ಬೀದರ್

ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆಗೈದ ಡಾ.ಚನ್ನಬಸವ ಪಟ್ಟದ್ದೇವರು :ಸೂರ್ಯಕಾಂತ ಬಿರಾದಾರ್

ಭಾಲ್ಕಿ :ಏ.12: ಗಡಿಭಾಗದಲ್ಲಿ ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರು 109 ವರ್ಷಗಳ ಕಾಲ ಗಂಧದಂತೆ ಬದುಕು ಸವೆದು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆಗೈದಿದ್ದಾರೆ ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ್ ಹೇಳಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ವಚನ ಜಾತ್ರೆ-2025 ಮತ್ತು ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರ 26ನೆಯ ಸ್ಮರಣೋತ್ಸವ ನಿಮಿತ್ತ ಗುರುವಾರ ಆಯೋಜಿಸಿದ್ದ ಶರಣರು ಕಂಡ ಬಸವಣ್ಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರ ಅಪ್ಪಟ ಅನುಯಾಯಿಯಾಗಿ ಬಸವತತ್ವ, ವಚನ ಸಾಹಿತ್ಯ ಜನಮಾನಸಕ್ಕೆ ತಲುಪಿಸುವಲ್ಲಿ ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರ ಕೊಡುಗೆ ದೊಡ್ದದಿದೆ. ಅಂತಹ ಪೂಜ್ಯರು ನಡೆದಾಡಿದ ನೆಲದಲ್ಲಿ ನಾವೆಲ್ಲರೂ ಜನ್ಮತಾಳಿರುವುದು ನಮ್ಮಪುಣ್ಯವೆಂದು ಭಾವಿಸಿದ್ದೇನೆ. ಪೂಜ್ಯರ ಬದುಕು ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ. ಅವರ ಚಿಂತನೆ, ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಿ ಸಾರ್ಥಕ ಜೀವನ ಸಾಗಿಸಬೇಕು ಎಂದು ತಿಳಿಸಿದರು.
ದಿವ್ಯ ಸಾನ್ನಿಧ್ಯ ವಹಿಸಿದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ವಚನ ಜಾತ್ರೆ-2025 ಮತ್ತು ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರ 26ನೆಯ ಸ್ಮರಣೋತ್ಸವ ಅಂಗವಾಗಿ ಶರಣರು ಕಂಡ ಬಸವಣ್ಣ ವಿಷಯದ ಕುರಿತು ಏ.21ರ ವರೆಗೆ ಪ್ರವಚನ ಏರ್ಪಡಿಸಲಾಗಿದೆ ಪ್ರತಿದಿನ ಸಾಯಂಕಾಲ 6 ಗಂಟೆಗೆ ನಡೆಯುವ ಪ್ರವಚನದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಬೆಳಗಾವಿ-ಯಮಕನಮರಡಿ ಹುಣಸಿಕೊಳ್ಳ ಜಗದ್ಗುರು ಶೂನ್ಯ ಸಂಪಾದನಾ ಮಠದ ಉತ್ತರಾಧಿಕಾರಿ ಸಿದ್ಧಬಸವ ದೇವರು ಶರಣರು ಕಂಡ ಬಸವಣ್ಣ ವಿಷಯದ ಕುರಿತು ಪ್ರವಚನ ನೀಡಿದರು. ಮಸ್ಕತ್ ಕರ್ನಾಟಕ ಸಂಘದ ಮಾಜಿ ಸಲಹೆಗಾರ ಭೀಮ ನೀಲಂಕಠರಾವ ಹಂಗರಗೆ ಬಸವ ಗುರುವಿನ ಪೂಜೆ ನೆರವೇರಿಸಿದರು.

ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಬಸವ ಮುರಘೇಂದ್ರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ರೇಖಾ ಮಹಾಜನ ಸೇರಿದಂತೆ ಹಲವರು ಇದ್ದರು. ಪ್ರವಚನ ಸೇವಾ ಸಮಿತಿ ಅಧ್ಯಕ್ಷೆ ಶಶಿಕಲಾ ಅಶೋಕ ವಾಲೆ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿದರು. ವೀರಣ್ಣ ಕುಂಬಾರ ವಂದಿಸಿದರು.

ಸಿದ್ಧಬಸವ ದೇವರು ವಚನ ಸಾಹಿತ್ಯದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ಅಂತಹ ಪೂಜ್ಯರು ಶರಣರು ಕಂಡ ಬಸವಣ್ಣ ವಿಷಯದ ಕುರಿತು ಪ್ರವಚನದ ಮೂಲಕ ಜ್ಞಾನ ದಾಸೋಹ ನೀಡುತ್ತಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಆಲಿಸಬೇಕು.

  • ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ
Ghantepatrike kannada daily news Paper

Leave a Reply

error: Content is protected !!