ಬೀದರ್

ಶ್ರೀ ಜಗದ್ಗುರು ಪಂಚಾಚಾರ್ಯ ಪುಣ್ಯಶ್ರಮದಲ್ಲಿ ಜರುಗಿದ ಪತ್ರಿಕಾ ದಿನಾಚರಣೆ ಹಾಗೂ ಸೇವಾರ್ಥಿಗಳಿಗೆ ಸನ್ಮಾನ ಸಮಾರಂಭ

ಬೀದರ್: ಶ್ರೀ ಜಗದ್ಗುರು ಪಂಚಾಚಾರ್ಯ ಪುಣ್ಯಾಶ್ರಮ ನಿರ್ಮಾಣದಲ್ಲಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಹಾಗೂ ಮುಖಂಡರು ಸೇರಿದಂತೆ ಅಪಾರ ಭಕ್ತಗಣ ಸಹಕಾರ ನೀಡಿದ್ದಾರೆ. ಮುಂದಾಳತ್ವ ವಹಿಸಿಕೊಂಡು ವೇದಮೂರ್ತಿ ಷಣ್ಮುಖಯ್ಯ ಸ್ವಾಮಿ ಈ ಭವ್ಯ ಮಂದಿರ ನಿರ್ಮಾಣ ಮಾಡುವಲ್ಲಿ ಹಗಲಿರುಳು ಶ್ರಮಿಸಿದ್ದಾರೆ. ನಿಜಕ್ಕೂ ನಮಗೆ ಸಂತಸ ತಂದಿದೆ ಎಂದು ರಂಭಾಪುರ ಪೀಠದ ಪೂಜ್ಯ ಶ್ರೀ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.
ಗಯವಾರ ಭಾಲ್ಕಿ ರಸ್ತೆಯಲ್ಲಿರುವ ಶ್ರೀ ಜಗದ್ಗುರು ಪಂಚಾಚಾರ್ಯ ಪುಣ್ಯಶ್ರಮದಲ್ಲಿ ಜರುಗಿದ ಪತ್ರಿಕಾ ದಿನಾಚರಣೆ ಹಾಗೂ ಸೇವಾರ್ಥಿಗಳಿಗೆ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ವೇ. ಷಣ್ಮುಖಯ್ಯ ಸ್ವಾಮಿಯವರು ತಮ್ಮ ಇಡೀ ಜೀವನವನ್ನೇ ಪುಣ್ಯಾಶ್ರಮಕ್ಕಾಗಿ ಮುಡುಪಾಗಿಟ್ಟು ತನು ಮನ ಧನದಿಂದ ಶ್ರಮಿಸಿ ಇಂದು ಭವ್ಯ ಮಂದಿರ ನಿರ್ಮಾಣ ಮಾಡಿದ್ದಾರೆ. ಅಲ್ಲದೇ ರಂಭಾಪುರಿ ಪೀಠಕ್ಕೆ ಒಪ್ಪಿಸುತ್ತಿದ್ದಾರೆ. ಶೀಘ್ರವೇ ಸಮರ್ಥ ಉತ್ತರಾಧಿಕಾರಿಯನ್ನು ಇಲ್ಲಿ ನೇಮಕ ಮಾಡಿ ಬರುವ ಭಕ್ತಾದಿಗಳಿಗೆ ದರ್ಶನಾಶಿರ್ವಾದ ಹಾಗೂ ಪೂಜಾದಿ ಕಾರ್ಯಕ್ರಮಗಳು ನಡೆಯುವಂತೆ ನೋಡಿಕೊಳ್ಳಲಾಗುವುದು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಂದರ ಮತ್ತು ಭವ್ಯ ಪುಣ್ಯಾಶ್ರಮ ಇಲ್ಲಿ ನಿರ್ಮಾಣವಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳು ಸೇರಿದಂತೆ ಅಪಾರ ಭಕ್ತಾದಿಗಳು ಮಂದಿರ ನಿರ್ಮಾಣದಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಅವರಿಗೆ ಭಗವಂತ ಆಯುಷ್ಯ ಆರೋಗ್ಯ ನೀಡಿ ಕಾಪಾಡಲಿ ಎಂದರಲ್ಲದೆ ಪತ್ರಕರ್ತರು ಸಮಾಜದ ಕಣ್ಣುಗಳಿದ್ದಂತೆ. ಸಮಾಜದ ಏಳ್ಗೆಯಲ್ಲಿ ಪತ್ರಕರ್ತರ ಪಾತ್ರ ಬಹುಮುಖ್ಯವಾಗಿದೆ. ಸಮಾಜದ ಓರೆಕೋರೆಗಳನ್ನು ತಿದ್ದುವ ಶಕ್ತಿ ಅವರಲ್ಲಿದೆ. ಹೀಗಾಗಿ ಇಂದು ಅವರಿಗೆ ಸನ್ಮಾನಿಸಿ ಪ್ರೋತ್ಸಾಹಿಸಲಾಗಿದೆ. ಅವರ ಮುಂದಿನ ಜೀವನ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.
ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮಾತನಾಡಿ ಒಂದು ವರ್ಷದ ಹಿಂದೆ ಇಲ್ಲಿ ಸರಿಯಾಗಿ ಜಗದ್ಗುರುಗಳು ಉಳಿದುಕೊಳ್ಳಲು ಸರಿಯಾದ ವಸತಿ ವ್ಯವಸ್ಥೆ ಇರಲಿಲ್ಲ. ಆದರೆ ಇಂದು ಇಂತಹ ಭವ್ಯ ಮಂದಿರ, ವಸತಿ ವ್ಯವಸ್ಥೆಯಾಗಿದ್ದನ್ನು ಕಂಡು ನನಗೆ ಅತೀವ ಸಂತೋಷವಾಗಿದೆ. ನಿರ್ಮಾಣ ಹಂತದಲ್ಲಿರುವ ಸಮುದಾಯ ಭವನ ಶೀಘ್ರವೇ ಪೂರ್ಣಗೊಳ್ಳಲಿ. ಜಿಲ್ಲೆಯಲ್ಲಿ ಒಂದು ವೀರಶೈವ ಆಸ್ಪತ್ರೆ ನಿರ್ಮಾಣ ಆಗಬೇಕೆಂಬುದು ಶ್ರೀಗಳ ಕನಸಿದೆ. ಅದಕ್ಕೆ ಬೇಕಾಗುವ ಅಗತ್ಯ ಸಹಕಾರ ನೀಡಲಾಗುವುದು. ಜೊತೆಗೆ ಎಲ್ಲರ ಸಹಕಾರವು ಮುಖ್ಯ ಎಂದು ಜಾಬಶೆಟ್ಟಿ ತಿಳಿಸಿದರು.
ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾಧ್ಯಕ್ಷ ವೈಜಿನಾಥ ಕಮಠಾಣೆ ಮಾತನಾಡಿ ಪೂಜ್ಯ ರಂಭಾಪುರಿ ಜಗದ್ಗುರುಗಳು ತಮ್ಮ ಸದ್ಧರ್ಮ ಪೀಠದ ಮೂಲಕ ವಿಶ್ವದೆಲ್ಲೆಡೆ ಸಾಂಸ್ಕೃತಿಕ ಪರಂಪರೆಯನ್ನು ಪಸರಿಸುವ ಕಾರ್ಯ ಮಾಡುತ್ತಿದ್ದಾರೆ. ವೀರಶೈವ ಪರಂಪರೆ ಮೂಲಕ ನಾಡಿನ ಭಕ್ತರಿಗೆ ಹಾಗೂ ಯುವಕರಿಗೆ ಸಂಸ್ಕಾರ ಮತ್ತು ಆಚಾರ ವಿಚಾರಗಳನ್ನು ತಿಳಿಸುವ ಕಾರ್ಯ ಮಾಡುತ್ತಿದ್ದಾರೆ. ಪುಣ್ಯಶ್ರಮದ ಮೂಲಕವೂ ಈ ಭಾಗದ ಭಕ್ತಾದಿಗಳಿಗೆ ಆಧ್ಯಾತ್ಮದ ಕಂಪನ್ನು ಮನೆ ಮನಗಳ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮದ ಸಂಪಾದಕರು, ವರದಿಗಾರರು ಹಾಗೂ ಛಾಯಾಗ್ರಾಹಕರನ್ನು ವಿಶೇಷವಾಗಿ ರುದ್ರಾಕ್ಷಿ ಮಾಲೆ ತೊಡಿಸುವ ಮೂಲಕ ಪೂಜ್ಯ ರಂಭಾಪುರಿ ಜಗದ್ಗುರುಗಳು ಸನ್ಮಾನಿಸಿ ಗೌರವಿಸಿದರು. ಅಲ್ಲದೇ ಪುಣ್ಯಾಶ್ರಮದ ಜೀರ್ಣೋದ್ಧಾರಕ್ಕೆ ತನು ಮನ ಧನದಿಂದ ಸಹಕರಿಸಿದ ಸೇವಾರ್ಥಿಗಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಮ್ಮುಖವನ್ನು ಹುಡಗಿಯ ಪೂಜ್ಯ ವೀರೂಪಾಕ್ಷ ಶಿವಾಚಾರ್ಯರು, ತಮಲೂರಿನ ಪೂಜ್ಯ ಶಿವಾನಂದ ಶಿವಾಚಾರ್ಯರು ವಹಿಸಿದ್ದರು. ಪುಣ್ಯಾಶ್ರಮದ ಸಂಚಾಲಕರಾದ ವೇ.ಷಣ್ಮುಖಯ್ಯ ಸ್ವಾಮಿ ನೇತೃತ್ವ ವಹಿಸಿದ್ದರು. ವೇದಿಕೆ ಮೇಲೆ ಉದ್ಯಮಿ  ಹೃದಯರೋಗ ತಜ್ಞ ಡಾ. ನಿತಿನ್ ಗುದಗೆ, ಏಕತಾ ಫೌಂಡೇಶನ್ ಅಧ್ಯಕ್ಷ ರವೀಂದ್ರ ಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಪತ್ರಕರ್ತ ಶಿವಕುಮಾರ ಸ್ವಾಮಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀಕಾಂತ ಸ್ವಾಮಿ ಸೋಲಪುರ ನಿರೂಪಿಸಿದರು. ಕಾರ್ತಿಕ ಸ್ವಾಮಿ ಮಠಪತಿ ವಂದಿಸಿದರು. ಆರಂಭದಲ್ಲಿ ಬಸಯ್ಯ ಸ್ವಾಮಿ ಪುರೋಹಿತರು ಪೂಜೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ. ಪ್ರಭುಲಿಂಗ ಸ್ವಾಮಿ, ಡಾ. ಶಿವಾನಂದ ಚಿಕ್ಕಮಠ, ರವಿಸ್ವಾಮಿ ಹೆಡಗಾಪುರ, ಅಮರ ಸ್ಥಾವರಮಠ, ಬಸವರಾಜ ಕಾಮಶೆಟ್ಟಿ, ವಿಜಯಕುಮಾರ ಪಾಟೀಲ ಚಾಂಬೋಳ, ಮಹಾರುದ್ರ ಡಾಕುಳಗಿ,  ದೀಪಕ ಮನ್ನಳ್ಳಿ, ಸಾವಯವ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರಾದ  ಸತೀಶ ಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Ghantepatrike kannada daily news Paper

Leave a Reply

error: Content is protected !!