ಸಂಘದ ಬೆಳ್ಳಿಹಬ್ಬಕ್ಕೆ ಮಹಿಳಾ ಮಕ್ಕಳ ಕಲ್ಯಾಣ ಮತ್ತು ಸಹಕಾರ ಸಚಿವರಿಗೆ ಆಹ್ವಾನ – ಡಾ. ಸಾವಿತ್ರಿ ಹೆಬ್ಬಾಳೆ
ಬೀದರ: 2022-23ನೇ ಸಾಲಿನಲ್ಲಿ ಅಕ್ಕಮಹಾದೇವಿ ಮಹಿಳಾ ಪತ್ತಿನ ಸಹಕಾರ ಸಂಘಕ್ಕೆ 19 ಲಕ್ಷ, 31 ಸಾವಿರದ 286 ರೂ. ನಿವ್ವಳ ಲಾಭವಾಗಿದೆ. ನಮ್ಮ ಸಂಘದಲ್ಲಿ ಅಡಾವು ಮೇಲಿನ ಸಾಲ, ಮುದ್ದತ್ತು, ಠೇವಣಿ, ಪಿಗ್ಮಿ, ಆರ್ಡಿ, ಓಡಿಸಿ ಮತ್ತು ಸ್ವಸಹಾಯ ಮೇಲಿನ ಸಾಲಗಳನ್ನು ನೀಡಲಾಗುತ್ತಿದೆ. ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಘದ ಅಧ್ಯಕ್ಷೆ ಡಾ. ಸಾವಿತ್ರಿಬಾಯಿ ಹೆಬ್ಬಾಳೆ ತಿಳಿಸಿದರು.
ನಗರದ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕೃತಿಕ ಭವನದಲ್ಲಿ ನಡೆದ ಅಕ್ಕಮಹಾದೇವಿ ಮಹಿಳಾ ಪತ್ತಿನ ಸಹಕಾರ ಸಂಘದ 25ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘವು ಸುಮಾರು 25 ವರ್ಷಗಳಿಂದ ಸಮಾಜಮುಖಿಯಾಗಿ ಮತ್ತು ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. 2023-24ನೇ ಸಾಲಿನಲ್ಲಿ ಸಂಘದ ಕಟ್ಟಡ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ. ಅಲ್ಲದೇ ಇನ್ನು ಮುಂದೆ ಸಂಘದ ವತಿಯಿಂದ ಬಂಗಾರದ ಮೇಲಿನ ಸಾಲ ನೀಡಲು ನಿರ್ಧರಿಸಲಾಗಿದೆ. ಸಂಘದ ಲೆಕ್ಕಪತ್ರದ ಬಗ್ಗಿ ವಿಶೇಷ ಕಾಳಜಿ ವಹಿಸಿ ಪಾರದರ್ಶಕತೆ ಕಾಪಾಡಲಾಗಿದೆ. ಪ್ರತೀ ವರ್ಷ ಲೆಕ್ಕ ಪರಿಶೋಧಕರಿಂದ ಅಡಿಟ್ ಮಾಡಿಸಿ ಎ ಮತ್ತು ಬಿ ಗ್ರೇಡ್ ಪಡೆಯಲಾಗುತ್ತಿದೆ. ಸಂಘದ ಸದಸ್ಯರು ಸಾಲ ಪಡೆದು ಸಕಾಲದಲ್ಲಿ ಮರುಪಾವತಿ ಮಾಡುವಂತೆ ಸದಸ್ಯರಿಗೆ ಮನವಿ ಮಾಡಿದರು. 2023-24 ನೇ ಸಾಲಿನಲ್ಲಿ ಸಂಘದ ಬೆಳ್ಳಿಹಬ್ಬ ಆಚರಿಸಲಾಗುವುದು. ಇದಕ್ಕಾಗಿ ರೂ. 5 ಲಕ್ಷ ಖರ್ಚು ಮಾಡಲಾಗುತ್ತಿದೆ. 25ನೇ ಮಹಾಸಭೆಯ ಬೆಳ್ಳಿಹಬ್ಬ ಆಚರಿಸಲು ಅನುಮೋದನೆ ನೀಡಿರುತ್ತದೆ. ಈ ಬೆಳ್ಳಿ ಹಬ್ಬಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಾಗೂ ಸಹಕಾರ ಸಚಿವರಿಗೆ ಆಹ್ವಾನಿಸುವಂತೆ ಮಹಾಸಭೆ ಸೂಚಿಸಿದೆ. ಅಲ್ಲದೆ ಕೇಂದ್ರ ಸರ್ಕಾರದ ಮಹಿಳಾ ಆಯೋಗದ ಅಧ್ಯಕ್ಷರಿಗೆ ಮುಖ್ಯ ಅತಿಥಿಗಳಾಗಿ ಅಹ್ವಾನಿಸುವ ಕುರಿತು ಚರ್ಚಿಸಲಾಗಿದೆ. ಈ ಬೆಳ್ಳಿ ಹಬ್ಬದ ಸ್ಮರಣಾರ್ಥವಾಗಿ ಸ್ಮರಣ ಸಂಚಿಕೆ ಹೊರತರುವ ಉದ್ದೇಶ ಹೊಂದಲಾಗಿದೆ ಎಂದು ಡಾ. ಸಾವಿತ್ರಿಬಾಯಿ ಹೆಬ್ಬಾಳೆ ತಿಳಿಸಿದರು.
ಆಡಳಿತ ಮಂಡಳಿ ಸದಸ್ಯೆ ಡಾ. ಸುನಿತಾ ಕೂಡ್ಲಿಕರ್ ನಿರೂಪಿಸಿದರು. ಶಾಂತಾಬಾಯಿ ಗುಂದಗಿ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಚಿಮಕೋಡೆ ವಂದಿಸಿದರು. ಮಹಾಸಭೆಯಲ್ಲಿ ನಿರ್ದೇಶಕರಾದ ಶಾಂತಾಬಾಯಿ ಗೂನ್ನಳ್ಳಿ,, ಡಾ. ಜಗದೇವಿ ಸೂರೆ, ಮೀನಾಕ್ಷಿ ತಗಾರೆ, ಇಂದುಮತಿ ಮಾಳಗೆ, ಸರಸ್ವತಿ ಖಾನಾಪುರೆ, ರೇಖಾ ಹಾದಿಮನಿ, ಶಾಮಲಾ ಎಲಿ, ಅಂಬಿಕಾ ಬಿರಾದಾರ, ಪುಷ್ಪಾವತಿ ಫುಲೇಕರ್, ಪಂಕಜಾ ಹುಗ್ಗಿ ಸೇರಿದಂತೆ ಪ್ರಮುಖರಾದ ಡಾ. ಜಗನ್ನಾಥ ಹೆಬ್ಬಾಳೆ, ಡಾ. ರಾಜಕುಮಾರ ಹೆಬ್ಬಾಳೆ, ಮಲ್ಲಿಕಾರ್ಜುನ ಸ್ವಾಮಿ, ವಿಷ್ಣುವರ್ಧನ ಸ್ವಾಮಿ, ಪ್ರಕಾಶ ಕನ್ನಾಳೆ ಸಿಬ್ಬಂದಿಗಳಾದ ಉಮಾಕಾಂತ, ಸುನಿತಾ ಬುಡೇರಿ, ಪರಮೇಶ, ಶಿವಕುಮಾರ ಪರೀಟ ಉಪಸ್ಥಿತರಿದ್ದರು.