆಯಲ್ಲಿ ಗೆದ್ದು ಬೀಗಿದರು.
ಸಾಗರ್ ಖಂಡ್ರೆ ಅವರು 6,65,162 ಮತ ಪಡೆದರೆ, ಭಗವಂತ ಖೂಬಾ ಅವರು 5,35,766 ಮತ ಗಳಿಸಿದ್ದಾರೆ. 1,29,396 ಅಂತರದಿಂದ ಸಾಗರ್ ಖಂಡ್ರೆ ಗೆಲುವಿನ ನಗೆ ಬೀರಿದ್ದಾರೆ.
ತಂದೆಯ ಸೋಲಿನ ಸೇಡು ತೀರಿಸಿಕೊಂಡ ಮಗ :
2019ರ ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಚಿವ ಈಶ್ವರ ಖಂಡ್ರೆ ಅವರು ಸಂಸದ ಭಗವಂತ ಖೂಬಾ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಆದರೆ, ಈಶ್ವರ ಖಂಡ್ರೆಯವರು ಸಂಸದ ಭಗವಂತ ಖೂಬಾ ವಿರುದ್ಧ ಭಾರಿ ಅಂತರದಿಂದ ಪರಾಭವಗೊಂಡಿದ್ದರು. ಅದೇ ಸೋಲನ್ನು ಸವಾಲಾಗಿ ಸ್ವೀಕರಿಸಿದ್ದ ಈಶ್ವರ ಖಂಡ್ರೆ ಹ್ಯಾಟ್ರಿಕ್ ಗೆಲುವಿನ ಹುಮ್ಮಸ್ಸಿನಲ್ಲಿದ್ದ ಭಗವಂತ ಖೂಬಾ ಅವರನ್ನು ಹೇಗಾದರೂ ಮಣಿಸಬೇಕೆಂದು ಪಟ್ಟು ಹಿಡಿದು ಮಗ ಸಾಗರ್ ಖಂಡ್ರೆ ಅವರನ್ನು ಕಾಂಗ್ರೆಸ್ ಟಿಕೆಟ್ ಕೊಡಿಸಿ ಅದೃಷ್ಟ ಪರೀಕ್ಷೆಗೆ ಇಳಿಸಿದ್ದರು. ಇದೀಗ ನಿರೀಕ್ಷೆಯಂತೆ ಮಗ ಸಾಗರ್ ಖಂಡ್ರೆ ಭಾರಿ ಅಂತರದಿಂದ ಗೆಲುವು ಸಾಧಿಸಿ ತಂದೆಯ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ.
ಹಳೆ ದಾಖಲೆ ಅಳಿಸಿದ ಸಾಗರ್ ಖಂಡ್ರೆ :
ಹೊಸ ಚಿಗುರು, ಹಳೆ ಬೇರು ಎಂಬಂತೆ ಹಿರಿಯ, ಕಿರಿಯ ವಯಸ್ಸಿನ ಸಂಸದರು ಬೀದರ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಸಂಸತ್ತು ಪ್ರವೇಶಿಸಿದ್ದು ಸೇರಿದಂತೆ ಲೋಕಸಭಾ ಕ್ಷೇತ್ರ ಹಲವು ಮೊದಲುಗಳಿಗೆ ಸಾಕ್ಷಿಯಾಗುವ ಮೂಲಕ ಹೊಸ ದಾಖಲೆಗೆ ಸಾಕ್ಷಿಯಾಗಿದೆ.
ಎಲ್‌ಎಲ್‌ಬಿ ಪಧವಿಧರರಾಗಿರುವ ಸಾಗರ್ ಖಂಡ್ರೆಯವರು ಮೊದಲ ಬಾರಿ ಚುನಾವಣೆ ಎದುರಿಸಿ ಯಶಸ್ಸು ಕಂಡಿದ್ದಾರೆ. 1980ರಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಔರಾದ ತಾಲೂಕು ಮೂಲದ 28 ವರ್ಷದ ನರಸಿಂಗ್‌ರಾವ್ ಹುಲ್ಲಾ ಸೂರ್ಯವಂಶಿ ಅವರು ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲೇ ಸಂಸತ್ತಿಗೆ ಆಯ್ಕೆಯಾಗಿದ್ದರು. ಸಂಸದರಾಗಿ ಆಯ್ಕೆಯಾದ ನರಸಿಂಗ್‌ರಾವ್ ಸೂರ್ಯವಂಶಿ ಅವರು ಕ್ಷೇತ್ರದ ಕಿರಿಯ ಸಂಸದ ಎಂಬ ಹೊಸ ದಾಖಲೆ ಸೃಷ್ಟಿಸಿದ್ದರು. ಪ್ರಸಕ್ತ ಲೋಕಸಭೆಗೆ ನಡೆದ ಚುನಾವಣೆ ಕಣದಲ್ಲಿದ್ದು, ಗೆದ್ದು ಬೀಗಿದ ಸಾಗರ್ ಖಂಡ್ರೆ ದೇಶದ ಕಿರಿಯ ಸಂಸದ ಎಂಬ ಹೆಗ್ಗಳಿಕೆಯೊಂದಿಗೆ ಕ್ಷೇತ್ರದ ಹಿಂದಿನ ದಾಖಲೆ ಅಳಿಸಿ ಹಾಕಿದ್ದಾರೆ.
ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಓಡಿಸ್ಸಾ ರಾಜ್ಯದ ಕೆಂದುಜಹಾರ್ ಕ್ಷೇತ್ರದಿಂದ (ಬಿಜೆಡಿ) ಪಕ್ಷದಿಂದ ಸ್ಪರ್ಧಿಸಿದ ಚಂದ್ರಾಣಿ ಮುರ್ಮು ಎಂಬ 25 ವರ್ಷದ ಯುವತಿ ಜಯ ಸಾಧಿಸಿ ದೇಶದ ಅತ್ಯಂತ ಕಿರಿಯ ಸಂಸದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಇಲ್ಲಿ ಸ್ಮರಿಸಬಹುದು.
ರಾಜ್ಯ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ಭಾಲ್ಕಿಯ ಖಂಡ್ರೆ ಕುಟುಂಬ ಕಳೆದ ಬಾರಿ ರಾಷ್ಟ್ರ ರಾಜಕಾರಣ ಪ್ರವೇಶಿಸಲು ಲೋಕಸಭಾ ಅಖಾಡಕ್ಕೆ ಇಳಿದರೂ ಫಲಿಸಲಿಲ್ಲ. ಖಂಡ್ರೆ ಪರಿವಾರದ ಮೂರನೇ ತಲೆಮಾರು ಸಾಗರ್ ಖಂಡ್ರೆಯವರು ಪ್ರಸಕ್ತ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾಗುವ ಮೂಲಕ ಖಂಡ್ರೆ ಕುಟುಂಬ ಮೊದಲ ಬಾರಿಗೆ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸಿದಂತಾಗಿದೆ.