ಸೂಪ್ತ ಪ್ರತಿಭೆ ಹೊರಹಾಕಲು ಎನ್‍ಎಸ್‍ಎಸ್ ಶಿಬಿರಗಳು ಪ್ರೇರಣೆ ನೀಡುತ್ತವೆ – ಬಿ.ಜಿ ಶೆಟಕಾರ
ಬೀದರ: ಮಕ್ಕಳಲ್ಲಿ ಪ್ರತಿಭೆಗಳು ಅಡಗಿರುತ್ತವೆ. ಅವುಗಳನ್ನು ಹೊರಹಾಕಲು ಎನ್‍ಎಸ್‍ಎಸ್ ಶಿಬಿರಗಳು ಪ್ರೇರಣೆ ನಿಡುತ್ತವೆ. ಈ ಶಿಬಿರ ಮಕ್ಕಳಿಗೆ ಸಾಹಕ ಕಾರ್ಯ, ನಾಯಕತ್ವದ ಗುಣಗಳು, ಭಾಷಣ ಕಲೆ, ವೇದಿಕೆಯ ಧೈರ್ಯ, ಶ್ರಮದಾನದ ಕುರಿತು ಕಲಿಸಿಕೊಡುತ್ತವೆ. ಪರಸ್ಪರ ಸಮಾಜದಲ್ಲಿ ಪ್ರೀತಿ ಮತ್ತು ಬಾಂಧವ್ಯದಿಂದ ಹೇಗೆ ಬದುಕಬೇಕು? ಸಮಯಪ್ರಜ್ಞೆ, ಸಾಮೂಹಿಕ ನಾಯಕತ್ವದ ಗುಣಗಳನ್ನು ಕಲಿಸುತ್ತವೆ ಅಂಕ ಗಳಿಸುವುದರ ಜೊತೆಗೆ ಸಂಸ್ಕಾರದಿಂದ ಹೇಗೆ ಬದುಕಬೇಕೆಂದು ಇಂತಹ ಶಿಬಿರಗಳು ತಿಳಿಸಿಕೊಡುತ್ತವೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ.ರಾ.ಶಿ. ಸಂಸ್ಥೆಯ ಉಪಾಧ್ಯಕ್ಷ ಬಿಜಿ ಶೆಟಕಾರ ತಿಳಿಸಿದರು.
ಬೀದರ ತಾಲೂಕಿನ ಓಡವಾಡಾ ಅಗ್ರಹಾರ ಗ್ರಾಮದ ಅನಂತಶಯನ ಮಂದಿರದಲ್ಲಿ ಕರ್ನಾಟಕ ಕಾಲೇಜಿನ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಜೂನ್ 7 ರಿಂದ 13ರವರೆಗೆ 7 ದಿವಸಗಳ ಕಾಲ ಆಯೋಜಿಸಿದ ಶಿಬಿರ ಗುರುವಾರ ಮುಕ್ತಾಯಗೊಂಡಿತು. ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕೆಲವು ಬಾರಿ ಶಕ್ತಿಯಿಂದ ಮಾಡುವ ಕಾರ್ಯ ಯುಕ್ತಿಯಿಂದಲೂ ಸಾಹಸ ಕಾರ್ಯಗಳನ್ನು ಮಾಡಬೇಕಾಗುತ್ತದೆ. ಅನಂತಶಯನ ವೆಂಕಟೇಶ್ವರ ಮಂದಿರದ ಹೊರಗಡೆ ಇರುವ ದೊಡ್ಡ ದೊಡ್ಡ ವಿಗ್ರಹಗಳನ್ನು ಧಕ್ಕೆ ಮಾಡದಂತೆ ಯುಕ್ತಿಯಿಂದ ಮಂದಿರದೊಳಗೆ ವಿದ್ಯಾರ್ಥಿಗಳು ಇಟ್ಟಿದ್ದು ಶ್ಲಾಘನೀಯ ಕಾರ್ಯವಾಗಿದೆ. ಶಿಬಿರದ ನಂತರವೂ ವಿದ್ಯಾರ್ಥಿಗಳು ತಲಾ ಒಂದೊಂದು ಗಿಡಗಳನ್ನು ಮನೆಯೊಳಗೆ ನೆಡಬೇಕು. ನೆರೆಯವರಿಗೂ ಜಾಗೃತಿ ಮೂಡಿಸಬೇಕೆಂದು ಶೆಟಕಾರ ತಿಳಿಸಿದರು.
