ಸಾಗರ ಖಂಡ್ರೆ ಗೆಲುವು ಡಾ. ಶಿಂಧೆ ಹರ್ಷ
ಔರಾದ್ : ಬೀದರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಮುಖಂಡ ಡಾ. ಭೀಮಸೇನರಾವ ಶಿಂಧೆ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, ದೇಶದ ಅತ್ಯಂತ ಕಿರಿಯ ವಯಸ್ಸಿನ ಸಂಸದ ಸಾಗರ ಖಂಡ್ರೆ ಸಂಸತ್ತು ಪ್ರವೇಶಿಸಿದ್ದಾರೆ. ಇದು ಬೀದರ ಐತಿಹಾಸಿಕ ದಿನವಾಗಿದೆ ಎಂದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಾಲೂಕಿನಲ್ಲಿ ಸುಮಾರು 33 ಸಾವಿರ ಲೀಡ್ ದೊರೆದಿತ್ತು. ಆದರೆ ಈ ಬಾರಿ ನಮ್ಮ ಎಲ್ಲ ಕಾರ್ಯಕರ್ತರ ಪರಿಶ್ರಮದಿಂದ, ಈಶ್ವರ ಖಂಡ್ರೆ ಅವರು ಮಾಡಿದ ಅಭಿವೃದ್ಧಿ ಕೆಲಸಗಳು ಹಾಗೂ ಸರಕಾರದ ಗ್ಯಾರಂಟಿ ಯೋಜನೆಯಿಂದಾಗಿ ಔರಾದ್ ತಾಲೂಕಿನಲ್ಲಿ 13990 ಮತಗಳು ಕಾಂಗ್ರೆಸ್‍ಗೆ ಲೀಡ್ ದೊರೆತಿದೆ ಎಂದರು.
ಸಾಗರ ಖಂಡ್ರೆ ಅವರು 3-4 ವರ್ಷದಿಂದ ಕ್ಷೇತ್ರದಲ್ಲಿ ಸುತ್ತಾಡಿದ್ದಾರೆ. ಗಡಿ ತಾಲೂಕು ಔರಾದ್ ತಾಲೂಕಿನಲ್ಲಿ ಕಾಂಗ್ರೆಸ್ ಮತ್ತೆ ಭದ್ರವಾಗಿದೆ. ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ತಾವೇ ಅಭ್ಯರ್ಥಿ ಎಂದು ಭಾವಿಸಿ ಕೆಲಸ ಮಾಡಿದ್ದರಿಂದ ದೊಡ್ಡ ಮಟ್ಟದ ಮತಗಳ ಅಂತರದಲ್ಲಿ ಗೆಲುವು ಸಾಧ್ಯವಾಗಿದೆ ಎಂದರು.
ಔರಾದ್ ತಾಲೂಕಿನ ಜನರು ನೀಡಿರುವ ಬೆಂಬಲ ಸಂತಸ ತಂದಿದೆ. ಇದರಿಂದ ಭವ್ಯ ಭಾರತದ ಕನಸು ನನಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಂಸದರಾಗಿ ಕೆಲಸ ಮಾಡಲು ಸಾಗರ ಖಂಡ್ರೆ ಅವರಿಗೆ ಅವಕಾಶ ಸಿಕ್ಕಿದೆ ಎಂದರು. ದೇಶದಲ್ಲಿ ಕಾಂಗ್ರೆಸ್ ಅಲೆ ಇಲ್ಲ ಎನ್ನುತ್ತಿದ್ದವರಿಗೆ ಲೋಕಸಭೆ ಫಲಿತಾಂಶ ಸೂಕ್ತ ಉತ್ತರ ನೀಡಿದೆ ಎಂದು ಹೇಳಿದರು.