ಬೀದರ್

ಶಿಲಾಯುಗದಿಂದ ಸಿಲಿಕಾನ್ ಯುಗದವರೆಗೆ ಕೊರವ ಸಮಾಜ ಪ್ರಾಚೀನ ಇತಿಹಾಸ ಹೊಂದಿದೆ – ಶಿವಶರಣಪ್ಪ ಹುಗ್ಗೆಪಾಟೀಲ

ಬೀದರ: 12ನೇ ಶತಮಾನದಲ್ಲಿ ವಿಶ್ವಗುರು ಬಸವೇಶ್ವರರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ನುಲಿಯ ಚಂದಯ್ಯನವರು ಶ್ರೇಷ್ಠ ವಚನಕಾರರಾಗಿದ್ದರು. ಅವರ ಹಲವಾರು ವಚನಗಳು ನಮಗೆ ಲಭ್ಯವಾಗಿವೆ. ಅವರ ವಚನಗಳಲ್ಲಿ ಕಾಯಕ ಮತ್ತು ದಾಸೋಹದ ಕುರಿತು ಉಲ್ಲೇಖವಿದೆ ಎಂದು ಅಕ್ಕಮಹಾದೇವಿ ಮಹಿಳಾ ಕಾಲೇಜಿನ ಉಪನ್ಯಾಸಕ ಪ್ರೊ. ಶಿವಶರಣಪ್ಪ ಹುಗ್ಗೆಪಾಟೀಲ ತಿಳಿಸಿದರು.
ಶ್ರೀ ನೂಲಿಯ ಚಂದಯ್ಯ ಜಯಂತಿ ಉತ್ಸವ ಸಮಿತಿ ವತಿಯಿಂದ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ 12ನೇ ಶತಮಾನದ ಸುಪ್ರಸಿದ್ಧ ವಚನಕಾರರು ಹಾಗೂ ಕೊರಮ ಕೊರವ ಸಮುದಾಯದ ಧರ್ಮಗುರುಗಳಾದ ಶಿವಶರಣ ನುಲಿಯ ಚಂದಯ್ಯನವರ 916ನೇ ಜಯಂತಿ ಉತ್ಸವ ಹಾಗೂ ಸಮುದಾಯದ ನೌಕರರು, ವಿದ್ಯಾರ್ಥಿಗಳಿಗೆ ಮತ್ತು ಮುಖಂಡರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಹುಗ್ಗೆಪಾಟೀಲ ಅವರು ಶಿಲಾಯುಗದಿಂದ ಸಿಲಿಕಾನ್ ಯುಗದವರೆಗೆ ಅತ್ಯಂತ ಪ್ರಾಚೀನ ಇತಿಹಾಸ ಹೊಂದಿರುವ ಸಮುದಾಯವೇ ಕೊರಮ ಕೊರವ ಸಮಾಜ. ಕೈಕಾಡಿ ಸಮಾಜ. ಮಹಾತ್ಮ ಗೌತಮ ಬುದ್ಧರ ಕಾಲದಲ್ಲಿಯೂ ಕೈಕಾಡಿ ಸಮಾಜದ ಉಲ್ಲೇಖವಿತ್ತು. ಜಗತ್ತಿಗೆ ಕೌಶಲ್ಯ ಪರಿಚಯಿಸಿದ ಸಮಾಜ ಕೊರವ ಸಮಾಜ. ಸಾಮ್ರಾಟ್ ಅಶೋಕನ ಕಾಲದಲ್ಲಿ ಕೊರಮ ಸಮಾಜಕ್ಕೆ ಸಾಕಷ್ಟು ಗೌರವವಿತ್ತು. ಕೊರಮ ಸಮಾಜಕ್ಕೆ ಕೈಕಾಡಿ ಎಂಬ ಹೆಸರು ಬರಲು ಹಲವು ಕಾರಣಗಳಿವೆ. ನೂಲು ಕೊಟ್ಟರೆ ತಮ್ಮ ಕೈಬೆರಳುಗಳಿಂದ ಹಗ್ಗ, ಬುಟ್ಟಿ, ಮೂರ್ತಿ, ಚಾಪೆ ಮಾಡಿ ಕೊಡಲಾಗುತ್ತದೆ. ಅಷ್ಟೊಂದು ಶಕ್ತಿ ಸಮಾಜದ ಜನರ ಕೈಬೆರಳುಗಳಲ್ಲಿದೆ ಎಂದು ಹುಗ್ಗೆ ಪಾಟೀಲ ಅವರು ಮಾರ್ಮಿಕವಾಗಿ ನುಡಿದರು.
ಸಮಾಜದ ಬಾಂಧವರು ಯಾರೂ ಕೂಡಾ ನಾನು ಕೊರಮ ಇದಿನಿ. ನಾನು ಕೈಕಾಡಿ ಇದಿನಿ. ನಾನು ಬುಟ್ಟಿ ನೇಯುವವನಿದ್ದಿನಿ ಎಂದು ಜಿಗುಪ್ಸೆ ಪಡಬೇಡಿ. ಈ ಹಿಂದೆ ರಾಜಮಹಾರಾಜರು ಕೂಡಾ ಸಮುದಾಯದ ಜನರಿಗೆ ಕೈಮುಗಿದ ಉದಾಹರಣೆಗಳಿವೆ ಎಂದರು. ಪೌರಾಣಿಕ ಕಥೆಯ ಪ್ರಕಾರ ಶಿವನಿಗೆ ಚಾಪೆ ಮಾಡಿ ಹಾಸಿಕೊಟ್ಟ, ಶಿವನಿಗೂ ಕುಂಚಿ ಹೊಲಿದು ಹೊದಿಕೆ ಮಾಡಿ ಹೊದಿಸಿದ ಕುಂಚಿ ಕೊರವರ ಸಮುದಾಯ ನಮ್ಮದು ಎಂಬ ಹೆಮ್ಮೆ ತಾಳಬೇಕೆಂದು ಪ್ರೋತ್ಸಾಹದಾಯಕವಾಗಿ ಮಾತನಾಡಿದರು.
