ಬೀದರ್

ಶೈಕ್ಷಣಿಕ, ಆಡಳಿತಾತ್ಮಕ ಸಮಸ್ಯೆಗಳ ಪರಿಹಾರಕ್ಕಾಗಿ ಎಬಿವಿಪಿ ಬೃಹತ್ ಪ್ರತಿಭಟನೆ

ಬೀದರಃ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ 1984 ರಲ್ಲಿ ಸ್ಥಾಪನೆಯಾಗಿ ಇಲ್ಲಿಗೆ 40 ವರ್ಷಗಳು ಕಳೆಯುತ್ತ ಬಂದಿವೆ. ಪ್ರಾರಂಭದಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಜವಾಬ್ದಾರಿ ಹೊತ್ತು ಬಂದ ಸದರಿ ವಿಶ್ವವಿದ್ಯಾಲಯವು ನಂತರದ ವರ್ಷಗಳಲ್ಲಿ ‘ಶಿಕ್ಷಣದ ಕಾಶಿ ಅಕ್ಷರ ದಾಸೋಹದ ಮಂದಿರ’ ಆಗುವ ಬದಲು ಭ್ರಷ್ಟಾಚಾರದ ವ್ಯವಸ್ಥೆಯಾಗಿ ರೂಪುಗೊಂಡಿದೆ. ಅನೇಕ ವರ್ಷಗಳಿಂದ ಇಲ್ಲಿನ ಆಡಳಿತ ವ್ಯವಸ್ಥೆ ಸಂಪೂರ್ಣ ಅಧೋಗತಿಗೆ ತಲುಪಿದ್ದು, ಪಾರದರ್ಶಕ ಆಡಳಿತ ನೀಡಲು ವಿಫಲತೆಯನ್ನು ಕಂಡಿದೆ. ಇದರಿಂದ ವಿದ್ಯಾರ್ಥಿಗಳ ಕನಸು ನುಚ್ಚು ನೂರಾಗಿದೆ. ಸರ್ಕಾರದ ನಿರ್ಲಕ್ಷ ಇಲ್ಲಿನ ಅಧಿಕಾರಿಗಳಿಗೆ ಮತ್ತು ಆಯಾ ವಿಭಾಗದ ನೌಕರಸ್ಥರಿಗೆ ಖುಷಿಯ ವಿಚಾರವಾಗಿದೆ. ಆದ್ದರಿಂದ ಇಲ್ಲಿ ಭ್ರಷ್ಟಾಚಾರ ಬಲಿತು ಅಮಾಯಕ ವಿದ್ಯಾರ್ಥಿಗಳನ್ನು ಶೋಷಣೆಗೆ ಎಡೆ ಮಾಡಿದೆ.

ವಿದ್ಯಾರ್ಥಿಗಳ ಸಮಸ್ಯೆಗಳಾದ; ಸರಿಯಾದ ಸಮಯಕ್ಕೆ ಪರೀಕ್ಷೆಗಳು ನಡೆಯದೇ ಇರುವುದು. ಉದ್ದೇಶಪೂರ್ವಕವಾಗಿ ಅಂಕಪಟ್ಟಿಯಲ್ಲಿ ಶೂನ್ಯ ಬರುವಂತೆ ಮಾಡುವುದು. ಆವಕ ಶಾಖೆಯಲ್ಲಿ ಕೊಟ್ಟ ಅರ್ಜಿಗಳನ್ನು ನಿರ್ಲಕ್ಷ ಮಾಡುವುದು. ವಿದ್ಯಾರ್ಥಿಗಳ ಅರ್ಜಿಯನ್ನು ತಿಂಗಳುಗಟ್ಟಲೆ ಮುಂದೂಡುವುದು. ಕುಂಟು ನೆಪವೊಡ್ಡಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಫಲಿತಾಂಶ ತಡೆಯೊಡ್ಡುವುದು. ಪದವಿ ಪರೀಕ್ಷೆ ಕೇಂದ್ರಗಳಿಗೆ ಅರ್ಹತೆ ಇಲ್ಲದ ಉಪನ್ಯಾಸಕರನ್ನು ಬಾಹ್ಯ ಮೇಲ್ವಿಚಾರಕರಾಗಿ ನೇಮಕ ಮಾಡುತ್ತಿದ್ದಾರೆ. ಹೊಸ ಪದವಿ ಕಾಲೇಜುಗಳಿಗೆ ನಿಯಮ ಮೀರಿ ಅರ್ಹತೆ ಮತ್ತು ಸೌಲಭ್ಯಗಳನ್ನು ಇಲ್ಲದಿದ್ದರೂ ಅನುಮತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಅಂಕಪಟ್ಟಿಗಳು ಕೊಡುತ್ತಿಲ್ಲ.
 
ಹೀಗೆ ಒಂದಲ್ಲ-ಎರಡಲ್ಲ ನಿತ್ಯ ನೂರಾರು ಸಮಸ್ಯೆಗಳನ್ನು ವಿಶ್ವವಿದ್ಯಾಲಯ ಮಾಡುತ್ತ ಬಂದಿದೆ. ಇದಕ್ಕೆ ಕೊನೆಯೇ ಇಲ್ಲದಂತಾಗಿದೆ. ಅಮಾಯಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ಬೀಳುತ್ತಿವೆ. ಇದಕ್ಕೆಲ್ಲ ಹಲವು ವರ್ಷಗಳಿಂದ ಅಸ್ತಿತ್ವಕ್ಕೆ ಬರುವ ಸರ್ಕಾರಗಳೇ ಹೊಣೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಒಂದುವೇಳೆ ಸರ್ಕಾರ ಸೂಕ್ತ ಮತ್ತು ಕಠಿಣ ನಿರ್ಧಾರದ ಕ್ರಮಗಳನ್ನು ವಿಶ್ವವಿದ್ಯಾಲಯದ ಸಿಬ್ಬಂದಿಗಳ ಮೇಲೆ ಕೈಗೊಂಡಿದ್ದರೆ ಇವತ್ತು ಭ್ರಷ್ಟಾಚಾರ ಇಷ್ಟೊಂದು ವ್ಯಾಪಕವಾಗಿ ಬೇರೂರುತ್ತಿರಲಿಲ್ಲ.

ಈ ಎಲ್ಲಾ ಸಮಸ್ಯೆಗಳ ನಿವಾವರಣೆಗಾಗಿ ಎ.ಬಿ.ವಿ.ಪಿ. ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಇಂದು ಬೀದರ ನಗರದ ಅಂಬೇಡ್ಕರ ವೃತ್ತದಿಂದ ಶಿವಾಜಿ ವೃತ್ತದ ಮೂಲಕ ಬೃಹತ್ ಪ್ರತಿಘಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಗೌರವಾನ್ವಿತ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಬಿವಿಪಿ ಯ ನಗರ ಕಾರ್ಯದರ್ಶಿ ಅಂಬ್ರೇಶ ಬಿರಾದಾರ, ಜಿಲ್ಲಾ ಸಂಚಾಲಕ ಶಶಿಕಾಂತ ರಾಕಲೆ, ಸಿದ್ಧಾರ್ಥ ಬಾವಿದೊಡ್ಡಿ, ವಿಶಾಲ, ದರ್ಶನ, ಸತೀಷ, ಅಮರ, ಶ್ವಾತಿ, ಪ್ರೇಮಾ ಮತ್ತು ವಿವಿಧ ಪದವಿ ಕಾಲೇಜುಗಳ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.  

Ghantepatrike kannada daily news Paper

Leave a Reply

error: Content is protected !!