ಕರ್ನಾಟಕ ಕಾಲೇಜಿನ ಪ್ರಾಚಾರ್ಯರಾದ ಡಾ. ಮಲ್ಲಿಕಾರ್ಜುನ ಹಂಗರಗಿ ಮಾತನಾಡುತ್ತ ಸಮಾಜಮುಖಿ ಜೀವನಕ್ಕೆ ಎನ್‍ಎಸ್‍ಎಸ್ ಶಿಬಿರಗಳು ಸಹಕಾರಿಯಾಗುತ್ತವೆ. ಬದುಕು ಬದುಕಲು ಬಿಡು ಎನ್ನುವ ತತ್ವ, ನಾವು ನಮ್ಮವರು ಎನ್ನುವ ಭಾವ, ಆತ್ಮಸ್ಥೈರ್ಯ ಮತ್ತು ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ಸಂದೇಶ ಶಿಬಿರ ನೀಡುತ್ತದೆ. ಸಮಾಜ ಮತ್ತು ದೇಶ ಕಟ್ಟುವ ತರಬೇತಿ ಇಂತಹ ಶಿಬಿರಗಳಲ್ಲಿ ಸಿಗುತ್ತವೆ ಎಂದು ಪ್ರತಿಪಾದಿಸಿದರು.
ಕರ್ನಾಟಕ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಏಳು ದಿವಸಗಳ ಶಿಬಿರದ ಅನುಭವವನ್ನು ಮಾಧ್ಯಮದ ಮುಂದೆ ಹಂಚಿಕೊಳ್ಳುತ್ತ ಪ್ರತಿದಿನ ಒಬ್ಬೊಬ್ಬ ವಿಷಯ ತಜ್ಞರನ್ನು ಕರೆಸಿ ಉತ್ತಮ ಉಪನ್ಯಾಸ ಕೊಡಿಸಿ ಹಲವು ವಿಷಯಗಳ ಕುರಿತು ತಿಳಿದುಕೊಳ್ಳುವಂತೆ ಮಾಡಿದ್ದಾರೆ. ಹೀಗಾಗಿ ಕಾಲೇಜಿನ ಪದಾಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಧನ್ಯವಾದ ಸಲ್ಲಿಸುತ್ತೇವೆ ಎಂದರು. ಇದೇ ವೇಳೆ ಸಮಾರೋಪ ಸಮಾರಂಭದಲ್ಲಿ ಹಲವು ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಬಹುಮಾನ ನೀಡಿ ಗೌರವಿಸಲಾಯಿತು. ಶಿಬಿರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ತಂಡಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಕೊನೆಯಲ್ಲಿ ಎನ್‍ಎಸ್‍ಎಸ್ ಶಿಬಿರದ ಪ್ರತಿಜ್ಞಾ ವಿಧಿ ಬೋಧಿಸಿ, ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಸಮಾರಂಭದಲ್ಲಿ ಎನ್‍ಎಸ್‍ಎಸ್ ಅಧಿಕಾರಿ ಡಾ.ದಿಲೀಪ ಮಾಲೆ, ಸೋಮನಾಥ ಬಿರಾದಾರ, ಸಂಸ್ಥೆಯ ಆಡಳಿತಾಧಿಕಾರಿ ಎಚ್.ಎಸ್.ಪಾಟೀಲ, ಡಾ.ಮಾದಯ್ಯ ಸ್ವಾಮಿ, ಡಾ.ಸೋಮನಾಥ ಮುದ್ದಾ, ಪರಮೇಶ್ವರ ಡಿ., ಆನಿ ಕ್ರಿಸ್ಟಿನಾ, ಶೃತಿ ಸ್ವಾಮಿ, ಚಂದ್ರಿಕಾ ದೇಶಮುಖ, ಡಾ.ಶಶಿಧರ ಪಾಟೀಲ, ಡಾ.ರಾಜಮೋಹನ ಪರದೇಶಿ, ಗೀತಾ ರಾಗಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.