ಬೀದರ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಆಸ್ತಿ ಅಧಿಕಾರಿಗಳಾದ ರಾಮಪ್ಪ ಕೊರವ ಅವರು ಮಾತನಾಡಿ ಕೊರಮ ಕೊರವ ಸಮುದಾಯದ ವತಿಯಿಂದ ಸಮಾಜದ ಸಮಸ್ಯೆಗಳ ಕುರಿತು ಹಾಗೂ ನಿಗಮ ಮಂಡಳಿ ಸ್ಥಾಪನೆ ಕುರಿತು ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನುಲಿಯ ಚಂದಯ್ಯ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷರಾದ ಸಂಜೀವಕುಮಾರ ಬೇಲೂರೆ ಮಾತನಾಡಿ ವಚನಕಾರ ನುಲಿಯ ಚಂದಯ್ಯ ಜಯಂತಿ ನಿಮಿತ್ಯ ಯುವಕರಿಗಾಗಿ ಕ್ರಿಕೇಟ್ ಪಂದ್ಯಾವಳಿ ಯಶಸ್ವಿಯಾಗಿ ಆಯೋಜನೆ ಮಾಡಲಾಗಿತ್ತು. ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ. ಇಂದು ಸಮುದಾಯದ ಸರ್ಕಾರಿ ನೌಕರರು, ವಿದ್ಯಾರ್ಥಿಗಳು ಹಾಗೂ ಮುಖಂಡರಿಗೆ ಸನ್ಮಾನ ಮಾಡಲಾಗುತ್ತಿದೆ ಎಂದರಲ್ಲದೆ ಇಂದು ಜಯಂತಿ ಸಮಾರಂಭಕ್ಕೆ ಉದ್ಘಾಟಕರಾಗಿ ಶಾಸಕರು ಬರಬೇಕಾಗಿತ್ತು. ಆದರೆ ಬರದೇ ಇದ್ದುದು ಒಳ್ಳೆಯದಾಯಿತು. ಬಂದ್ರೆ ಅವರು ರಾಜಕೀಯವಾಗಿ ಮಾತನಾಡುತ್ತಿದ್ದರು. ಆದರೆ ಇಂದು ಉಪನ್ಯಾಸಕರಿಂದ ನಮ್ಮ ಸಮುದಾಯದ ಇತಿಹಾಸ ತಿಳಿದುಕೊಳ್ಳಲು ಒಂದಿಷ್ಟು ಅವಕಾಶ ಸಿಕ್ಕಂತಾಯಿತು ಎಂದು ಸಂಜೀವಕುಮಾರ ತಿಳಿಸಿದರು. ಇದೇ ವೇಳೆ ಕ್ರಿಕೇಟ್ ಟೂರ್ನಾಮೆಂಟ್‍ನಲ್ಲಿ ಅಂತೀಮ ಪಂದ್ಯದಲ್ಲಿ ವಿಜೇತರಾದ ಗುನ್ನಳ್ಳಿ ತಂಡದ ನಾಯಕ ಸಚಿನ್ ದುಳಗೆ (ಪ್ರಥಮ), ಜನವಾಡಾ ತಂಡದ ನಾಯಕ ರವೀಂದ್ರ ಭಂಗೆ (ದ್ವಿತೀಯ) ಇವರಿಗೆ ಬಹುಮಾನ ಮತ್ತು ಟ್ರೋಫಿ ವಿತರಣೆ ಮಾಡಿ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಶಿವಾಜಿ ವೃತ್ತದಿಂದ ನುಲಿಯ ಚಂದಯ್ಯನವರ ಭಾವಚಿತ್ರದ ಮೆರವಣಿಗೆ ಅಲಂಕೃತ ಸಾರೋಟಿನಲ್ಲಿ ಕರ್ನಾಟಕ ಸಾಹಿತ್ಯ ಸಂಘದವರೆಗೆ ಮಾಡಲಾಯಿತು.
ಇದೇ ವೇಳೆ ನಗರಸಭೆ ಸದಸ್ಯ ರಾಮ್ ಜಾಧವ್, ಮನೋಜ್ ಮಾನೆ, ವೈಜಿನಾಥ ಸಾಳೆ, ವಿಶ್ವನಾಥ ಜಾಧವ, ರವೀಂದ್ರ ಬಂಗೆ, ಸಂತೋಷ ಡಿ ಕೊರವ, ಸಂಜೀವಕುಮಾರ ಮಾನೆ, ರಘುನಾಥ ಡಿಕೆ., ಭೀಮರಾವ ಪವಾರ್, ಸಂತೋಷ ಭಂಗೆ, ರವಿ ಭಂಗೆ, ರವಿ ಮಾನೆ, ತುಕಾರಾಮ ಜನವಾಡಾ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Ghantepatrike kannada daily news Paper

Leave a Reply

error: Content is protected !!