ಬೀದರ್

ಶಾಸಕ ಪ್ರಭು ಚವ್ಹಾಣರಿಂದ ಡಿಪ್ಲೋಮಾ ಕೋರ್ಸ್ ಪೋಸ್ಟರ್ ಬಿಡುಗಡೆ

ಸರ್ಕಾರಿ ಪಾಲಿಟೆಕ್ನಿಕ್ ಔರಾದನ 2024-25ನೇ ಸಾಲಿನ ಪ್ರವೇಶಗಳಿಗೆ ಪ್ರವೇಶಾತಿಗೆ ಸಂಬಂಧಿಸಿದ ಪೋಸ್ಟರ್ ಗಳನ್ನು ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಇತ್ತೀಚೆಗೆ ಗೃಹ ಕಛೇರಿ ಬೋಂತಿಯಲ್ಲಿ ಬಿಡುಗಡೆಗೊಳಿಸಿದರು.

ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆ ಪಾಸಾಗಿರುವ ಹಾಗೂ ಮುಂಬರುವ ಪೂರಕ ಪರೀಕ್ಷೆಯಲ್ಲಿ ಪಾಸಾಗುವ ವಿದ್ಯಾರ್ಥಿಗಳು ವಿವಿಧ ಡಿಪ್ಲೋಮಾ ಕೋರ್ಸುಗಳಿಗಾಗಿ ಪ್ರವೇಶ ಪಡೆಯಬಹುದಾಗಿದೆ. ಡಿಪ್ಲೋಮಾ ಪ್ರವೇಶ ಪಡೆಯುವುದರಿಂದ ಕಡಿಮೆ ಅವಧಿಯಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಲು ಸಾಧ್ಯವಿರುತ್ತದೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯುವಂತಾಗಬೇಕು. ಈ ದಿಶೆಯಲ್ಲಿ ಸಿಬ್ಬಂದಿ ಹೆಚ್ಚು ಪ್ರಯತ್ನವಹಿಸಬೇಕು ಎಂದರು.

ಪಾಲಿಟೆಕ್ನಿಕ್ ಔರಾದನಲ್ಲಿ ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್, ಮೆಕಾನಿಕಲ್ ಇಂಜಿನಿಯರಿಂಗ್, ಅಟೋಮೇಶನ್ ಅಂಡ್ ರೋಬೋಟಿಕ್ಸ್, ಅಲ್ರ‍್ನೇಟ್ ಎನೆರ್ಜಿ ಟೆಕ್ನೋಲೋಜಿ ಎನ್ನುವ ಇಂಜಿನಿಯರಿಂಗ್ ಕೋರ್ಸುಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಜೊತೆಗೆ ವಿಶೇಷ ಪ್ರಯತ್ನ ವಹಿಸಿ ಔರಾದ ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ಇದೇ ವರ್ಷದಿಂದ ಹೊಸದಾಗಿ ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರ್ಯಾಕ್ಟೀಸ್ (ಕನ್ನಡ) ಕೋರ್ಸನ್ನು ಆರಂಭಿಸಲಾಗಿದ್ದು, ಒಟ್ಟು 30 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಅನುಮತಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಲು ಕ್ರಮ ವಹಿಸಬೇಕೆಂದು ಹೇಳಿದರು.

ಸರ್ಕಾರಿ ಪಾಲಿಟೆಕ್ನಿಕ್ ಔರಾದನ ಪ್ರಾಚಾರ್ಯರಾದ ಶೈಲಜಾ ಶಾಮರಾವ ಮಾತನಾಡಿ, ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಅರ್ಜಿ ಜೊತೆಗೆ ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಟಿ.ಸಿ./ಬೊನಾಫೈಡ್ ಪ್ರಮಾಣಪತ್ರ, 1 ರಿಂದ 10ನೇ ತರಗತಿವರೆಗೆ ಓದಿರುವ ವ್ಯಾಸಂಗ ಪ್ರಮಾಣಪತ್ರ, ಕನ್ನಡ ಮಾಧ್ಯಮ ಪ್ರಮಾಣ ಪತ್ರ, ಗ್ರಾಮೀಣ ಪ್ರಮಾಣಪತ್ರ, 371(ಜೆ) ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ ಹಾಗೂ 6 ಭಾವಚಿತ್ರಗಳನ್ನು ಸಲ್ಲಿಸಬೇಕು. ಡಿಪ್ಲೋಮಾ ವ್ಯಾಸಂಗದ ಪ್ರವೇಶ ಶುಲ್ಕವು ಅತ್ಯಂತ ಕಡಿಮೆಯಾಗಿದ್ದು, ವಿದ್ಯಾರ್ಥಿವೇತನ ಸೌಲಭ್ಯವು ಲಭ್ಯವಿರುತ್ತದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಶಿವಕುಮಾರ ಕಟ್ಟೆ, ಅರುಣ ಮುಕಾಶಿ, ಡಾ.ಸಂಜುಕುಮಾರ ಹಾಗೂ ಇತರರು ಇದ್ದರು.

Ghantepatrike kannada daily news Paper

Leave a Reply

error: Content is protected !!