ಬೀದರ್

ಸೆ.19ರಂದು ಬೀದರ್‍ನಲ್ಲಿ ಚಾಮಯ್ಯ s/o ರಾಮಾಚಾರಿ ಚಲನಚಿತ್ರ ರಿಲಿಸ್: ಡಾ.ರಾಧಾಕೃಷ್ಣ ಪಲ್ಲಕ್ಕಿ

ಬೀದರ್: ಸೆಪ್ಟೆಂಬರ್ 19ರಂದು ಪ್ರ ಪ್ರಥಮವಾಗಿ ಬೀದರ್‍ನಲ್ಲಿಯೇ ಚಾಮಯ್ಯ s/o ರಾಮಾಚಾರಿ ಚಲನಚಿತ್ರ ಬಿಡುಗಡೆ ಗೊಳಿಸಲಾಗುವುದೆಂದು ಚಲನಚಿತ್ರ ನಿರ್ದೇಶಕರಾದ ಡಾ.ರಾಧಾಕೃಷ್ಣ ಪಲ್ಲಕಿ ನುಡಿದರು.
ಸೋಮವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಸೆಪ್ಟೆಂಬರ್ 18ರಂದು ಸಾಹಸ ಸಿಂಹ ಹಾಗೂ ವಿಜಯ ಭಾರ್ಗವ ವಿಷ್ಣುವರ್ಧನ್ ಅವರ ಜನ್ಮದಿನಾಚರಣೆ ಇರುವ ಹಿನ್ನೆಲೆಯಲ್ಲಿ ಮರುದಿನ ಅಂದರೆ ಸೆಪ್ಟೆಂಬರ್ 19ರಂದು ಬೀದರ್‍ನಲ್ಲಿ ಮೊದಲನೆಯದಾಗಿ ಬಿಡುಗಡೆ ಮಾಡಲಾಗುವುದು. 45 ವರ್ಷಗಳ ಹಿಂದೆ ವಿಷ್ಣುವರ್ಧನ್ ಅವರಿಗೆ ಬೀದರ್‍ನ ಗುರುದ್ವಾರದಲ್ಲಿ ಕಡಗ ತೊಡಿಸಿ ಗೌರವಿಸಲಾಗಿತ್ತು. ಇದರ ಸವಿನೆನಪಿಗಾಗಿ ಅಣ್ಣ ಬಸವಣ್ಣನವರ ಕರ್ಮಭೂಮಿಯಾಗಿರುವ ಬೀದರ್‍ನಿಂದಲೇ ಈ ಚಿತ್ರದ ಮೂಲಕ ರಾಜ್ಯದ ಮೂರು ಕೋಟಿ ಯುವಜನರಿಗೆ ಹೊಸ ಸಂದೇಶ ರವಾನೆಯಾಗಲಿದೆ ಎಂದರು.
2022 ನವೆಂಬರ್‍ನಲ್ಲಿ ಈ ಚಿತ್ರ ನಿರ್ಮಾಣಕ್ಕೆ ಮೂಹುರ್ತ ನಿಗದಿಯಾಗಿತ್ತು. ಕೋಲಾರದ ಕೊನೆಯ ಕಾಲಜ್ಞಾನಿ ಕೈವಾರ ತಾತಯ್ಯ ಚಲನಚಿತ್ರ, ದೇವನಹಳ್ಳಿ ಸೇರಿದಂತೆ ಇತರೆ ಚಿತ್ರಗಳನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರ ಜೀವನಾಧಾರಿತ ಚಾಮಯ್ಯ s/o ರಾಮಾಚಾರಿ ಚಿತ್ರ ಬರೆಯಲು ಮುಂದಾದಾಗ ಅದಕ್ಕೆ ವಿಷ್ಣುವರ್ಧನ್ ಅವರು ಅನುಮತಿ ಕೊಟ್ಟ ನಂತರ ಅದನ್ನು ಮುಂದುವರೆಸಿದಾಗಲೇ ವಿಜಯ ಭಾರ್ಗವ ವಿಷ್ಣುವರ್ಧನ್ ಅವರು ತೀರಿಹೋದ ಬಳಿಕ ಅದನ್ನು ಮತ್ತೆ ಮುಂದುವರೆಸಲಾಯಿತು. ಈಗಾಗಲೇ ಚಿತ್ರದ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಬಿಡುಗಡೆಗೆ ಸಿದ್ದವಾಗಿದೆ ಎಂದರು.
