“ಹವಾಮಾನ ವೈಪರಿತ್ಯ ನಿರ್ವಹಣಾ ತಾಂತ್ರಿಕತೆಗಳು ಹಾಗೂ ಕೃಷಿ” ಕುರಿತು ತರಬೇತಿ
ಬೀದರ ಜಿಲ್ಲೆಯ ಜನವಾಡ ಹತ್ತಿರದ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದಲ್ಲಿ ರಿಲಾಯನ್ಸ್ ಹಾಗೂ ಪ್ರವರ್ಧಾ ಸಂಸ್ಥೆಗಳ ಸಹಯೋಗದೊಂದಿಗೆ ದಿನಾಂಕ 12-07-2024 ರಂದು ಶುಕ್ರವಾರ ಮುಂಜಾನೆ 10.30 ಗಂಟೆಗೆ “ಹವಾಮಾನ ವೈಪರಿತ್ಯ ನಿರ್ವಹಣಾ ತಾಂತ್ರಿಕತೆಗಳು” ಕುರಿತು ಒಂದು ದಿನದ ತರಬೇತಿಯನ್ನು ಆಯೋಜಿಸಲಾಗಿತ್ತು. ಸಸಿಗೆ ನೀರೆರೆಯುವ ಮೂಲಕ ತರಬೇತಿಯನ್ನು ಉದ್ಘಾಟಿಸಿ ಪ್ರವರ್ಧಾ ಸಂಸ್ಥೆ ಬೀದರನ ನಿರ್ದೇಶಕರಾದ ಶ್ರೀ. ಚಂದ್ರಕಾಂತ ಪಾಟೀಲ ರವರು ಮಾತನಾಡಿ ರೈತರು ಬದಲಾಗಿತ್ತಿರುವ ಹವಾಮಾನಕ್ಕೆ ತಕ್ಕಂತೆ ಸೂಕ್ತ ಬೇಸಾಯ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ರೈತರಿಗೆ ಕರೆ ನೀಡಿದರು. ಈ ನಿಟ್ಟಿನಲ್ಲಿ ಪ್ರವರ್ಧಾ ಹಾಗೂ ರಿಲಾಯನ್ಸ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, ಸದರಿ ಕಾರ್ಯಕ್ರಮಕ್ಕೆ ಕೃಷಿ ವಿಜ್ಞಾನ ಕೇಂದ್ರವು ತಾಂತ್ರಿಕ ಮಾಹಿತಿ ಮತ್ತು ತರಬೇತಿಗಳನ್ನು ನೀಡುತ್ತಿರುವ ಕಾರ್ಯವು ಶ್ಲಾಘನೀಯ ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಸುನೀಲಕುಮಾರ ಎನ್.ಎಮ್ ರವರು ತಮ್ಮ ಅಧ್ಯಕ್ಷಿಯ ನುಡಿಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಅನೇಕ ಮುಂಚೂಣಿ ಪ್ರಾತ್ಯಕ್ಷಿಕೆಗಳನ್ನು ಕೈಗೊಳ್ಳತ್ತಿರುವ ಕುರಿತು ವಿವರಿಸಿದರು ಜೊತೆಗೆ ಅವಕಾಶ ಹೊಂದಿರುವ ರೈತರು ಅರಣ್ಯ ಕೃಷಿಯನ್ನು ಕೈಗೊಳ್ಳುವಂತೆ ಕರೆನೀಡಿದರು. ತರಬೇತಿಯ ಆರಂಭದಲ್ಲಿ ಡಾ.ಬಸವರಾಜ ಬಿರಾದಾರ, ಹವಾಮಾನ ತಜ್ಞರು, ಕೃಷಿ ಸಂಶೋಧನಾ ಕೇಂದ್ರ, ಬೀದರ ರವರು ಪ್ರಸಕ್ತ ಸಾಲಿನ ಮಳೆ ವಿವರ ನೀಡಿದರು. ನಂತರದಲ್ಲಿ ಡಾ. ವಿಜಯ ಮಹಾಂತೇಶ ರವರು ದ್ರವರೂಪದ ರಸಗೊಬ್ಬರ ಬಳಕೆಯ ಕುರಿತು ವಿವರಿಸಿದರು. ಮಳೆಯಾಶ್ರಿತ ಹಣ್ಣು ಮರಗಳ ಬೇಸಾಯ ಕುರಿತು ತೋಟಗಾರಿಕೆ ತಜ್ಞರಾದ ಡಾ. ನಿಂಗದಳ್ಳಿ ಮಲ್ಲಿಕಾರ್ಜುನ ಮಾಹಿತಿ ನೀಡಿದರು. ಬೀಜ ವಿಜ್ಞಾನಿಗಳಾದ ಡಾ. ಜ್ಞಾನದೇವ ಬುಳ್ಳಾ ರವರು ಪ್ರಮುಖ ಬೆಳೆಗಳಲ್ಲಿ ಇಳುವರಿ ವೃದ್ಧಿಸುವ ತಾಂತ್ರಿಕತೆಗಳನ್ನು ವಿವರಿಸಿದರು. ನಂತರದಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆ ಕುರಿತು ಡಾ. ಮಾಜೀದ ಪಾಶಾ, ಕೃಷಿ ಡಿಪ್ಲೋಮಾ ಕಾಲೇಜ, ಬೀದರ ರವರು ಉಪನ್ಯಾಸ ನೀಡಿದರು. ಇದೆ ಸಂದರ್ಭದಲ್ಲಿ ಆದಾಯ ದ್ವಿಗುಣಗೊಳಿಸಿದ ರೈತರಿಗೂ ಕೂಡಾ ಸನ್ಮಾನಿಸಲಾಯಿತು. ಕೊನೆಯಲ್ಲಿ ತರಬೇತಿಯಲ್ಲಿ ಭಾಗವಹಿಸಿದ ರೈತರಿಗೆ ಕೃಷಿ ವಿಜ್ಞಾನ ಕೇಂದ್ರದ ವಿವಿಧ ಪ್ರಾತ್ಯಕ್ಷಿಕೆ ತಾಕುಗಳಿಗೆ ಭೇಟಿ ಮಾಡಿಸಲಾಯಿತು ಹಾಗೂ ಬೆಳೆಗಲ್ಲಿ ಬರುತ್ತಿರುವ ವಿವಿಧ ರೋಗ ಹಾಗೂ ಕೀಟಗಳ ಕುರಿತು ಸವಿವರವಾದ ಮಾಹಿತಿಯನ್ನು ನೀಡಲಾಯಿತು.