ಬೀದರ್

ವೀರಶೈವ ಧರ್ಮ ಜಾಗೃತಿ ಸಮಾವೇಶ: ರಂಭಾಪುರಿ ಜಗದ್ಗುರು ಅಭಿಮತ ವೀರಶೈವ ಮಾತೃ ಹೃದಯದ ಧರ್ಮ

ಬೀದರ್: ವೀರಶೈವ ಧರ್ಮವು ಸಕಲರಿಗೂ ಒಳಿತು ಉಂಟು ಮಾಡುವ ಮಾತೃ ಹೃದಯದ ಧರ್ಮವಾಗಿದೆ ಎಂದು ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ನುಡಿದರು.
ನಗರದ ಲಾಡಗೇರಿ ಹಿರೇಮಠದಲ್ಲಿ ಆಯೋಜಿಸಿದ್ದ ವೀರಶೈವ ಧರ್ಮ ಜಾಗೃತಿ ಸಮಾವೇಶದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಸರ್ವ ಧರ್ಮೀಯರನ್ನು ಜತೆಗೆ ತೆಗೆದುಕೊಂಡು ಹೋಗುವ ವಿಶೇಷ ಗುಣ ವೀರಶೈವ ಧರ್ಮಕ್ಕಿದೆ. ಕೊಲನಪಾಕ್‍ನಲ್ಲಿ ಬೇರೆ ಬೇರೆ ಜಾತಿ, ಧರ್ಮಗಳ 18 ಮಠಗಳನ್ನು ಸ್ಥಾಪಿಸಿರುವುದೇ ಇದಕ್ಕೆ ನಿದರ್ಶನವಾಗಿದೆ ಎಂದರು.
ಎಲ್ಲ ಧರ್ಮಗಳ ಸಾರವೂ ವೀರಶೈವ ಧರ್ಮದಲ್ಲಿ ಅಡಕವಾಗಿದೆ. ಈ ಧರ್ಮ ಪುರಾತನ ಧರ್ಮಗಳಲ್ಲೊಂದಾಗಿದೆ. ಎಂಟನೇ ಶತಮಾನ ಪೂರ್ವದಲ್ಲೂ ವಿಶ್ವದಾದ್ಯಂತ ಇದರ ಕುರುಹುಗಳು ಕಾಣ ಸಿಗುತ್ತವೆ. ಸಂಶೋಧಕ ಚಿದಾನಂದ ಮೂರ್ತಿ ಅವರು ತಮ್ಮ ಸಂಶೋಧನಾ ಕೃತಿಗಳಲ್ಲೂ ಈ ವಿಷಯ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದರು.
ಭಕ್ತರು ಸಾಮಾಜಿಕ ಹಾಗೂ ರಾಜಕೀಯವಾಗಿ ಜಾಗೃತರಾಗಬೇಕು. ಜಿಲ್ಲಾ ಪಂಚಾಯಿತಿ, ವಿಧಾನಸಭೆ, ಲೋಕಸಭೆಗೆ ಚಾರಿತ್ರ್ಯವಂತರನ್ನು ಆರಿಸಿ ಕಳಿಸಬೇಕು. ಭ್ರಷ್ಟಾಚಾರ ಮಾಡಿ ಹಣ ಗಳಿಸಿದವರು ಹಾಗೂ ಅಪರಾಧ ಹಿನ್ನೆಲೆ ಉಳ್ಳವರನ್ನು ಆಯ್ಕೆಗೊಳಿಸಿದರೆ ಧರ್ಮ ಹಾಗೂ ದೇಶಕ್ಕೆ ಗಂಡಾಂತರ ಎದುರಾಗಲಿದೆ ಎಂದು ಎಚ್ಚರಿಕೆಯ ಸಂದೇಶ ನೀಡಿದರು.
ಮಾಜಿ ಶಾಸಕ ಸುಭಾಷ್ ಕಲ್ಲೂರ ಅವರು ಬಿಲ್ವಪತ್ರಿ ಸಸಿಗೆ ನೀರೆರೆದು ಸಮಾವೇಶಕ್ಕೆ ಚಾಲನೆ ನೀಡಿದರು.
ಮಠದ ಪೀಠಾಧಿಪತಿ ಗಂಗಾಧರ ಶಿವಾಚಾರ್ಯ ನೇತೃತ್ವ ವಹಿಸಿದ್ದರು. ತಡೋಳಾದ ರಾಜೇಶ್ವರ ಶಿವಾಚಾರ್ಯ, ಹಲಬರ್ಗಾ-ಶಿವಣಿ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯ, ಸಾಯಗಾಂವ್‍ನ ಶಿವಾನಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು.
ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ, ಜಿ.ಪಂ. ಮಾಜಿ ಅಧ್ಯಕ್ಷೆ ರಾಜಶ್ರೀ ಸ್ವಾಮಿ, ಕಾಂಗ್ರೆಸ್ ಮುಖಂಡ ಶ್ರೀಕಾಂತ ಸ್ವಾಮಿ, ವೀರಶೈವ ಮುಖಂಡ ಕಾಶೀನಾಥ ಜಕ್ಕಾ, ಅಮರ ಹಿರೇಮಠ, ಬಸವರಾಜ ಸ್ವಾಮಿ, ಕುಮಾರಸ್ವಾಮಿ ಹಿರೇಮಠ, ಶಿವಕುಮಾರ ಸ್ವಾಮಿ, ವರದಯ್ಯ ಸ್ವಾಮಿ, ಮಹಾಲಿಂಗ ಸ್ವಾಮಿ ಚಟ್ನಳ್ಳಿ, ಓಂಪ್ರಕಾಶ ರೊಟ್ಟೆ, ಚಂದ್ರಪ್ಪ ಅಷ್ಟೂರ, ಮಲ್ಲಪ್ಪ ಹುಲೆಪ್ಪನೋರ, ಅಮೃತರಾವ್ ವಡ್ಡಿ, ಶಿವರಾಜ ಅಷ್ಟೂರ, ಮಲ್ಲಿಕಾರ್ಜುನ ಬಸಂತಪುರೆ, ಬಂಡೆಪ್ಪ ಗಿರಿ, ರಮೇಶ ವಾಲ್ದೊಡ್ಡಿ ಮತ್ತಿತರರು ಇದ್ದರು.
ಕಿರಣ ಹಿರೇಮಠ ಹಾಗೂ ತಂಡದವರು ಸಂಗೀತ ನಡೆಸಿಕೊಟ್ಟರು. ಭಕ್ತರಿಗೆ ಬಿಲ್ವಪತ್ರಿ ಸಸಿ ವಿತರಿಸಲಾಯಿತು.
ಸಿದ್ರಾಮಯ್ಯ ಹಿರೇಮಠ ನಿರೂಪಿಸಿದರು. ಸಂಜೀವಕುಮಾರ ಸ್ವಾಮಿ ಸ್ವಾಗತಿಸಿದರು. ನಾಗಯ್ಯ ಸ್ವಾಮಿ ವಂದಿಸಿದರು.

Ghantepatrike kannada daily news Paper

Leave a Reply

error: Content is protected !!