ಶೆಟಕಾರ್ ಶಾಲೆಯಲ್ಲಿ ಸ್ವಾಗತ ಸಮಾರಂಭ: ಡಾ. ಮೈಲಾರೆ ಹೇಳಿಕೆ ಗುರುವಿನ ಸ್ಥಾನ ಬಹಳ ಶ್ರೇಷ್ಠ
ಬೀದರ್: ಜೀವನದಲ್ಲಿ ಗುರುವಿನ ಸ್ಥಾನ ಬಹಳ ಶ್ರೇಷ್ಠವಾದದ್ದು ಎಂದು ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ ಹೇಳಿದರು.
ಇಲ್ಲಿಯ ಶ್ರೀಮತಿ ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ಎಂಟನೇ ತರಗತಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಗುರುವಿನ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಗುರುವಿನ ಶಕ್ತಿ ಅಗಾಧವಾದದ್ದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕ ಲಕ್ಷ್ಮಣ ಪೂಜಾರಿ ಮಾತನಾಡಿ, ವಿದ್ಯಾರ್ಜನೆ ಜತೆಗೆ ಸಂಸ್ಕಾರವೂ ಬಹಳ ಮುಖ್ಯವಾದದ್ದು. ವಿದ್ಯಾರ್ಥಿಗಳು ಉತ್ತಮ ಆಚಾರ, ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ಜೀವನದಲ್ಲಿ ಉನ್ನತವಾದುದ್ದನ್ನು ಸಾಧಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ಚಂದ್ರಪ್ಪ ಗೌರಶೆಟ್ಟಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಚಂದ್ರಪ್ಪ ಭತಮುರ್ಗೆ ಮಾತನಾಡಿ, ಅಕ್ಷರ ಪ್ರೀತಿ ಇದ್ದವರಿಗೆ ಸರಸ್ವತಿ ಕೃಪೆ ಆಗುತ್ತದೆ. ಓದು, ಬರಹ ಚೆನ್ನಾಗಿದ್ದವರು ಉನ್ನತ ಸ್ಥಾನಕ್ಕೆ ಹೋಗಬಹುದು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಮಾತೃಭಕ್ತಿ, ಗುರು ಭಕ್ತಿ ಬೆಳೆಸಿಕೊಳ್ಳಬೇಕು ಎಂದು ಶಾಲೆಯ ಹಳೆಯ ವಿದ್ಯಾರ್ಥಿ ಶಿವಾನಂದ ವಿಶ್ವಕರ್ಮ ನುಡಿದರು.
ಸಿದ್ಧಾರೂಢ ಮಹಿಳಾ ಪದವಿ ಕಾಲೇಜು ಪ್ರಾಚಾರ್ಯ ನಾಗಪ್ಪ ಜಾನಕನೋರ ಮಾತನಾಡಿ, ಶೆಟಕಾರ್ ಶಾಲೆ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಗಳಾಗಿದ್ದಾರೆ ಎಂದು ತಿಳಿಸಿದರು.
ವಿದ್ಯಾರ್ಥಿನಿಯರಾದ ನಿಕಿತಾ, ಅಂಬಿಕಾ ನಿರೂಪಿಸಿದರು. ನಂದಿನಿ ಸ್ವಾಗತಿಸಿದರು. ಶಿವಾನಿ ವಂದಿಸಿದರು.