ಚಿತ್ರದುರ್ಗದಲ್ಲಿ 2022ರಲ್ಲಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಸೇರಿದ ಸಹಸ್ರಾರು ಜನರ ಮಧ್ಯ ಈ ಚಿತ್ರಿಕರಣ ನಡೆಯಿತು. ಸುಮಾರು 66 ಜನ ಕಲಾವಿದರನ್ನೊಳಗೊಂಡು ಈ ಚಿತ್ರ ನಿರ್ಮಾಣವಾಗಿದೆ. ಇಲ್ಲಿಯ ವರೆಗೆ ಸುಮಾರು 2 ಕೋಟಿ ರುಪಾಯಿ ಖರ್ಚಾಗಿರುತ್ತದೆ. ಭಾರತ ಯುವಕರ ದೇಶ, ಹಾಗಾಗಿ ಈ ಚಿತ್ರದ ಮೂಲಕ ಯುವಜನರಿಗೆ ಸಂದೇಶ ನೀಡಿರುವ ಈ ಚಲನಚಿತ್ರವನ್ನು ನೋಡಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಡಾ.ಪಲ್ಲಕ್ಕಿ ಮನವಿ ಮಾಡಿದರು.
ಚಿತ್ರನಟ ಜಯಶ್ರೀ ರಾಜ್ ಮಾತನಾಡಿ, ನಾನು ವಿಷ್ಣುವರ್ಧನ್ ಅವರ ಪಕ್ಕಾ ಅಭಿಮಾನಿ. ಮೂಲತಃ ನಾನು ರಂಗಭೂಮಿ ನಾಟಕ ಕಲಾವಿದ. ಅನೇಕ ನಾಟಕಗಳಲ್ಲಿ ಅಭಿನಯಿಸಿರುವೆ. ವಿಷ್ಣುವರ್ಧನ್ ಅವರಂತೆ ನಾನು ಬೆಳೆಯಬೇಕು, ಜ್ಯುನಿಯರ್ ವಿಷ್ಣುವರ್ಧನ್ ಆಗಬೇಕೆಂದು ಸಾಕಷ್ಟು ಆಸೆ ಇಟ್ಟುಕೊಂಡಿದ್ದೆ. ಅದಕ್ಕೆ ಅಭಿಮಾನಿ ದೇವರು ನನಗೆ ಅವಕಾಶ ನೀಡಿದರ ಫಲವಾಗಿ ಅವರ ಜೀವನಧಾರಿತ ಚಿತ್ರದಲ್ಲಿ ನಟಿಸಬೇಕೆಂದಾಗ ಡಾ.ಪಲ್ಲಕಿ ಅವರು ಅವಕಾಶ ನೀಡಿದ್ದಾರೆ. ಅವರಿಗೆ ಧನ್ಯವಾದಗಳು ಎಂದರು.
ನಟಿ ರಾಜೂವೇಣಿ ಮಾತನಾಡಿ, ನಾನು ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ. ನನ್ನೂರಿನಲ್ಲಿ ಅವರು ಅಭಿನಯಿಸಿದ ಯಜಮಾನ ಚಿತ್ರ ನೋಡಲು ಹೋದಾಗ ಟಿಕೇಟ್ ಸಿಗದೇ ನಿರಶಳಾಗಿ ಆತ್ಮಹತ್ಯೆಗೆ ಮುಂದಾಗಿದ್ದೆ. ನಮ್ಮ ತಾಯಿ ಧೈರ್ಯ ತುಂಬಿ ವಿಷ್ಣುವರ್ಧನ್ ಅವರನ್ನು ಕಾಣಲು ಬೆಂಗಳೂರಿಗೆ ಹೋಗಲು ಅನುಮತಿ ನೀಡಿದರು. ಹಲವು ದಾರಾವಾಹಿಗಳಲ್ಲಿ ನಟಿಸುವ ಸೌಭಾಗ್ಯ ಒದಗಿ ಬಂತು. ಒಂದು ಬಾರಿ ಅವರೊಂದಿಗೆ ನೃತ್ಯ ಮಾಡುವ ಸೌಭಾಗ್ಯ ಒದಗಿ ಬಂದಿತ್ತು. ಮತ್ತೊಂದು ಚಿತ್ರದಲ್ಲಿ ಅವರ ಹೆಂಡತಿಯಾಗಿ ನಟಿಸಿದ್ದೆ. ಹಳ್ಳಿ ಹುಡುಗಿಯಿಂದ ನಟಿಯಾಗಿ ಹೊರ ಹೊಮ್ಮಲು ವಿಷ್ಣುವರ್ಧನ್ ಅವರು ಕೊಟ್ಟ ಅವಕಾಶಕ್ಕೆ ಸದಾ ಚಿರರುಣಿಯಾಗಿರುವುದಾಗಿ ಹೇಳಿದರು. ಚಲನಚಿತ್ರ ನಿರ್ಮಾಪಕ ವಿ.ಗೋವಿಂದರಾಜು ಮಾತನಾಡಿದರು.
ಇದೇ ವೇಳೆ 45 ವರ್ಷಗಳ ಕೆಳಗೆ ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ಬೀದರ್ ಗುರುದ್ವಾರಾದಿಂದ ನೀಡಿದ ಕಡಗವನ್ನು ಚಲನಚಿತ್ರ ನಟ ವಿಷ್ಣುಕಾಂತ ಅವರಿಗೆ ಹಸ್ತಾಂತರಿಸಲಾಯಿತು.

Ghantepatrike kannada daily news Paper

Leave a Reply

error: Content is protected !!