ಸಚಿವ ಆರ್.ಬಿ.ತಿಮ್ಮಾಪುರ ಅವರಿಗೆ ಅಭಿನಂದನ ಸಮಾರಂಭ : ಫರ್ನಾಂಡಿಸ್ ಹಿಪ್ಪಳಗಾಂವ
ಬೀದರ: ಕರ್ನಾಟಕ ಸರ್ಕಾರದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಹುಟ್ಟು ಹೋರಾಟಗಾರರು, ಮಾದಿಗ ಸಮಾಜದ ಬೆನ್ನೆಲುಬು. ಸಮಾಜದ ಏಳ್ಗೆಗಾಗಿ ಹಗಲು ರಾತ್ರಿ ಹೋರಾಟ ಮಾಡಿದವರು. ಅವರು ಪ್ರಗತಿ ಪರಿಶೀಲನೆಗಾಗಿ ಬೀದರ ಜಿಲ್ಲೆಗೆ ಆಗಮಿಸುತ್ತಿರುವ ಪ್ರಯುಕ್ತ ಜುಲೈ 20 ರಂದು ಬೆಳಿಗ್ಗೆ 11-30ಕ್ಕೆ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ. ಜಿಲ್ಲೆಯ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮಾದಿಗ ಸಮಾಜದ ಹಿರಿಯ ಮುಖಂಡ ರಾಜಕುಮಾರ ಕಡ್ಯಾಳ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಮಾದಿಗ ಸಮನ್ವಯ ಸಮಿತಿ ವತಿಯಿಂದ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಸಚಿವರಾದ ಮೇಲೆ ಪ್ರಪ್ರಥಮ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿರುವ ಸಚಿವ ತಿಮ್ಮಾಪುರ ಅವರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಹೀಗಾಗಿ ಜಿಲ್ಲೆಯ ಸಮಾಜದ ಹಿತ ಚಿಂತಕರು, ಹಿತೈಷಿಗಳು, ಮುಖಂಡರು ಹಾಗೂ ಬಾಂಧವರು ಪಕ್ಷಾತೀತವಾಗಿ ಸಮಾರಂಭದಲ್ಲಿ ಪಾಲ್ಗೊಂಡು ಸಚಿವರಿಗೆ ಅಭಿನಂದಿಸಬೇಕೆಂದು ಕೋರಿದರು.
ಮಾದಿಗ ಸಮಾಜದ ಮುಖಂಡರಾದ ಫರ್ನಾಂಡಿಸ್ ಹಿಪ್ಪಳಗಾಂವ ಮಾತನಾಡಿ ಆರ್.ಬಿ.ತಿಮ್ಮಾಪುರ ಅಬಕಾರಿ ಸಚಿವರಾಗಿರುವುದು ನಮಗೆ ಹೆಮ್ಮೆ ಎನಿಸಿದೆ. ಸಮಾಜದ ಬುದ್ಧಿ ಜೀವಿಗಳು, ದಲಿತ ಹೋರಾಟಗಾರರು ಹಾಗೂ ವಿವಿಧ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಅಂದು ಬೆಳಿಗ್ಗೆ ನಗರಕ್ಕೆ ಆಗಮಿಸುವ ಸಚಿವ ತಿಮ್ಮಾಪುರ ಅವರಿಗೆ ಮೆರವಣಿಗೆ ಮೂಲಕ ರಂಗಮಂದಿರಕ್ಕೆ ಕರೆದೊಯ್ಯಲಾಗುವುದು ಎಂದು ಪ್ರತಿಪಾದಿಸಿದರು.
ಸಮಾಜದ ಹಿರಿಯ ಮುಖಂಡ ಶಿವರಾಜ ಬಂಬುಳಗಿ, ಸಮಿತಿ ಸದಸ್ಯ ಅಭಿ ಕಾಳೆ, ಸಂಜೀವಕುಮಾರ ಬೇಂದ್ರೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಾದಿಗ ಸಮನ್ವಯ ಸಮಿತಿ ಸದಸ್ಯರುಗಳಾದ ಪ್ರಸಾದ ಮನ್ನಳ್ಳಿ, ವಿಜಯಕುಮಾರ ಹಿಪ್ಪಳಗಾಂವ, ಜಾಫೆಟ್ ಕಡ್ಯಾಳ, ಕಮಲಾಕರ ಎಲ್ ಹೆಗಡೆ, ಸುಭಾಷ ವರ್ಮಾ, ಜೈಶೀಲ ಮೇತ್ರೆ, ಜೈಶೀಲ ಕಲವಾಡಿ, ಪರಮೇಶ್ವರ ಕಾಳಮದರಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.